ಪುತ್ತೂರು: ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಧರಣಿ ಸತ್ಯಾಗ್ರಹ

Update: 2023-01-24 13:08 GMT

ಪುತ್ತೂರು: ರಾಜ್ಯ ರಸ್ತೆ ಸಾರಿಗೆ ನೌಕರರ ಮೂಲ ವೇತನ ಶ್ರೇಣಿ ಹೆಚ್ಚಳ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಸ್ಟಾಫ್ ಮತ್ತು ವರ್ಕಸ್ ಯೂನಿಯನ್ ಪುತ್ತೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಕೋಚಣ್ಣ ಪೂಜಾರಿ ಅವರು 2016 ರಲ್ಲಿ ಅಂದಿನ ರಾಜ್ಯ ಸರಕಾರವು ಶೇ.12.5 ರಷ್ಟು ವೇತನ ಹೆಚ್ಚಳ ಮಾಡಿತ್ತು. ಅನಂತರ ಏಳು ವರ್ಷ ಕಳೆದರೂ ವೇತನ ಪರಿಷ್ಕರಣೆ ಮಾಡಲಾಗಿಲ್ಲ. ಆಯಾ ರೂಟ್‍ಗಳಲ್ಲಿ ಸಂಚರಿಸುವ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ನಿಗದಿತಕ್ಕಿಂತ ಹೆಚ್ಚಾಗಿದ್ದರೂ ಸಂಸ್ಥೆ ನಷ್ಟದಲ್ಲಿದೆ ಎನ್ನುವ ಹೇಳಿಕೆ ನೀಡಿ ನೌಕರರ ಬದುಕಿನಲ್ಲಿ ಸರಕಾರ ಚೆಲ್ಲಾಟವಾಡುತ್ತಿದೆ. ನಮ್ಮ ಪರಿಸ್ಥಿತಿಯನ್ನು ಯಾರೂ ಕೇಳದ ಸ್ಥಿತಿ ಉಂಟಾಗಿದೆ. ಇದಕ್ಕಿಂತ ಕೂಲಿ ಕೆಲಸವೇ ಲೇಸು ಎನ್ನುವಂತಾಗಿದೆ. ತಿಂಗಳ ಅರ್ಧದಲ್ಲಿ ಖರ್ಚಿಗೆ ದುಡ್ಡಿಲ್ಲದ ಸ್ಥಿತಿ ಉಂಟಾಗಿದೆ ಎಂದರು.

ನಿವೃತ್ತ ಚಾಲಕ ಹೆನ್ರಿ ಗಲ್ಭಾವೋ ಮಾತನಾಡಿ, ಕೋವಿಡ್ ಕಾಲದಲ್ಲಿ ನೌಕರರಿಗೆ ರಜೆ ನೀಡಿ ವೇತನ ನೀಡಲಾಗಿದೆ ಎಂದು ಸಂಸ್ಥೆಯು ಹೇಳಿಕೆ ನೀಡಿತ್ತು. ಆದರೆ ವಾಸ್ತವ ವಿಚಾರವೇ ಬೇರೆ. ನೌಕರರ ಇಎಲ್ ಕಡಿತ ಮಾಡಿ ಅದಕ್ಕೆ ವೇತನ ನೀಡುವ ಮೂಲಕ ನೌಕರರ ಹಕ್ಕನ್ನೇ ಕಿತ್ತುಕೊಂಡಿದ್ದರು. ಕೋವಿಡ್ ಕಾಲದಲ್ಲಿ ಯಾವುದೇ ನೌಕರರಿಗೆ ಸರಕಾರ ರಜೆ ಸಹಿತ ವೇತನ ನೀಡಿಲ್ಲ. ನೌಕರರ ಪಾಲಿಗೆ ಪತ್ರಿಕಾ ಹೇಳಿಕೆಗಳಲ್ಲಿ ಸಿಹಿ ನೀಡಿ ವಾಸ್ತವವಾಗಿ ಕಹಿ ಉಣಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಧರಣಿಯಲ್ಲಿ ಕೆಎಸ್ಸಾರ್ಟಿಸಿ ನೌಕರರ ಫೆಡರೇಷನ್‍ನ ಅಧ್ಯಕ್ಷ ದಿನೇಶ್ ಸಿ.ಎಚ್., ನಿವೃತ್ತ ನೌಕರ ಅನಿಲ್ ಪಾಯಸ್, ಎಸ್ಸಿ ಆಂಡ್ ಎಸ್.ಟಿ ನೌಕರರರ ಎಂಪ್ಲಾಯಿಸ್ ಉಪಾಧ್ಯಕ್ಷ ಬಾಬು ಮೇರ, ಸ್ಟಾಫ್ ಮತ್ತು ವರ್ಕಸ್ ಯೂನಿಯನ್ ಪುತ್ತೂರು ವಿಭಾಗದ ಅಧ್ಯಕ್ಷ ಹೇಮ ಪಿಂಟೋ, ಉಪಾಧ್ಯಕ್ಷ ಸಂತೋಷ್ ಭಟ್, ಜತೆ ಕಾರ್ಯದರ್ಶಿ ಮ್ಯಾಕ್ಸ್ ಬ್ರೋನಿ, ಘಟಕ ಕಾರ್ಯದರ್ಶಿ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು. 

ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್, ಕೆಎಸ್ಸಾರ್ಟಿಸಿ ಎಸ್ಸಿ ಮತ್ತು ಎಸ್ಟಿ ಎಂಪ್ಲಾಯಿಸ್ ಯೂನಿಯನ್, ಎನ್.ಇ.ಕೆ.ಆರ್.ಟಿ.ಸಿ ಎಸ್ಸಿ ಮತ್ತು ಎಸ್ಟಿ ಎಂಪ್ಲಾಯಿಸ್ ಅಸೋಸಿಯೇಶನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕೆಎಸ್ಸಾರ್ಟಿಸಿ ಆಂಡ್ ಐಎಂಟಿಸಿ ಯುನೈಟೆಡ್ ಎಂಪ್ಲಾಯಿಸ್ ಯೂನಿಯನ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ/ಪ.ಪಂಗಳ ಅ„ಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಧರಣಿಯಲ್ಲಿ ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರಿಗೆ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.

Similar News