ಆರ್ಥಿಕ ಅಕ್ರಮ ತಡೆಗೆ ಡಿ.ಎಲ್.‌ ಸುರೇಶಬಾಬು ಸಲಹೆ

Update: 2023-01-25 14:51 GMT

ಬೆಂಗಳೂರು: ಲೆಕ್ಕ ಪರಿಶೋಧಕರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನವಿದೆ. ಆರ್ಥಿಕ ಅಕ್ರಮಗಳನ್ನು ತಡೆಗಟ್ಟುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಿ ವೃತ್ತಿ ಗೌರವ ಕಾಪಾಡಿ ಎಂದು ಖ್ಯಾತ ಹಿರಿಯ ಲೆಕ್ಕ ಪರಿಶೋಧಕ ಡಿ.ಎಲ್.‌ ಸುರೇಶಬಾಬು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಸಂತನಗರ ಡಾ. ಬಿ.ಆರ್.‌ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಜರುಗಿದ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ- ಐಸಿಎಐ ಘಟಿಕೋತ್ಸವದಲ್ಲಿ ಸಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಭಾರತದ ಸಿಎಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಶ್ವಮಟ್ಟದಲ್ಲಿ ಪ್ರಬಲವಾಗಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಇಂದು ಲೆಕ್ಕಪರಿಶೋಧಕರಗಳಿಗೆ ಹಿಂದೆಗಿಂತಲೂ ತುಂಬಾ ಮಹತ್ವ ಪಾತ್ರವಿದೆ. ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ವಿನಯ ಮತ್ತು ಪ್ರಾಮಾಣಿಕತೆ ಅಳವಡಿಸಿಕೊಳ್ಳುವ ಜೊತೆಗೆ ಕಠಿಣ ಪರಿಶ್ರಮದಿಂದ ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಎಂದರು.

ಪ್ರತಿನಿತ್ಯವೂ ಹೊಸದನ್ನು ಕಲಿಬೇಕಾದ ವೃತ್ತಿ

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಕೇಂದ್ರ ಪರಿಷತ್ತಿನ ಸದಸ್ಯ ಕೋತಾಸ್‌ ಎಸ್.‌ ಶ್ರೀನಿವಾಸ್‌ ಮಾತನಾಡಿ, ಪ್ರತಿನಿತ್ಯ ಹೊಸದನ್ನು ಕಲಿಯಬೇಕಾದ ಲೆಕ್ಕಪರಿಶೋಧಕರ ವೃತ್ತಿಗೆ ಅಗಾಧ ಅ‍ಧ್ಯಯನ ಅವಶ್ಯ. ಇಲ್ಲಿ ಕಲಿಕೆ ನಿರಂತರ ಪ್ರವಾಹದಂತೆ. ಕಾಲಕಾಲಕ್ಕೆ ಬದಲಾಗುವ ಪಠ್ಯಕ್ರಮಗಳನ್ನು ಮತ್ತು ಹೊಸ ಕಾಯ್ದೆಗಳನ್ನು ಅಧ್ಯಯನ ಮಾಡುವ ಅಗತ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಸಂಸ್ಥೆಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಹೇಳಿದರು. 

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷ ಟಿ. ಶ್ರೀನಿವಾಸ್‌ ಮಾತನಾಡಿ, ಸಮಾಜ ಲೆಕ್ಕಪರಿಶೋಧಕರ ಮೇಲಿಟ್ಟಿರುವ ಅಪಾರ ನಂಬಿಕೆಗೆ ದ್ರೋಹ ಎಸಗದಂತೆ ವೃತ್ತಿ ನಿರ್ವಹಿಸಬೇಕು ಎಂದರು. 

ಇದೇ ವೇಳೆ ಸಿ.ಎ. ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸುವ ಜೊತೆಗೆ ಒಂದು ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಘಟಿಕೋತ್ಸವದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಬೆಂಗಳೂರು ಘಟಕದ ಕಾರ್ಯದರ್ಶಿ ಪ್ರಮೋದ್‌ ಆರ್‌. ಹೆಗಡೆ, ಮಂಡಳಿಯ ಸದಸ್ಯೆ ಎ.ಬಿ. ಗೀತಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.  

ದೇಶದ ಆರ್ಥಿಕತೆಗೆ ವೇಗ ಪಥ: ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್‌

ವರ್ಚುವಲ್‌ ಮೂಲಕ ಹೈದ್ರಾಬಾದ್‌ ನಲ್ಲಿ ನಡೆದ ಐಸಿಎಐ ಘಟಿಕೋತ್ಸವದಲ್ಲಿ ಮಾತನಾಡಿದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್‌, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಆರ್ಥಿಕತೆಯು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಭಾರತದ ಆರ್ಥಿಕತೆಗೆ ಈ ವರ್ಷವು ಐತಿಹಾಸಿಕ ವರ್ಷವಾಗಿದೆ. ಕನಿಷ್ಟ ಬೆಳವಣಿಗೆ, ಗರಿಷ್ಟ ಹಣದುಬ್ಬರ ಮತ್ತು ಕುಂಠಿತ ಉತ್ಪಾದನೆಯ ಅವಧಿಯಲ್ಲಿದ್ದ ಭಾರತವನ್ನು ಕೇಂದ್ರ ಸರ್ಕಾರವು ಮೇಲೆತ್ತಿದ್ದಷ್ಟೇ ಅಲ್ಲದೆ, ಅತಿಸೂಕ್ಷ್ಮ ಆರ್ಥಿಕ ಮೂಲಾಂಶಗಳನ್ನು ಸರಿಪಡಿಸುವ ಮೂಲಕ ಅರ್ಥಿಕ ಬೆಳವಣಿಗೆಗೆ ಭರ್ಜರಿ ಉತ್ತೇಜನ ನೀಡಿದೆ. ಇದು ಜಗತ್ತಿನ ಬಲಾಢ್ಯ ದೇಶಗಳ ಪೈಕಿ ಭಾರತವನ್ನು ಅತಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿ ಮುಂಚೂಣಿಯಲ್ಲಿ ನಿಲ್ಲಿಸಿದೆ ಎಂದರು.

Similar News