‘ಅಶೋಕ ಚಕ್ರ’ದಿಂದ ಆರಂಭ...

Update: 2023-01-26 06:06 GMT

ಭಾರತದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರವು ಬಿಳಿ ಬಣ್ಣದ ಹಿನ್ನೆಲೆಯಲ್ಲಿ ನೀಲಿ ಬಣ್ಣದಲ್ಲಿ ಚಿತ್ರಿತವಾಗಿದೆ. ವಾಸ್ತವವಾಗಿ ಭಾರತ ಸಂವಿಧಾನದ ಪೀಠಿಕೆ ಶುರುವಾಗುವುದೂ ಅಶೋಕ ಚಕ್ರದ ಮೂಲಕವೇ. ಚಿಂತಕ ರಹಮತ್ ತರೀಕೆರೆಯವರು ಹೇಳುವಂತೆ, ‘‘ಅಶೋಕ ಎಂದರೆ ದುಃಖರಾಹಿತ್ಯ. ನೆತ್ತರ ಕಾಳಗಕ್ಕೆ ಹೇಸಿ ಅಹಿಂಸೆಯನ್ನು ಮೌಲ್ಯವಾಗಿ ಒಪ್ಪಿಕೊಂಡ ಚಕ್ರವರ್ತಿಯೊಬ್ಬನ ಹೆಸರಲ್ಲಿರುವ ಈ ಚಿಹ್ನೆಗೆ ಬೌದ್ಧ ಹಿನ್ನೆಲೆಯಿದೆ. ಚಲನೆಯ ಸಂಕೇತವಾದ ಚಕ್ರದ ಶೋಧವು ಮಾನವನ ನಾಗರಿಕತೆಯ ವಿಕಾಸದಲ್ಲಿ ಕ್ರಾಂತಿಕಾರಕ ಪಲ್ಲಟಗಳನ್ನು ತಂದಿತಷ್ಟೆ. ಬುದ್ಧನ ಧರ್ಮಚಕ್ರದ ಕಲ್ಪನೆಯಲ್ಲೂ ಲೋಕದ ಬಾಳು ನಿರಂತರ ಪರಿವರ್ತನಶೀಲವಾಗಿದೆ ಎಂಬ ತತ್ವವಿದೆ; ಬಾಳು ವ್ಯಕ್ತಿಯದಾಗಿರಲಿ, ನಾಡಿನದಾಗಿರಲಿ ನಿಲ್ಲಬಾರದು, ನಿಂತು ಸ್ಥಾವರಗೊಂಡರೆ ಪತನವಾಗುತ್ತದೆ ಎಂಬ ಧ್ವನಿಯಿದೆ.’’

ಅಶೋಕ ಚಕ್ರದ ಬಗ್ಗೆ ಒಂದಿಷ್ಟು...

► ಅಶೋಕ ಚಕ್ರವು ‘ಧರ್ಮಚಕ್ರ’ದ ಚಿತ್ರಣ.

► ಅಶೋಕ ಚಕ್ರವನ್ನು ಕರ್ತವ್ಯದ ಚಕ್ರ ಎಂದೂ ಕರೆಯಲಾಗುತ್ತದೆ.

► ತ್ರಿವರ್ಣ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವನ್ನು ಜುಲೈ 22, 1947ರಂದು ಅಳವಡಿಸಲಾಯಿತು.

► ತ್ರಿವರ್ಣ ಧ್ವಜದಲ್ಲಿ ಮೊದಲು ಚರಕವನ್ನು ಚಿತ್ರಿಸಲಾಗಿತ್ತು. ಆನಂತರ ಅಶೋಕ ಚಕ್ರವನ್ನು ಚಿತ್ರಿಸಲು ನಿರ್ಧರಿಸಲಾಯಿತು.

► ಅಶೋಕನ ಹಲವಾರು ಶಾಸನಗಳಲ್ಲಿ ಕಂಡುಬರುವ ‘ತಿರುಗುವ ಚಕ್ರ’ವನ್ನು ಅಶೋಕ ಚಕ್ರ ಎಂದು ಕರೆಯಲಾಗುತ್ತದೆ, ಅವುಗಳಲ್ಲಿ ಪ್ರಮುಖವಾದ ಅಶೋಕನ ಸಿಂಹ ರಾಷ್ಟ್ರ ಲಾಂಛನವಾಗಿದೆ.

► ಅಶೋಕ ಚಕ್ರದ ಕಡ್ಡಿಗಳು ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಪ್ರತಿನಿಧಿಸುವುದರಿಂದ ಈ ಚಕ್ರವನ್ನು ‘ಸಮಯದ ಚಕ್ರ’ ಎಂದೂ ಕರೆಯಲಾಗುತ್ತದೆ.

►ಅಶೋಕ ಚಕ್ರದ ಕಡ್ಡಿಗಳು ಧೈರ್ಯ, ತಾಳ್ಮೆ, ಸ್ವಯಂ ತ್ಯಾಗ, ಸತ್ಯ, ಸದಾಚಾರ, ಪ್ರೀತಿ, ಆಧ್ಯಾತ್ಮಿಕ ಜ್ಞಾನ, ನೈತಿಕತೆ, ಕಲ್ಯಾಣ, ಉದ್ಯಮ, ಸಮೃದ್ಧಿ ಮತ್ತು ನಂಬಿಕೆಯಂತಹ ತತ್ವಗಳನ್ನು ಪ್ರತಿನಿಧಿಸುತ್ತವೆ.

ಅಶೋಕ ಚಕ್ರದ ಒಂದರಿಂದ 24ರವರೆಗಿನ ಗೆರೆಗಳ ಅರ್ಥ ಕ್ರಮವಾಗಿ ಹೀಗಿದೆ:

ಮೊದಲ ಗೆರೆ: ಪರಿಶುದ್ಧತೆ - ಸರಳ ಮತ್ತು ಪರಿಶುದ್ಧ ಜೀವನ ನಡೆಸಲು ಪ್ರೇರೇಪಿಸುತ್ತದೆ.

ಎರಡನೇ ಗೆರೆ: ಆರೋಗ್ಯ - ದೇಹ ಮತ್ತು ಮನಸ್ಸು ಆರೋಗ್ಯವಾಗಿರಲು ಪ್ರೇರೇಪಿಸುತ್ತದೆ.

ಮೂರನೇ ಗೆರೆ: ಶಾಂತಿ - ದೇಶದಾದ್ಯಂತ ಶಾಂತಿ ಮತ್ತು ಸೌಹಾರ್ದ ಕಾಪಾಡಲು ಕರೆ ನೀಡುವ ಗೆರೆ

ನಾಲ್ಕನೇ ಗೆರೆ: ತ್ಯಾಗ - ದೇಶ ಮತ್ತು ಸಮಾಜಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದು ಸಾರುತ್ತದೆ.

ಐದನೇ ಗೆರೆ: ನೈತಿಕತೆ - ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಉನ್ನತ ನೈತಿಕತೆಯನ್ನು ಕಾಪಾಡಿಕೊಳ್ಳುವಂತೆ ಸಂದೇಶ ನೀಡುತ್ತದೆ.

ಆರನೇ ಗೆರೆ: ಸೇವೆ - ಅಗತ್ಯವಿದ್ದಾಗ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಿದ್ಧರಾಗಿರಿ ಎಂಬ ಸಂದೇಶ ನೀಡುತ್ತದೆ.

ಏಳನೇ ಗೆರೆ: ಕ್ಷಮೆ - ಮನುಷ್ಯರು ಮತ್ತು ಇತರ ಜೀವಿಗಳೊಂದಿಗೆ ಕ್ಷಮೆಯ ಭಾವನೆ ಬೆಳೆಸುವಂತೆ ಪ್ರೇರೇಪಿಸುತ್ತದೆ.

ಎಂಟನೇ ಗೆರೆ: ಪ್ರೀತಿ, ದೇಶ ಮತ್ತು ಸೃಷ್ಟಿಯ ಎಲ್ಲಾ ಜೀವಿಗಳಿಗೂ ಪ್ರೀತಿ ತೋರುವುದೇ ಈ ರೇಖೆಯ ಸಂದೇಶ.

ಒಂಬತ್ತನೇ ಗೆರೆ: ಸ್ನೇಹ - ಎಲ್ಲಾ ಪ್ರಜೆಗಳೊಂದಿಗೆ ಸ್ನೇಹ ಮತ್ತು ಸೌಹಾರ್ದಯುತ ಸಂಬಂಧ ಬೆಳೆಸಲು ಈ ಗೆರೆ ಕರೆ ನೀಡುತ್ತದೆ.

ಹತ್ತನೇ ಗೆರೆ: ಭ್ರಾತೃತ್ವ - ದೇಶದಲ್ಲಿ ಸಹೋದರತ್ವ ಭಾವನೆಯನ್ನು ಬೆಳೆಸಲು ಇದು ಪ್ರೇರಕ.

ಹನ್ನೊಂದನೇ ಗೆರೆ: ಸಂಘಟನೆ, ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಒಟ್ಟಾಗಿ ಬಲಪಡಿಸಲು ಕರೆ ನೀಡುತ್ತದೆ.

ಹನ್ನೆರಡನೇ ಗೆರೆ: ಕಲ್ಯಾಣ - ದೇಶ ಮತ್ತು ಸಮಾಜಕ್ಕೆ ಸಂಬಂಧಿಸಿದ ಕಲ್ಯಾಣ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಸೂಚಿಸುತ್ತದೆ.

ಹದಿಮೂರನೇ ಗೆರೆ: ಸಮೃದ್ಧಿ - ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂಬ ಸಂದೇಶ ನೀಡುತ್ತದೆ.

ಹದಿನಾಲ್ಕನೇ ಗೆರೆ: ಕೈಗಾರಿಕೆ - ದೇಶದ ಕೈಗಾರಿಕಾ ಪ್ರಗತಿಯಲ್ಲಿ ನೆರವಾಗಲು ಕರೆ ನೀಡುತ್ತದೆ.

ಹದಿನೈದನೇ ಗೆರೆ: ಸುರಕ್ಷತೆ - ದೇಶದ ರಕ್ಷಣೆಗೆ ಸದಾ ಸಿದ್ಧವಾಗಿರಲು ಕರೆ ನೀಡುತ್ತದೆ.

ಹದಿನಾರನೇ ಗೆರೆ: ಅರಿವು ಅಥವಾ ಜಾಗೃತಿ - ಸತ್ಯದ ಬಗ್ಗೆ ಸದಾ ಜಾಗೃತರಾಗಿರಿ ಮತ್ತು ವದಂತಿಗಳನ್ನು ನಂಬಬೇಡಿ ಎಂದು ತಿಳಿಸುತ್ತದೆ.

ಹದಿನೇಳನೇ ಗೆರೆ: ಸಮಾನತೆ - ಸಮಾನತೆಯ ಆಧಾರದ ಮೇಲೆ ಸಮಾಜದ ಸ್ಥಾಪನೆ.

ಹದಿನೆಂಟನೇ ಗೆರೆ: ಅರ್ಥ - ಹಣದ ಸರಿಯಾದ ಬಳಕೆ. ಇದು ಅರ್ಥ ವ್ಯವಸ್ಥೆಯ ಬಗ್ಗೆ ಇರುವ ಗೆರೆಯಾಗಿದೆ.

ಹತ್ತೊಂಬತ್ತನೇ ಗೆರೆ: ನೀತಿ - ದೇಶದ ನೀತಿಯಲ್ಲಿ ನಂಬಿಕೆ ಇಡುವುದು.

ಇಪ್ಪತ್ತನೇ ಗೆರೆ: ನ್ಯಾಯ - ಎಲ್ಲರಿಗೂ ನ್ಯಾಯ ಒದಗಿಸುವ ಬಗ್ಗೆ ಮಾತನಾಡುವುದು ಮತ್ತು ಪಾಲಿಸುವುದು.

 ಇಪ್ಪತ್ತೊಂದನೇ ಗೆರೆ: ಸಹಕಾರ- ಜೊತೆಯಾಗಿ ಕೆಲಸ ಮಾಡುವುದು.

ಇಪ್ಪತ್ತೆರಡನೇ ಗೆರೆ: ಕರ್ತವ್ಯಗಳು - ನಿಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸುವುದು.

 ಇಪ್ಪತ್ತಮೂರನೇ ಗೆರೆ: ಹಕ್ಕುಗಳು - ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ.

ಇಪ್ಪತ್ತನಾಲ್ಕನೇ ಗೆರೆ: ಬುದ್ಧಿವಂತಿಕೆ - ಪುಸ್ತಕಗಳನ್ನು ಓದಲು ಇದು ಪ್ರೇರೇಪಿಸುತ್ತದೆ.

Similar News