ಚಾಮರಾಜಪೇಟೆ: ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ

Update: 2023-01-26 18:03 GMT

ಬೆಂಗಳೂರು, ಜ.26: ಚಾಮರಾಜಪೇಟೆಯ ಈದ್ಗಾಮೈದಾನದಲ್ಲಿ ಇದೇ ಮೊದಲ ಬಾರಿಗೆ ಬಿಗಿ ಭದ್ರತೆಯಲ್ಲಿ ಗುರುವಾರ 74ನೆ ಗಣರಾಜ್ಯೋತ್ಸವ ಆಚರಿಸಲಾಯಿತು.

ಬೆಂಗಳೂರು ಉತ್ತರ ವಿಭಾಗದ ಅಧಿಕಾರಿ ಡಾ.ಎಂ.ಜೆ.ಶಿವಣ್ಣ ಧ್ವಜಾರೋಹಣ ನೆರವೇರಿಸಿದರು. ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಲಾಗಿತ್ತು. ಈಗ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಿಸಲಾಗಿದೆ. 

ಈ ಸಂದರ್ಭದಲ್ಲಿ ರಾಷ್ಟ್ರಗೀತೆ, ನಾಡಗೀತೆ ಮೊಳಗಿತು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಸ್ಥಳೀಯ ಶಾಸಕ ಝಮೀರ್ ಅಹ್ಮದ್ ಖಾನ್ ಉಪಸ್ಥಿತರಿದ್ದರು. ಸಂತ ತೆರೇಸಾ ಬಾಲಕಿಯರ ಶಾಲೆ, ಚಾಮರಾಜಪೇಟೆಯ ಬಾಲಕಿಯರ ಶಾಲೆ, ಸರಕಾರಿ ಕನ್ನಡ, ಆಂಗ್ಲ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಶಾಲಾ ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗಣರಾಜ್ಯೋತ್ಸವ ಪ್ರಯುಕ್ತ ಈದ್ಗಾ ಮೈದಾನದ ಸುತ್ತಮುತ್ತಲು ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಆರು ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಮೊದಲ ಬಾರಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಈದ್ಗಾ ಮೈದಾನದಲ್ಲಿ ಆಚರಣೆ ಮಾಡಿರುವುದು ಖುಷಿ ತಂದಿದೆ. ನಾನು ಜ.3ರಂದು ಮುಖ್ಯಮಂತ್ರಿ, ಕಂದಾಯ ಸಚಿವರು, ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಗಣರಾಜ್ಯೋತ್ಸವ ಆಚರಣೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೆ. ಅದರಂತೆ, ನಮಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಅವಕಾಶ ಕೋರಿಯೂ ಪತ್ರ ಬರೆದಿದ್ದೆ. ಆದರೆ, ಸರಕಾರ ಅವಕಾಶ ಕೊಟ್ಟಿರಲಿಲ್ಲ. 

ಬಿ.ಝೆಡ್.ಝಮಿರ್ ಅಹ್ಮದ್ ಖಾನ್, ಶಾಸಕ

Similar News