ಪ್ರವಾಸೋದ್ಯಮ: ಆರ್ಥಿಕ ಮತ್ತು ಸಾಂಸ್ಕೃತಿಕ ಮಹತ್ವ

ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ

Update: 2023-01-25 05:21 GMT

ದೇಶದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಭಾರತ ಸರಕಾರ ಜನವರಿ 25ನ್ನು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸುತ್ತದೆ. ದೇಶದೊಳಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ಅದರ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಮೌಲ್ಯದ ಕುರಿತು ಮನವರಿಕೆ ಮಾಡಿಕೊಡುವ ದಿನ ಇದಾಗಿದೆ.

ಪ್ರವಾಸೋದ್ಯಮ ಎಂಬುದು ಬೇರೆ ಬೇರೆ ಸಂಸ್ಕೃತಿ, ಭಾಷೆ, ಧರ್ಮಗಳ ಜನರನ್ನು ಒಟ್ಟುಗೂಡಿಸುವ ಒಂದು ವೇದಿಕೆಯೂ ಹೌದು. ಇದು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದವನ್ನೂ ಬೆಳೆಸುತ್ತದೆ. ಆದ್ದರಿಂದಲೇ ಪ್ರವಾಸೋದ್ಯಮವನ್ನು ಜಗತ್ತಿನ ಅದ್ಭುತವಾದ ಶಾಂತಿ ಅಭಿಯಾನ ಎಂದೇ ಹೇಳಲಾಗುತ್ತದೆ.

ಪ್ರವಾಸೋದ್ಯಮ ಹಿಂದೆಂದಿ ಗಿಂತಲೂ ಹೆಚ್ಚು ಬೃಹತ್ ಆಗಿ ಬೆಳೆಯುತ್ತಿದೆ. ಅದು ದೇಶವೊಂದರ ಆರ್ಥಿಕ ಸ್ಥಿತಿಗತಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಪ್ರವಾಸೋದ್ಯಮವನ್ನೇ ನಂಬಿ ಅದರಲ್ಲೇ ಆದಾಯ ಕಂಡುಕೊಳ್ಳುತ್ತಿರುವ ದೇಶಗಳು ಹಲವಾರು ಇವೆ. ಭಾರತದಲ್ಲೂ ಪ್ರವಾಸೋದ್ಯಮ ಸಾಕಷ್ಟು ಮುಂದುವರಿದಿದೆ. ದೇಶವನ್ನು ಪ್ರಮುಖ ಪ್ರವಾಸೋದ್ಯಮ ರಾಷ್ಟ್ರವನ್ನಾಗಿಸುವ ಪ್ರಯತ್ನಗಳು ಭರದಿಂದ ಸಾಗುತ್ತಿವೆ. ಈ ಪ್ರಯತ್ನದ ಒಂದು ಭಾಗವಾಗಿಯೂ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆಗೆ ಮಹತ್ವವಿದೆ.

1948ರಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸಿ ಸಂಚಾರ ಸಮಿತಿಯನ್ನು ರಚಿಸಲಾಯಿತು. ಅದೇ ಮೊದಲ ಪ್ರಾದೇಶಿಕ ಕಚೇರಿಗಳನ್ನು ದಿಲ್ಲಿ ಮತ್ತು ಮುಂಬೈನಲ್ಲಿ ಸ್ಥಾಪಿಸಲಾಯಿತು. ಮೂರು ವರ್ಷಗಳ ನಂತರ 1951ರಲ್ಲಿ ಕೋಲ್ಕತಾ ಮತ್ತು ಚೆನ್ನೈನಲ್ಲಿ ಹೆಚ್ಚಿನ ಕಚೇರಿಗಳನ್ನು ಸ್ಥಾಪಿಸಲಾಯಿತು. ಪ್ರವಾಸೋದ್ಯಮ ಮತ್ತು ಸಂವಹನ ಸಚಿವಾಲಯದ ಅಡಿಯಲ್ಲಿ ನಿರ್ದಿಷ್ಟವಾಗಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಇಲಾಖೆಯನ್ನು 1958ರಲ್ಲಿ ಸ್ಥಾಪಿಸಲಾಯಿತು.

ಪ್ರವಾಸೋದ್ಯಮವು ನಮ್ಮಲ್ಲಿ ಕೋಟ್ಯಂತರ ಆದಾಯ ತರುವ ವಲಯವಾಗಿದೆ. ದೇಶದ ಜಿಡಿಪಿಯ ದೊಡ್ಡ ಪಾಲು ಇದರಿಂದಲೇ ಬರುತ್ತದೆ. ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ಪ್ರತೀ ವರ್ಷ ದೇಶಕ್ಕೆ ಲಕ್ಷಾಂತರ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ನಮ್ಮಲ್ಲಿ ಅನೇಕರು ನಮ್ಮ ದೇಶದಲ್ಲಿ ನೋಡಲು ಎಷ್ಟು ಸುಂದರ ತಾಣಗಳಿವೆ ಎಂಬುದನ್ನೂ ತಿಳಿದುಕೊಳ್ಳದೆ ವಿದೇಶದಲ್ಲಿನ ಆಕರ್ಷಣೀಯ ತಾಣಗಳಿಗೆ ಭೇಟಿ ನೀಡುವ ಕನಸು ಕಾಣುತ್ತಾರೆ. ಆದರೆ ಭಾರತ ಮಾತ್ರ ವರ್ಷದಿಂದ ವರ್ಷಕ್ಕೆ ಅನೇಕ ವಿದೇಶಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತಿದೆ. ಇಸ್ರೇಲ್, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್‌ನ ಜನರು ಭಾರತವನ್ನು ಅದರ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗಾಗಿ ಹೆಚ್ಚು ಇಷ್ಟಪಡುತ್ತಾರೆ. ಆಗ್ರಾದ ತಾಜ್‌ಮಹಲ್, ದಿಲ್ಲಿಯ ಕುತುಬ್ ಮಿನಾರ್, ಸಾಂಚಿಯ ಪ್ರಾಚೀನ ಸ್ತೂಪಗಳು ಮತ್ತು ಗೋವಾದ ಪಾರ್ಟಿ ಹಬ್‌ನಂತಹ ದೊಡ್ಡ ಆಕರ್ಷಣೆಗಳೊಂದಿಗೆ ಭಾರತವು ರಜಾದಿನಗಳಿಗೆ ಹೇಳಿ ಮಾಡಿದಂತಹ ತಾಣವಾಗುತ್ತಿದೆ.

ಭಾರತದಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮವು ಹೆಚ್ಚಿನ ಸಂಖ್ಯೆಯ ಉದ್ಯೋಗಗಳಿಗೆ ಕಾರಣವಾಗುತ್ತಿದೆ. ಕೋಟಿಗಟ್ಟಲೆ ಮಂದಿ ಈ ವಲಯವನ್ನು ಅವಲಂಬಿಸಿದ್ದಾರೆ. ದೇಶದ ಅತಿದೊಡ್ಡ ಉದ್ಯೋಗ ಒದಗಿಸುವ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿನ ಕೆಲಸಗಾರರಿಂದ ಹಿಡಿದು ಐತಿಹಾಸಿಕ ಸ್ಮಾರಕಗಳಲ್ಲಿನ ಮಾರ್ಗದರ್ಶಿಗಳು ಮತ್ತು ವಾಹನ ನಿರ್ವಾಹಕರು, ಸ್ಮಾರಕ ನೋಡಿಕೊಳ್ಳುವವರು, ಅಂಗಡಿ ಮಾಲಕರವರೆಗೆ ಹಲವಾರು ಜನರ ಬದುಕು ಪ್ರವಾಸೋದ್ಯಮವನ್ನೇ ನೆಚ್ಚಿ ನಡೆದಿದೆ.

ಭಾರತವು ಪ್ರಪಂಚ ದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂಬುದು ನಿಜ, ಆದರೆ ಕೆಲವು ದೇಶಗಳು ನಮ್ಮ ದೇಶದ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿವೆ. ಭಾರತಕ್ಕೆ ಅತೀಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುವವರು ಅಮೆರಿಕದವರು, ನಂತರ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ಇವೆ.

ಭಾರತವು ಜಗತ್ತಿನಾದ್ಯಂತದ ಜನರಿಗೆ ಸದಾ ನೆಚ್ಚಿನ ತಾಣವಾಗಿಯೇ ಇದೆ. ಪ್ರಪಂಚದಾದ್ಯಂತದ ಹೆಚ್ಚು ಹೆಚ್ಚು ಜನರು ಭಾರತದತ್ತ ಒಲವು ತೋರಿಸುತ್ತಿದ್ದಾರೆ ಮತ್ತು ದೇಶದ ಈ ಸುಂದರವಾದ ಗಮ್ಯಸ್ಥಾನಕ್ಕೆ ಪ್ರವಾಸಗಳನ್ನು ಯೋಜಿಸಲು ಪ್ರಾರಂಭಿಸಿದ್ದಾರೆ. ಇವೆಲ್ಲವೂ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಒಂದು ಉತ್ತೇಜಕ ಸಮಯವಾಗಿ ಮಾರ್ಪಾಟಾಗಿದೆ.

ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳಿಗೆ ಅನುಕೂಲವಾಗುವ ಸಾಮರ್ಥ್ಯವಿರುವ ಪರಿಸರ ಪ್ರವಾಸೋದ್ಯಮ ಕೂಡ ತೀವ್ರಗತಿಯಲ್ಲಿ ಬೆಳೆಯುತ್ತಿರುವುದು ಮತ್ತೊಂದು ವಿಶೇಷ. ಏರುತ್ತಿರುವ ಇದರ ಜನಪ್ರಿಯತೆ ಅನೇಕ ರೀತಿಯ ಸಂಶೋಧನೆಗಳಿಗೆ ಅನುವು ಮಾಡಿಕೊಟ್ಟಿದೆ.

ಜಗತ್ತಿನ ಕೆಲವೇ ಕೆಲವು ಅಗಾಧ ವೈವಿಧ್ಯತೆಯುಳ್ಳ ದೇಶಗಳಲ್ಲಿ ಒಂದಾದ ಭಾರತದಲ್ಲಿ ಪರಿಸರ ಪ್ರವಾಸೋದ್ಯಮ ದೇಶದಾದ್ಯಂತ ಬಿರುಸಾಗಿ ಬೆಳೆದಿರುವುದು ಅಚ್ಚರಿಯ ವಿಷಯವೇನಲ್ಲ. ಆದರೂ, ಪರಿಸರ ಪ್ರವಾಸೋದ್ಯಮ ಯಾವಾಗಲೂ ಪರಿಸರಕ್ಕೆ ಪೂರಕವಾಗಿರುವುದಿಲ್ಲ. ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಒಂದೇ ಜಾಗದಲ್ಲಿ ಸೇರುವುದರಿಂದ ನಾಜೂಕಾದ ನೈಸರ್ಗಿಕ ವ್ಯವಸ್ಥೆಗಳ ಮಳೆ ವ್ಯತಿರಿಕ್ತ ಪರಿಣಾಮ ಬೀರಬಹುದು ಮತ್ತು ಸ್ಥಳೀಯ ಸಮುದಾಯಗಳನ್ನು ಹೊರತುಪಡಿಸಬಹುದು. ಹೀಗಿದ್ದೂ, ಪರಿಸರ ಪ್ರವಾಸೋದ್ಯಮ ಹೆಚ್ಚಾದಷ್ಟೂ ಅದರ ಬಗ್ಗೆ ಸಂಶೋಧನೆಗಳೂ ಹೆಚ್ಚಾಗಿವೆ.

ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ ಹೇಳುವಂತೆ, ಭಾರತದ ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಲವಾರು ಅಧ್ಯಯನಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಪ್ರವಾಸೋದ್ಯಮದ ಸಾಮಾಜಿಕ, ನೈಸರ್ಗಿಕ ಮತ್ತು ಆರ್ಥಿಕ ಅಂಶಗಳಿಗೆ ಸಂಬಂಧಿಸಿದ ಮೂರು ಪ್ರಮುಖ ವಿಷಯಗಳನ್ನು ಅವರು ಮನಗಂಡಿದ್ದಾರೆ. ಮೊದಲನೆಯದಾಗಿ, ಕೆಲವು ನಿರ್ದಿಷ್ಟ ಅಭಯಾರಣ್ಯಗಳಲ್ಲಿ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಯ ಸಾಧ್ಯತೆ. ಎರಡನೆ ಯದಾಗಿ, ಸದ್ಯದ ಪರಿಸರ ಪ್ರವಾಸೋದ್ಯಮದ ಸ್ಥಿತಿಯ ಪ್ರಭಾವ ನಿಸರ್ಗದ ಮೇಲೆ ಸುಸ್ಥಿರವಾಗಿರುವಂತೆ ಇಲ್ಲ ಎಂದು ಅಧ್ಯಯನಗಳಿಂದ ತಿಳಿದುಬಂದಿರುವುದು. ಮೂರನೆಯ ದಾಗಿ, ಕೆಲವು ಸಂಶೋಧನೆಗಳಿಂದ ತಿಳಿದು ಬಂದಿರುವುದೇನೆಂದರೆ, ವನ್ಯಜೀವಿ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳಿಗೆ ಅನುಕೂಲವಾಗುವಂತಹ ಪರಿಸರ ಪ್ರವಾಸೋದ್ಯಮ ಉಪಕ್ರಮಗಳನ್ನು ಕೈಗೊಳ್ಳುವುದು.

ಪರಿಸರ ಪ್ರವಾಸೋದ್ಯಮವನ್ನು ಏಕೆ ಶುರು ಮಾಡಲಾಗಿದೆ ಎಂದೂ ಸಂಶೋಧಕರು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಎರಡು ದೊಡ್ಡ ಪ್ರೇರಣೆಗಳು ಪರಿಸರ ಪ್ರವಾಸೋದ್ಯಮದ ಹಿಂದಿವೆ: ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿ. ಪರಿಸರ ಸಂರಕ್ಷಣೆ, ಸ್ಥಳೀಯರ ಸಹಭಾಗಿತ್ವ, ಸಮುದಾಯ ಅಭಿವೃದ್ಧಿ ಮತ್ತು ಅರಿವು ಮೂಡಿಸುವ ಶಿಕ್ಷಣಗಳಂತಹ ಪರಿಸರ ಪ್ರವಾಸೋ ದ್ಯಮದ ಬಹುಮುಖ್ಯ ಪ್ರೇರಣೆಗಳಿಗೆ ಸಂಬಂಧಿಸಿದ್ದಾಗಿದೆ ಇದು.

ಭಾರತದಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂಶೋಧನೆ ಬೆಳೆಯುತ್ತಾ ಬಂದರೂ, ಪರಿಸರ ಪ್ರವಾಸೋದ್ಯಮದ ಹೆಸರನ್ನು ಲಾಭಗಳಿಕೆಯನ್ನು ಹೆಚ್ಚಿಸಲು ದುರ್ಬಳಕೆ ಮಾಡಿಕೊಳ್ಳಬಹುದಾದ ಅಪಾಯವಿರುವುದರ ಬಗ್ಗೆಯೂ ಸಂಶೋಧಕರು ಆತಂಕ ವ್ಯಕ್ತಪಡಿಸುತ್ತಾರೆ. ವನ್ಯಜೀವಿ ಮೇಲ್ವಿಚಾರಣೆ, ಮಾನವ-ವನ್ಯಜೀವಿ ಹೊಂದಾ ಣಿಕೆ ಇವೆಲ್ಲದರ ಕುರಿತ ಅಧ್ಯಯನಗಳು ಈ ನಿಟ್ಟಿನಲ್ಲಿ ಮಹತ್ವದ್ದಾಗಿವೆ ಎನ್ನುತ್ತಾರೆ ಪರಿಣಿತರು.

Similar News