‘ಗುಜರಾತ್ ಗಲಭೆ ಪೂರ್ವಯೋಜಿತವಾಗಿತ್ತು’: ಹಿಂಸಾಚಾರದ ಕುರಿತು ಬ್ರಿಟಿಷ್ ತನಿಖೆಯ ವರದಿ

Update: 2023-01-25 14:50 GMT

ಹೊಸದಿಲ್ಲಿ: ಗುಜರಾತಿನಲ್ಲಿ 2002ರಲ್ಲಿ ಸಂಭವಿಸಿದ್ದ ಗಲಭೆಗಳ ಕುರಿತು ಬ್ರಿಟಿಷ್ ಸರಕಾರವು ನಡೆಸಿದ್ದ ತನಿಖೆಯ ವರದಿಯ ಪ್ರತಿಯು ತನಗೆ ಲಭ್ಯವಾಗಿದ್ದು, ಸಂಪೂರ್ಣ ಹಿಂಸಾಚಾರವು ಪೂರ್ವಯೋಜಿತವಾಗಿತ್ತು ಎನ್ನುವುದನ್ನು ಅದು ಬೆಟ್ಟು ಮಾಡಿದೆ ಎಂದು 'The Caravan' ಬಹಿರಂಗಗೊಳಿಸಿದೆ. ಇತ್ತೀಚಿನ ಬಿಬಿಸಿಯ (BBC) ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ನಲ್ಲಿ ಈ ವರದಿಯನ್ನು ಉಲ್ಲೇಖಿಸಲಾಗಿದೆ. ಹಿಂದು ರಾಷ್ಟ್ರವಾದಿ ಸಂಘಟನೆ ವಿಶ್ವ ಹಿಂದು ಪರಿಷತ್ (VHP) ಈ ಹಿಂಸಾಚಾರವನ್ನು ‘ಯೋಜಿಸಿತ್ತು, ಬಹುಶಃ ತಿಂಗಳುಗಳ ಮೊದಲೇ’ ಎಂದು ಹೇಳಿರುವ ವರದಿಯು, 2002, ಫೆ.27ರ ಗೋಧ್ರಾದಲ್ಲಿ ರೈಲು ಬೋಗಿ ದಹನವು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೆಪವನ್ನೊದಗಿಸಿತ್ತು. ಈ ಘಟನೆ ನಡೆದಿರದಿದ್ದರೂ ಅವರು ಅಂತಹುದೇ ಇನ್ನೊಂದು ನೆಪವನ್ನು ಕಂಡುಕೊಳ್ಳುತ್ತಿದ್ದರು ಎಂದು ಒತ್ತಿ ಹೇಳಿದೆ.

ಹಿಂಸಾಚಾರವು ಪೂರ್ವಯೋಜಿತವಾಗಿತ್ತು ಎನ್ನುವುದಕ್ಕೆ ಪುರಾವೆಗಳನ್ನು ತನಿಖಾ ವರದಿಯು ಉಲ್ಲೇಖಿಸಿದೆ. ಮುಸ್ಲಿಮರ ಮನೆಗಳು ಮತ್ತು ವ್ಯವಹಾರಗಳನ್ನು ಗುರಿಯಾಗಿಸಿಕೊಳ್ಳಲು ದಂಗೆಕೋರರು ಕಂಪ್ಯೂಟರೀಕೃತ ಪಟ್ಟಿಗಳನ್ನು ಬಳಸಿದ್ದರು ಎನ್ನುವುದನ್ನು ಪೊಲೀಸ್ ಸಂಪರ್ಕಗಳು ದೃಢಪಡಿಸಿವೆ. ಅಲ್ಪಸಂಖ್ಯಾತ ಮುಸ್ಲಿಮರ ಪಾಲುದಾರಿಕೆಯ ವ್ಯವಹಾರಗಳು ಸೇರಿದಂತೆ ಈ ಪಟ್ಟಿಗಳ ನಿಖರತೆ ಮತ್ತು ವಿವರಗಳು ಅವುಗಳನ್ನು ಮುಂಚಿತವಾಗಿ ಸಿದ್ಧಗೊಳಿಸಲಾಗಿತ್ತು ಎನ್ನುವುದನ್ನು ಸೂಚಿಸುತ್ತಿವೆ ಎಂದು ಅದು ಬೆಟ್ಟು ಮಾಡಿದೆ. ವಿಹಿಂಪ ನೇತೃತ್ವದಲ್ಲಿ ಹಿಂದು ಪ್ರದೇಶಗಳನ್ನು ಮುಸ್ಲಿಮ್ ಮುಕ್ತಗೊಳಿಸಿ ‘ಶುದ್ಧೀಕರಿಸುವುದು’ ಈ ಯೋಜನೆಯ ಹಿಂದಿನ ಉದ್ದೇಶವಾಗಿತ್ತು ಎಂದು ವರದಿಯು ಒತ್ತಿ ಹೇಳಿದೆ.

‘ಮುಖ್ಯಮಂತ್ರಿ ನರೇಂದ್ರ ಮೋದಿಯವರೇ ನೇರವಾಗಿ ಹೊಣೆಯಾಗಿದ್ದಾರೆ’ ಎಂದು ಹೇಳುವ ಮೂಲಕ ವರದಿಯು ಗುಜರಾತ್ ಸರಕಾರದ ಮೇಲೆ ದೋಷಾರೋಪ ಮಾಡಿದೆ.
ವಿಹಿಂಪ ಮತ್ತು ಅದರ ಮಿತ್ರ ಸಂಘಟನೆಗಳು ರಾಜ್ಯ ಸರಕಾರದ ಬೆಂಬಲದೊಂದಿಗೆ ಕಾರ್ಯಾಚರಿಸಿದ್ದವು. ರಾಜ್ಯ ಸರಕಾರವು ಸೃಷ್ಟಿಸಿದ್ದ ನಿರ್ಭೀತಿಯ ವಾತಾವರಣ ಇಲ್ಲದೇ ಅವರು ಅಷ್ಟೊಂದು ಹಾನಿಯನ್ನುಂಟು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯಮಂತ್ರಿ ನರೇಂದ್ರ ಮೋದಿ ನೇರವಾಗಿ ಹೊಣೆಗಾರರಾಗಿದ್ದಾರೆ. ಅವರ ಕ್ರಮಗಳು ಕೇವಲ ರಾಜಕೀಯ ಲಾಭದ ಸಿನಿಕತನದ ಮೌಲ್ಯಮಾಪನದಿಂದ ನಿರ್ದೇಶಿಸಲ್ಪಟ್ಟಿರಲಿಲ್ಲ. ಬಿಜೆಪಿಯು 1995ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಅನುಸರಿಸಿಕೊಂಡು ಬಂದಿರುವ ಹಿಂದು ರಾಷ್ಟ್ರವಾದಿ ಅಜೆಂಡಾದ ಶಿಲ್ಪಿಯಾಗಿ ಮೋದಿ ವಿಹಿಂಪನ ಸೈದ್ಧಾಂತಿಕ ಪ್ರೇರಣೆಯಲ್ಲಿ ನಂಬಿಕೆಯನ್ನು ಹೊಂದಿದ್ದಾರೆ ಎಂದು ವರದಿಯು ಹೇಳಿದೆ.

ಹಿಂಸಾಚಾರದ ಭಾರೀ ಪ್ರಮಾಣದ ಕುರಿತು ಅವಲೋಕನಗಳನ್ನೂ ಮಾಡಿರುವ ವರದಿಯು, ಮುಸ್ಲಿಮ್ ಮಹಿಳೆಯರ ಅತ್ಯಾಚಾರದಲ್ಲಿ ಪೊಲೀಸರ ಪಾಲ್ಗೊಳ್ಳುವಿಕೆಯನ್ನು ಬೆಟ್ಟು ಮಾಡಿದೆ. ವಿಶ್ವಾಸಾರ್ಹ ಮಾನವ ಹಕ್ಕು ಕಾರ್ಯಕರ್ತರ ಸಂಪರ್ಕಗಳಿಂದ ಪಡೆದಿರುವ ಮಾಹಿತಿಗಳ ಆಧಾರದಲ್ಲಿ ಅಂದಾಜು 2,000 ಜನರು ಗಲಭೆಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಹಲವು ಪ್ರದೇಶಗಳಲ್ಲಿ ಹತ್ಯೆಗಳು ಮುಸ್ಲಿಮ್ ಮಹಿಳೆಯರ ವ್ಯಾಪಕ ಮತ್ತು ವ್ಯವಸ್ಥಿತ ಅತ್ಯಾಚಾರದ ಜೊತೆಯೇ ನಡೆದಿದ್ದವು, ಕೆಲವೊಮ್ಮೆ ಪೊಲೀಸರೂ ಅತ್ಯಾಚಾರಗಳನ್ನು ನಡೆಸಿದ್ದರು ಎಂದಿರುವ ವರದಿಯು, ಗಲಭೆಗಳನ್ನು ಅಡಗಿಸಲು ತಾವು ಕ್ರಮ ಕೈಗೊಳ್ಳುವುದನ್ನು ರಾಜ್ಯ ಸರಕಾರದ ಒತ್ತಡವು ನಿರ್ಬಂಧಿಸಿತ್ತು ಎನ್ನುವುದನ್ನು ಪೊಲೀಸ್ ಸಂಪರ್ಕಗಳು ಒಪ್ಪಿಕೊಂಡಿವೆ ಎಂದು ಹೇಳಿದೆ.

ಹೆಚ್ಚಿನ ಗುಜರಾತಿ ಭಾಷಿಕ ಮಾಧ್ಯಮಗಳು ಹಿಂಸಾಚಾರವನ್ನು ಭುಗಿಲೆಬ್ಬಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದವು. ಮುಸ್ಲಿಂ ವಿರೋಧಿ ಭಾವನೆಯನ್ನು ಉತ್ತೇಜಿಸುವ ವಿಷಪೂರಿತ ವದಂತಿಗಳು ಮತ್ತು ಅಪಪ್ರಚಾರವನ್ನು ಪ್ರಕಟಿಸುವ ಯಾವುದೇ ಅವಕಾಶವನ್ನು ಈ ಮಾಧ್ಯಮಗಳು ಬಿಟ್ಟಿರಲಿಲ್ಲ ಎಂದೂ ವರದಿಯು ಹೇಳಿದೆ.

ಇದನ್ನು ಓದಿ: ಜನರು ದೂರದರ್ಶನವನ್ನು ನಂಬದೇ ಇದ್ದರೂ, BBCಯನ್ನು ನಂಬುತ್ತಾರೆ: ಪ್ರಧಾನಿ ಮೋದಿಯ ಹಳೆಯ ವೀಡಿಯೊ ವೈರಲ್

Similar News