ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸಿಎಂ ಬೊಮ್ಮಾಯಿಗೆ ಮನವಿ

Update: 2023-01-24 17:04 GMT

ಬೆಂಗಳೂರು, ಜ.24: ವೇತನ ಹೆಚ್ಚಳ, ಆರೋಗ್ಯ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕೆಎಸ್ಸಾರ್ಟಿಸಿ ಸಾಫ್ಟ್ ಆಂಡ್ ವರ್ಕರ್ಸ್ ಫೆಡರೇಷನ್ ನೇತೃತ್ವದಲ್ಲಿ ಸಾರಿಗೆ ನೌಕರರು ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ಕೈಗೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಿದ ಸಾರಿಗೆ ನೌಕಕರರು, ತಮ್ಮ ಡಿಪೋಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ವಲಯಗಳಲ್ಲೂ ಏಕಕಾಲಕ್ಕೆ  ಹೋರಾಟ ನಡೆಸಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಕಾರ್ಮಿಕ ಮುಖಂಡರು ಮಾಹಿತಿ ನೀಡಿದ್ದಾರೆ.

ಫೆಡರೇಷನ್ ಮುಖಂಡ ವಿಜಯ ಭಾಸ್ಕರ್ ಮಾತನಾಡಿ, ‘ರಾಜ್ಯ ಸರಕಾರ ಸಾರಿಗೆ ನೌಕರರನ್ನು ಸಂಪೂರ್ಣ ಕಡೆಗಣಿಸಿದೆ. ನೌಕರರಿಗೆ ಕೂಡಲೇ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು. ಎಲ್ಲ್ಲ ನೌಕರರಿಗೆ ಗ್ರಾಚ್ಯೂಟಿ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಹೀಗೆ ಸರಕಾರ ಸಾರಿಗೆ ನೌಕರರ ಅಗತ್ಯತೆಗಳನ್ನು ಈಡೇರಿಸುವ ಮೂಲಕ ನೌಕರರು ಸದೃಢ ಜೀವನ ನಡೆಸಲು ನೆರವು ನೀಡಬೇಕು ಎಂದು ಆಗ್ರಹಿಸಿದರು.

ಸಾರಿಗೆ ನೌಕರರ ರಾಜ್ಯವ್ಯಾಪ್ತಿ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಬಸ್ ಸಂಚಾರದಲ್ಲಿ ವ್ಯತ್ಯಯ ಆಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಸತ್ಯಾಗ್ರಹದ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಿದ್ದರಿಂದ ಬಸ್‍ಗಳ ಸಂಚಾರದಲ್ಲಿ ಯಾವುದೆ ವ್ಯತ್ಯಯ ಕಂಡು ಬರಲಿಲ್ಲ.

Similar News