ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 74ನೇ ಗಣರಾಜ್ಯ ಸಂಭ್ರಮ: ವೈವಿಧ್ಯಮಯ ಪಥ ಸಂಚಲನ - ಮನಮೋಹಕ ಸಾಂಸ್ಕೃತಿಕ ನೃತ್ಯ

Update: 2023-01-26 15:40 GMT

ಬೆಂಗಳೂರು, ಜ.26: ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 74ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತೆರೆದ ವಾಹನದಲ್ಲಿ ಪರೇಡ್ ಮೈದಾನದಲ್ಲಿ ಸಂಚರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ವೈವಿಧ್ಯಮಯ ಪಥಸಂಚಲನ ಜರುಗಿತು. ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮವನ್ನು ಪ್ರತಿಬಿಂಬಿಸುವ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಅವುಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಟ್ಯಾಬ್ಲೋ ಹೆಚ್ಚಿನ ಗಮನ ಸೆಳೆಯಿತು. ಸೇನಾಪಡೆ, ಪೊಲೀಸ್ ಸಿಬ್ಬಂದಿಗಳು, ಅಗ್ನಿಶಾಮಕದಳ, ಎನ್‍ಸಿಸಿ ಸೇರಿದಂತೆ ವಿವಿಧ ಪಡೆಗಳಿಂದ ಪಥಸಂಚಲನ ನಡೆಯಿತು.

ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳು ಅಂಬೇಡ್ಕರ್ ಜೀವನ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ವಿಜಯನಗರದಲ್ಲಿರುವ ಬಿಬಿಎಂಪಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ರೈತರಿಗೆ ನಮನ ಸಲ್ಲಿಸುವ ನಮ್ಮ ಭಾರತ ಭಾಗ್ಯವಿದಾತ ಕಾರ್ಯಕ್ರಮ ನಡೆಯಿತು. ಲಗ್ಗೆರೆಯ ಸಿರಿ ಸ್ಕೂಲ್ ಮತ್ತು ವಿಷ್ಣು ಸ್ಕೂಲ್ ವಿದ್ಯಾರ್ಥಿಗಳು ಭಾರತಾಂಬೆ ನಿನ್ನ ಜನ್ಮದಿನ ಎನ್ನುವ ನೃತ್ಯ ರೂಪಕ ಪ್ರಸ್ತುತಪಡಿಸಿದರು. ದಿ ಆರ್ಮಿ ಸರ್ವೀಸ್ ಕಾಪ್ರ್ಸ್ ವತಿಯಿಂದ ಎಎಸ್‍ಸಿ ದಿ ಟೋರ್ನಾಡಸ್ ತಂಡ ಮೋಟಾರ್ ಬೈಕ್ ಸಾಹಸ ಪ್ರದರ್ಶನ ಪ್ರದರ್ಶಿಸಿದರು. ಮೈ ನವಿರೇಳಿಸುವಂತಿದ್ದ ಬೈಕ್ ಸಾಹಸಕ್ಕೆ ನೋಡುಗರು ಮೂಕವಿಸ್ಮಿತರಾದರು. ಭಾಗವಹಿಸಿ ಎಲ್ಲ ತಂಡಗಳಿಗೆ ರಾಜ್ಯಪಾಲರು ಬಹುಮಾನ ವಿತರಿಸಿದರು.

Similar News