ಭಾರತವು ಗಣರಾಜ್ಯೋತ್ಸವ ದಿನದ ಮುಖ್ಯ ಅತಿಥಿಯನ್ನು ಆಯ್ಕೆ ಮಾಡುವುದು ಹೇಗೆ?

ಈ ಆಹ್ವಾನಕ್ಕೆ ಇಷ್ಟು ಮಹತ್ವವೇಕೆ?

Update: 2023-01-26 17:15 GMT

ಹೊಸದಿಲ್ಲಿ: ಗುರುವಾರ ದಿಲ್ಲಿಯಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ (Abdel Fattah El-Sisi, President of Egypt) ಅವರು ಮುಖ್ಯ ಅತಿಥಿಯಾಗಿದ್ದರು. ಬುಧವಾರ ಸಿಸಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತವನ್ನು ನೀಡಲಾಗಿತ್ತು. ಬಳಿಕ ಅವರು ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ವ್ಯಾಪಕ ಮಾತುಕತೆಗಳನ್ನು ನಡೆಸಿದ್ದರು.ಸಿಸಿ ಭಾರತದ ಗಣರಾಜ್ಯ ದಿನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಈಜಿಪ್ಟ್ ನ ಮೊದಲ ಉನ್ನತ ನಾಯಕರಾಗಿದ್ದಾರೆ.

ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆ ದೇಶದ ಐತಿಹಾಸಿಕ ಮತ್ತು ಸಾಂಸ್ಕ್ರತಿಕ ಅಂಶಗಳಲ್ಲಿ ಮಹತ್ವದ್ದಾಗಿದೆ. ಯಾವ ದೇಶದ ಮುಖ್ಯಸ್ಥರನ್ನು ಗಣರಾಜ್ಯ ದಿನಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಬೇಕು ಎನ್ನುವುದನ್ನು ನಿರ್ಧರಿಸುವ ಮುನ್ನ ಬಹಳಷ್ಟು ಪ್ರಕ್ರಿಯೆಗಳು ನಡೆಯುತ್ತವೆ.

ಮುಖ್ಯ ಅತಿಥಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿರುವುದು ಭಾರತವು ಯಾವುದೇ ದೇಶದ ಮುಖ್ಯಸ್ಥರಿಗೆ ನೀಡುವ ಅತ್ಯುನ್ನತ ಗೌರವವಾಗಿದೆ. ಜ.26ಕ್ಕೆ ಆರು ತಿಂಗಳು ಮೊದಲೇ ಆಯ್ಕೆ ಮತ್ತು ಅತಿಥಿಗಳ ಶಾರ್ಟ್ ಲಿಸ್ಟ್ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ.

ಅತಿಥಿಯನ್ನು ನಿರ್ಧರಿಸುವಲ್ಲಿ ಬಹಳಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಮತ್ತು ಸಂಬಂಧಿತ ದೇಶದೊಂದಿಗೆ ಭಾರತದ ಸಂಬಂಧವು ಈ ಅಂಶಗಳಲಿ ಅತ್ಯಂತ ಮುಖ್ಯವಾಗಿರುತ್ತದೆ.

ಆ ದೇಶದೊಂದಿಗೆ ಅತ್ಯುನ್ನತ ಸ್ನೇಹವನ್ನು ಸೂಚಿಸುವ ಆಹ್ವಾನವನ್ನು ಕಳುಹಿಸುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ(Ministry of External Affairs)ವು ಈ ವಿಶ್ಲೇಷಣೆಯನ್ನು ನಡೆಸುತ್ತದೆ. ಭಾರತದ ರಾಜಕೀಯ, ವಾಣಿಜ್ಯಿಕ, ಮಿಲಿಟರಿ ಮತ್ತು ಆರ್ಥಿಕ ಹಿತಾಸಕ್ತಿಗಳು ನಿರ್ಧಾರವನ್ನು ಕೈಗೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುತ್ತವೆ ಮತ್ತು ಎಂಇಎ ಈ ಎಲ್ಲ ವಿಷಯಗಳಲ್ಲಿ ಆಹ್ವಾನಿತರ ದೇಶದೊಂದಿಗೆ ಸಂಬಂಧಗಳನ್ನು ಬಲಗೊಳಿಸಲು ಈ ಸಂದರ್ಭವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತದೆ.

ಜೊತೆಗೆ, 1950ರ ದಶಕದ ಅಂತ್ಯದಲ್ಲಿ ಆರಂಭಗೊಂಡಿದ್ದ ಅಲಿಪ್ತ ಚಳವಳಿಯೊಂದಿಗೆ ಆ ದೇಶವು ಹೊಂದಿರುವ ಸಂಬಂಧವು ಪರಿಗಣನೆಯಲ್ಲಿ ಐತಿಹಾಸಿಕವಾಗಿ ಮಹತ್ವದ ಪಾತ್ರವನ್ನು ವಹಿಸುತ್ತಿರುವ ಇನ್ನೊಂದು ನಿರ್ಣಾಯಕ ಅಂಶವಾಗಿದೆ. ಆಗ ವಸಾಹತುಶಾಹಿಯಿಂದ ಹೊಸದಾಗಿ ಮುಕ್ತಗೊಂಡಿದ್ದ ದೇಶಗಳು ಶೀತಲ ಸಮರದಿಂದ ದೂರವಿರಲು ಅಲಿಪ್ತ ಚಳವಳಿಯನ್ನು ಆರಂಭಿಸಿದ್ದವು. ಹೀಗಾಗಿ ನಾವು ಹಿಂದಿರುಗಿ ನೋಡಿದರೆ ಅಲಿಪ್ತ ಚಳವಳಿಯ ಸ್ಥಾಪಕ ಸದಸ್ಯ ದೇಶಗಳಲ್ಲಿ ಒಂದಾಗಿದ್ದ ಇಂಡೋನೇಶ್ಯಾದ ಅಧ್ಯಕ್ಷ ಸುಕರ್ಣೊ ಅವರು ಭಾರತದ ಗಣರಾಜ್ಯೋತ್ಸವದ ಮೊದಲ ಮುಖ್ಯ ಅತಿಥಿಯಾಗಿದ್ದರು.

ಈ ಎಲ್ಲ ಅಂಶಗಳನ್ನು ಆಧರಿಸಿ ಎಂಇಎ ಮುಖ್ಯ ಅತಿಥಿಗಳ ಆಯ್ಕೆ ಪಟ್ಟಿಯನ್ನು ನಿರ್ಧರಿಸಿದ ಬಳಿಕ ತನ್ನ ಸ್ವಂತ ಅನುಮತಿಯನ್ನು ನೀಡುತ್ತದೆ. ಈ ಅನುಮತಿಯನ್ನು ರವಾನಿಸಿದ ಬಳಿಕ ಆ ದೇಶಗಳಲ್ಲಿಯ ಭಾರತೀಯ ರಾಯಭಾರಿಗಳು ಆ ದೇಶಗಳ ಮುಖ್ಯಸ್ಥರು ಅದಾಗಲೇ ಇತರ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿರುವ ಸಾಧ್ಯತೆಯಿರುವುದರಿಂದ ಆಹ್ವಾನಕ್ಕೆ ಅವರ ಸ್ವೀಕೃತಿಯನ್ನು ಪಡೆದುಕೊಳ್ಳಲು ಅವರ ಕಚೇರಿಗಳೊಂದಿಗೆ ಸಂವಹನದಲ್ಲಿ ತೊಡಗಿಕೊಳ್ಳುತ್ತಾರೆ. ಇದೆಲ್ಲವನ್ನೂ ಅತ್ಯಂತ ವಿವೇಚನೆಯಿಂದ ಮಾಡಲಾಗುತ್ತದೆ. ದೇಶಗಳ ಮುಖ್ಯಸ್ಥರ ಲಭ್ಯತೆಯನ್ನು ಪರಿಗಣಿಸಿ ಎಂಇಎ ಅದಕ್ಕಾಗಿ ಅನೇಕ ಆಯ್ಕೆಗಳನ್ನು ಪರಿಗಣಿಸುತ್ತದೆ.

ಈ ಹಂತವು ಅಂತಿಮಗೊಂಡ ಬಳಿಕ ಅತಿಥಿಯನ್ನು ದೃಡೀಕರಿಸಿ ಭೇಟಿಯ ಶಿಷ್ಟಾಚಾರಗಳನ್ನು ವಿವರಿಸುವ ಪತ್ರವನ್ನು ರವಾನಿಸಲಾಗುತ್ತದೆ. ಇದನ್ನು ಮುಖ್ಯ ಶಿಷ್ಟಾಚಾರ ಅಧಿಕಾರಿಗಳು ಸಿದ್ಧಪಡಿಸುತ್ತಾರೆ. ಭೇಟಿಯ ಸಂದರ್ಭದಲ್ಲಿನ ಎಲ್ಲ ಅಗತ್ಯ ಶಿಷ್ಟಾಚಾರಗಳು ಮತ್ತು ಪ್ರಯಾಣ ಯೋಜನೆಗಳ ವಿವರಗಳನ್ನು ಈ ಪತ್ರವು ಒಳಗೊಂಡಿರುತ್ತದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಎಂಇಎಯಲ್ಲಿನ ಪ್ರಾದೇಶಿಕ ವಿಭಾಗಗಳು ಮಾತುಕತೆಗಳು ಮತ್ತು ಒಪ್ಪಂದಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯವನ್ನು ಆರಂಭಿಸುತ್ತವೆ ಮತ್ತು ಶಿಷ್ಟಾಚಾರ ಮುಖ್ಯಸ್ಥರು ಕಾರ್ಯಕ್ರಮ ಮತ್ತು ಲಾಜಿಸ್ಟಿಕ್ಗಳ ವಿವರಗಳ ಕುರಿತು ಕೆಲಸವನ್ನು ಮುಂದುವರಿಸುತ್ತಾರೆ.

ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗುವುದು ದೇಶವೊಂದರ ಮುಖ್ಯಸ್ಥರಿಗೆ ಸಲ್ಲಿಸುವ ವಿಧ್ಯುಕ್ತ ಗೌರವಕ್ಕಿಂದ ಹೆಚ್ಚಿನದು ಎಂದು ನೋಡಲಾಗುತ್ತದೆ,ಏಕೆಂದರೆ ಅದು ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಮತ್ತು ಬಲಗೊಳಿಸುವಲ್ಲಿ  ಹಾಗೂ ದೀರ್ಘಕಾಲದಲ್ಲಿ ವಿಶ್ವದಲ್ಲಿ ಭಾರತದ ಹಿತಾಸಕ್ತಿಗಳನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಇದನ್ನು ಓದಿ: ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆಗಳು ಗಣರಾಜ್ಯೋತ್ಸವ ಆಚರಣೆಗಳನ್ನು ಮಸುಕಾಗಿಸಿದೆ: ಯುರೋಪಿಯನ್‌ ಯೂನಿಯನ್‌ ಸದಸ್ಯೆ

Similar News