ಮಂಗಳೂರು: ಕೆಎಸ್ಸಾರ್ಟಿಸಿ ನೌಕರರ ಪ್ರತಿಭಟನೆ

Update: 2023-01-24 13:22 GMT

ಮಂಗಳೂರು: ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಮಂಗಳವಾರ ನಗರ ಬಿಜೈ ಸರಕಾರಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್‌ ಯೂನಿಯನ್ (ಎಐಟಿಯುಸಿ)ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ರಾಜ್ಯ ಸರಕಾರಿ ನೌಕರರು, ಮೆಸ್ಕಾಂ ಸಹಿತ ಇತರ ನಿಗಮಗಳ ಸಿಬ್ಬಂದಿಯ ವೇತನ ಹೆಚ್ಚಳ ಮಾಡಲಾಗಿದೆ. ಆದರೆ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಿಲ್ಲ ಎಂದು ಆರೋಪಿಸಿದರು.

ಸರಕಾರದ ತಪ್ಪು ನೀತಿಗಳಿಂದಾಗಿ ನಿಗಮಕ್ಕೆ ನಷ್ಟವುಂಟಾಗುತ್ತಿದೆ. ಹಳೆಯ ಬಸ್‌ಗಳ ಬದಲು ಹೊಸ ಬಸ್‌ಗಳನ್ನು ಹಾಕಿಲ್ಲ. ಸಿಬ್ಬಂದಿಯ ನೇಮಕಾತಿ ಮಾಡುತ್ತಿಲ್ಲ. ಸಿಬ್ಬಂದಿಯ ಮೇಲೆ ಕರ್ತವ್ಯದ ಒತ್ತಡ ಹೆಚ್ಚುತ್ತಿದೆ. ಹಾಗಾಗಿ ವೇತನ ಪರಿಷ್ಕರಣೆ ಮಾಡಬೇಕು, ಮುಷ್ಕರ ಸಂದರ್ಭ ವಜಾಗೊಂಡ ನೌಕರರನ್ನು ಷರತ್ತಿಲ್ಲದೆ ಪುನಃ ನೇಮಕ ಮಾಡಬೇಕು. ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರವೀಣ್ ಕುಮಾರ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ರಫಾಯಲ್ ಡಿಸೋಜ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ವಿಜಯ ಕುಮಾರ್, ಬಾಲಕೃಷ್ಣ, ನಿಗಮದ ಪರಿಶಿಷ್ಟ ಜಾತಿ, ಪಂಗಡಗಳ ನೌಕರರ ಸಂಘದ ಅಧ್ಯಕ್ಷ ಹರೀಶ್ಚಂದ್ರ ಪಾಲ್ಗೊಂಡಿದ್ದರು.

Similar News