3,455.39 ಕೋಟಿ ರೂ.ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ: ಸಚಿವ ಮುರುಗೇಶ್ ನಿರಾಣಿ

Update: 2023-01-25 18:29 GMT

ಬೆಂಗಳೂರು, ಜ.25: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಜನೆಗೆ ಮತ್ತಷ್ಟು ಗಮನಹರಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 59 ಯೋಜನೆಗಳ 3,455.39 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ.

ನಗರದ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ 137ನೆ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಒಟ್ಟು 59 ಯೋಜನೆಗಳಿಂದ 3,455.39 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 18,567 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ.ಗಳಿಗಿಂತ ಹೆಚ್ಚು ಬಂಡವಾಳ ಹೂಡಿಕೆಯ 11 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 2186.70 ಕೋಟಿ  ರೂ.ಬಂಡವಾಳ ಹೂಡಿಕೆಯಾಗಿ 10,559 ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಅವರು ಹೇಳಿದ್ದಾರೆ.

15 ಕೋಟಿ ರೂ.ಗಳಿಂದ 50 ಕೋಟಿ ರೂ.ಒಳಗಿನ ಬಂಡವಾಳ ಹೂಡಿಕೆಯ 46 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 1049.19 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 8,008 ಜನರಿಗೆ ಉದ್ಯೋಗ ಸೃಜನೆಯಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಎರಡು ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 219.50 ಕೋಟಿ ರೂ.ಹೂಡಿಕೆಯಾಗಲಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಅನುಮೋದನೆ ನೀಡಿರುವ ಪ್ರಸ್ತಾವನೆಗಳು: ಮೈಸೂರ್ ಸ್ಟೀಲ್ಸ್ ಲಿಮಿಟೆಡ್‍ನವರು ಮೈಸೂರಿನ ಮೇಟಗಾನಹಳ್ಳಿಯಲ್ಲಿ 405.43 ಕೋಟಿ ರೂ. ಹೂಡಿಕೆ ಮಾಡಲಿದ್ದು 200 ಉದ್ಯೋಗ 200 ಸೃಷ್ಟಿ ಮಾಡಲಿದೆ. ಎನ್.ಐ.ಡಿ.ಇ.ಸಿ ಇಂಡಸ್ಟ್ರೀಯಲ್ ಆಟೋಮೋಷನ್ ಇಂಡಿಯಾ ಲಿಮಿಟೆಡ್ ಕೋಟುರ್ ಬೇಲೂರ್ ಇಎಂಸಿ ಕೈಗಾರಿಕಾ ಪ್ರದೇಶದಲ್ಲಿ 350 ಕೋಟಿ ರೂ. ಹೂಡಿಕೆ ಮಾಡಲಿದ್ದು, 730 ಉದ್ಯೋಗ ಸೃಷ್ಟಿಯಾಗಲಿದೆ.

ಸಿಲಾನ್ ಬಿವೆರೇಜ್ ಲಿಮಿಟೆಡ್‍ನವರು ಧಾರವಾಡದಲ್ಲಿರುವ ಎಫ್.ಎಮ್.ಸಿ.ಜಿ.ಕ್ಲಸ್ಟರ್ ವಲಯದಲ್ಲಿ 256.3 ಕೋಟಿ ರೂ. ಹೂಡಿಕೆ ಮಾಡಲಿದ್ದು, 200 ಉದ್ಯೋಗ ಸೃಷ್ಟಿಯಾಗಲಿದೆ. ಬಾಲಾಜಿ ವೇರರ್ಸ್ ಪ್ರೈ ಲಿಮಿಟೆಡ್ ನವರು ಬೆಳಗಾವಿ ಜಿಲ್ಲೆಯ ಕಣಗಲ್  ಕೈಗಾರಿಕಾ ಪ್ರದೇಶದಲ್ಲಿ 251.25 ಕೋಟಿ ರೂ. ಹೂಡಿಕೆ ಮಾಡಲಿದ್ದು, 500 ಉದ್ಯೋಗ ಸೃಷ್ಟಿ ಮಾಡಲಿದ್ದಾರೆ.

ಮಂಜುಶ್ರೀ ಟೆಕ್ನೋಪಾರ್ಕ್ ಲಿಮೆಟೆಡ್‍ನವರು ಚಾಮರಾಜನಗರದ ಬಡಗುಪ್ಪೆ, ಕೆಲ್ಲಂಬಳ್ಳಿ, ಕೈಗಾರಿಕಾ ಪ್ರದೇಶದಲ್ಲಿ 253 ಕೋಟಿ ರೂ. ಹೂಡಿಕೆ ಮಾಡಲಿದ್ದು, 500 ಉದ್ಯೋಗ ಸೃಷ್ಟಿ ಮಾಡಲಿದ್ದಾರೆ. ಕ್ಸಿಸೋಡ ಇಂಡಿಯಾ ಪ್ರೈ ಲಿಮಿಟೆಡ್ ನವರು ತುಮಕೂರು ಜಿಲ್ಲೆಯ ಶಿರಾ ಕೈಗಾರಿಕಾ ಪ್ರದೇಶದಲ್ಲಿ 138 ಕೋಟಿ ರೂ. ಹೂಡಿಕೆ ಮಾಡಲಿದ್ದು, 160 ಉದ್ಯೋಗ ಸೃಷ್ಟಿಸಲಿದ್ದಾರೆ.

ಮಹಾಮಾನವ್ ಇನ್‍ಸ್ಪಾಟ್ ಪ್ರೈ ಲಿಮೆಟೆಡ್ ನವರು ಬಳ್ಳಾರಿಯ ಬೆಳಗಲ್ ಗ್ರಾಮದಲ್ಲಿ 90 ಕೋಟಿ ರೂ.ಹೂಡಿಕೆ ಮಾಡಲಿದ್ದು, 90 ಉದ್ಯೋಗ ಸೃಷ್ಟಿಯಾಗಲಿದೆ. ಎ.ಸಿ.ಆರ್.ಪ್ರಾಜೆಕ್ಟ್  ನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ನೆಲಮಂಗಲ ತಾಲೂಕಿನಲ್ಲಿ 85 ಕೋಟಿ ರೂ.ಹೂಡಿಕೆ ಮಾಡಲಿದ್ದು, 350 ಉದ್ಯೋಗ ಸೃಷ್ಟಿಯಾಗಲಿದೆ.

ನಿಯೋಬಿ ಸಲ್ಯೂಷನ್ ಪ್ರೈ ಲಿಮಿಟೆಡ್‍ನವರು ಧಾರವಾಡದ ಎಎಲ್‍ಜಿಸಿ ಕ್ಲಸ್ಟರ್, ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 50 ಕೋಟಿ ರೂ.ಹೂಡಿಕೆ ಮಾಡಲಿದ್ದು, 563 ಉದ್ಯೋಗ ಸೃಷ್ಟಿಯಾಗಲಿದೆ. ಅಭಯ್ ಆಗ್ರೋ ಫುಡ್ ಪ್ರೈ.ಲಿಮಿಟೆಡ್ ನವರು ಕೊಪ್ಪಳ ಜಿಲ್ಲೆಯ ಗಬಾರ ಗ್ರಾಮದಲ್ಲಿ 32.65 ಕೋಟಿ ರೂ.ಹೂಡಿಕೆ ಮಾಡಲಿದ್ದು, 35 ಉದ್ಯೋಗ ಸೃಷ್ಟಿಯಾಗಲಿದೆ.

Similar News