ಜೆಡಿಎಸ್ 123 ಅಲ್ಲ, 23 ಸೀಟು ಗೆದ್ದರೆ ಅದೇ ಹೆಚ್ಚು: ಸಿದ್ದರಾಮಯ್ಯ ಟೀಕೆ

''ಬೊಮ್ಮಾಯಿ ಸರ್ಕಾರ ಅಲಿಬಾಬಾ 40 ಜನರ ಚೋರ್ ಸರ್ಕಾರ''

Update: 2023-01-26 16:43 GMT

ಮೈಸೂರು‌,ಜ.26:  'ರಾಜ್ಯದಲ್ಲಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆಲಿಬಾಬಾ 40 ಜನರ ಚೋರ್ ಸರ್ಕಾರ ಇದ್ದಂತೆ. ಇಂತಹ ಸರ್ಕಾರ ಮುಂದೆಂದೂ ಬರಬಾರದು' ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದ ಜೆ.ಕೆ.ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ 'ಪ್ರಜಾಧ್ವನಿ' ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಡೆದಿರುವಷ್ಟು ಭ್ರಷ್ಟಾಚಾರ ಯಾವ ಸರ್ಕಾರದಲ್ಲೂ ನಡೆದಿಲ್ಲ ಎಂದು ಹರಿಹಾಯ್ದರು.

'ಬಿಜೆಪಿ ಸರ್ಕಾರ ಎಷ್ಟು ಬೇಗ ತೊಲಗುತ್ತದೆ ಎಂದು ರಾಜ್ಯದ ಜನರು ಕಾಯುತ್ತಿದ್ದಾರೆ. ಹಾಗಾಗಿ ಸೂರ್ಯಚಂದ್ರ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ' ಎಂದು ಭವಿಷ್ಯ ನುಡಿದರು.

'ಕೋಮುವಾದಿಗಳನ್ನು ದೂರ ಇಡಬೇಕು ಎಂಬ ಉದ್ದೇಶದಿಂದ ನಾವು ಜೆಡಿಎಸ್ ಜೊತೆ ಮೈತ್ರಿಮಾಡಿಕೊಂಡೆವು. ಆದರೆ ಕುಮಾರಸ್ವಾಮಿ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಉಳಿದುಕೊಂಡು ಶಾಸಕರು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.‌ ಹಾಗಾಗಿ ಶಾಸಕರುಗಳು ಇವರಿಂದ ದೂರ ಹೋದರು' ಎಂದು ಹೇಳಿದರು.

'ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪಂಚರತ್ನ ನೆನಪಿಗೆ ಬರಲಿಲ್ಲವೇ? ಈಗ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. 123 ಸೀಟ್ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. 123 ಅಲ್ಲ, 22- 23 ಸೀಟು ಗೆದ್ದರೆ ಅದೇ ಹೆಚ್ಚು' ಎಂದು ಲೇವಡಿ ಮಾಡಿದರು.

'ಕಾಂಗ್ರೆಸ್ ನ 14 ಶಾಸಕರನ್ನು ಸಿದ್ದರಾಮಯ್ಯ ಬಿಜೆಪಿಗೆ ಕಳುಹಿಸಿದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಹಾಗಾದರೆ ಜೆಡಿಎಸ್ ನಿಂದ 3 ಶಾಸಕರು ಬಿಜೆಪಿಗೆ ಹೋದರಲ್ಲ ಕುಮಾರಸ್ವಾಮಿ ಕಳುಹಿಸಿದರೆ. ಇಂತಹ ಮಾತುಗಳನ್ನು ಆಡಲು ನಿಮಗೆ ನಾಚಿಕೆ ಆಗಲ್ಲವೇ?' ಎಂದು ತಿರುಗೇಟು ನೀಡಿದರು.

ಸಮಾವೇಶದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ  ಬಿ.ಕೆ.ಹರಿಪ್ರಸಾದ್,  ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ಆರ್.ಧ್ರುವನಾರಾಯಣ, ಸತೀಶ್ ಜಾರಕಿಹೊಳಿ, ಎಐಸಿಸಿ ಪ್ರಧಾನಕಾರ್ಯದರ್ಶಿ ರೋಸಿ ಜಾನ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರುಗಳಾದ ತನ್ವೀರ್ ಸೇಠ್, ಎಚ್.ಪಿ.ಮಂಜುನಾಥ್, ಡಾ.ಯತೀಂದ್ರ ಸಿದ್ಧರಾಮಯ್ಯ, ಅನಿಲ್ ಚಿಕ್ಕಮಾದು, ಮಾಜಿ ಶಾಸಕರುಗಳಾದ ಎಂ.ಕೆ.ಸೋಮಶೇಖರ್, ವಾಸು, ಕಳಲೆ ಕೇಶವಮೂರ್ತಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್ ನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಸುನೀಲ್ ಬೋಸ್, ರವಿಶಂಕರ್ ಸೇರಿದಂತೆ ಹಲವರು ಉಸ್ಥಿತರಿದ್ದರು.

Similar News