ಬೆಂಗಳೂರು | ಸಿಸಿಬಿ ಪೊಲೀಸರ ಕಾರ್ಯಾಚರಣೆ; ಮಂಗಳೂರು, ಬೆಂಗಳೂರು ಸಹಿತ 15 ವಿವಿಗಳ 6,846 ನಕಲಿ ಅಂಕಪಟ್ಟಿ ಜಪ್ತಿ

ನಕಲಿ ಸಂಸ್ಥೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ನಗರ ಪೊಲೀಸ್ ಆಯುಕ್ತರ ಮನವಿ

Update: 2023-01-27 17:01 GMT

ಬೆಂಗಳೂರು, ಜ. 27: ಮಂಗಳೂರು, ಬೆಂಗಳೂರು, ಗೀತಾಂ, ಜೈನ್ ವಿಹಾರ್ ಹೀಗೆ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳ ವಿವಿಧ ಕೋರ್ಸ್‍ಗಳ ನಕಲಿ ಅಂಕಪಟ್ಟಿ ಜಾಲವನ್ನು ಭೇದಿಸಿ ಓರ್ವನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬರೋಬ್ಬರಿ 6,846 ನಕಲಿ ಅಂಕಪಟ್ಟಿಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹಲವು ವಿಶ್ವ ವಿದ್ಯಾನಿಲಯಗಳ ವಿವಿಧ ಕೋರ್ಸ್‍ಗಳ ನಕಲಿ ಅಂಕಪಟ್ಟಿ ನೀಡುತ್ತಿದ್ದ ರಾಜಾಜಿನಗರದ ನ್ಯೂ ಕ್ಯುಸ್ಟ್ ಟೆಕ್ನಾಲಜೀಸ್, ಜೆಪಿ ನಗರದ ಯಸ್ ಸಿಸ್ಟಮ್ ಕ್ಯುಸ್ಟ್, ಭದ್ರಪ್ಪ ಲೇಔಟ್‍ನ ಆರೂಹಿ ಇನ್ಸ್ಟಿಟ್ಯೂಟ್, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜು ಹಾಗೂ ವಿಜಯನಗರದ ಬೆನಕಾ ಕರೆಸ್ಪಾಂಡೆನ್ಸ್ ಕಾಲೇಜು ಸೇರಿ ಏಕಕಾಲಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ 15 ವಿಶ್ವವಿದ್ಯಾನಿಲಯದ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳ 6,846 ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು. 

ಜಾಲದಲ್ಲಿ ಬಂಧಿತನಾಗಿರುವ ಆರೋಪಿ ಭಗತ್, ಸಿಸ್ಟಂ, ಕ್ವೆಸ್ಟ್ ಟೆಕ್ನಾಲಜಿ ಎಂಬ ಹೆಸರಿನಲ್ಲಿ ಕಂಪೆನಿಯೊಂದನ್ನು ಆರಂಭಿಸಿ ಕಂಪ್ಯೂಟರ್ ಹಾಗೂ ಸಾಫ್ಟ್‍ವೇರ್ ಡೆವ¯ಪ್‍ಮೆಂಟ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಈತನ ಕಂಪೆನಿಯ 5 ಶಾಖೆಗಳ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಆರೋಪಿಯು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಜತೆ ಸಹಭಾಗಿತ್ವ ಮಾಡಿಸಿಕೊಂಡಿರುವುದಾಗಿ ತನ್ನನ್ನು ಸಂಪರ್ಕಿಸುವ ವಿದ್ಯಾರ್ಥಿಗಳಿಗೆ ತಿಳಿಸಿ ವಿವಿಧ ಪದವಿಗಳ ಪದವಿಪತ್ರ ಹಾಗೂ ಅಂಕಪಟ್ಟಿಗಳನ್ನು ನೀಡುತ್ತ ವಂಚನೆ ನಡೆಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ. ದಾಳಿಯ ವೇಳೆ ಕೃತ್ಯಕ್ಕೆ ಬಳಸುತ್ತಿದ್ದ 22 ಲ್ಯಾಪ್‍ಟಾಪ್ ಕಂಪ್ಯೂಟರ್‍ಗಳು, 13 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಅಭ್ಯರ್ಥಿಗಳು ಯಾವುದೇ ರೀತಿಯ ವ್ಯಾಸಂಗ ಮಾಡದೆ ಪರೀಕ್ಷೆಯನ್ನು ಬರೆಯದಿದ್ದರೂ 25 ರಿಂದ 30 ಸಾವಿರ ರೂ. ಗಳಿಗೆ ನಕಲಿ ಅಂಕಪಟ್ಟಿಗಳನ್ನು ಹಾಗೂ ಪದವಿ ಸರ್ಟಿಫಿಕೇಟ್‍ಗಳನ್ನು ತಯಾರಿಸಿ ಆರೋಪಿಗಳು ನೀಡುತ್ತಿದ್ದರು ಎಂದು ತಿಳಿಸಿದರು. 

ದಾಳಿಯ ವೇಳೆ ಸಿಕ್ಕಿಬಿದ್ದಿರುವ ಆರೋಪಿಯು ಹಲವು ವರ್ಷಗಳಿಂದ ವ್ಯವಸ್ಥಿತ ಜಾಲವನ್ನು ಹೊಂದಿ, ವಿವಿಧ ಹೆಸರುಗಳಲ್ಲಿ ಶಿಕ್ಷಣ ಇಲಾಖೆಯಿಂದಾಗಲಿ ಅಥವಾ ವಿವಿಗಳಿಂದ ಯಾವುದೇ ರೀತಿಯ ಅನುಮೋದನೆ ಹಾಗೂ ಪರವಾನಗಿ ಪಡೆಯದೆ ಕಾನೂನುಬಾಹಿರವಾಗಿ ನಕಲಿ ಅಂಕಪಟ್ಟಿಗಳನ್ನು ವಿತರಿಸಿ ಹಣ ಗಳಿಸುತ್ತಿದ್ದ ಎಂದು ಆಯುಕ್ತರು ನುಡಿದರು.

ಎಷ್ಟು ಅಂಕಪಟ್ಟಿ?: ಬಂಧಿತನಿಂದ ಅಣ್ಣಾಮಲೈ ವಿಶ್ವ ವಿದ್ಯಾನಿಲಯದ 193, ಸಿಕ್ಕಿಂ ವಿಶ್ವ ವಿದ್ಯಾನಿಲಯದ 5,497, ಗೀತಂ ಯುನಿವರ್ಸಿಟಿಯ 650, ಬೆಂಗಳೂರು ವಿವಿಯ 1, ಮಂಗಳೂರು ವಿವಿಯ 7 ಸೇರಿ 6,846 ನಕಲಿ ಅಂಕಪಟ್ಟಿಗಳನ್ನು ಜಪ್ತಿ ಮಾಡಲಾಗಿದೆ ಎಂದರು. 

ಎಚ್ಚರವಿರಲಿ: ಎಜುಕೇಷನ್ ಕನ್ಸಲ್ಟಂಟ್, ಕರೆಸ್ಪಾಂಡೆನ್ಸ್ ಕಾಲೇಜು, ಕೋಚಿಂಗ್ ಸೆಂಟರ್ ಮುಂತಾದ ಹೆಸರುಗಳ ಕಚೇರಿಗಳನ್ನು ತೆರೆದು ಸಾರ್ವಜನಿಕರನ್ನು ನಂಬಿಸಿ ಯಾವುದೇ ವ್ಯಾಸಂಗ ಮಾಡದಿದ್ದರೂ ಪರೀಕ್ಷೆ ಬರೆಯದಿದ್ದರೂ ವಿವಿಧ ವಿಶ್ವವಿದ್ಯಾನಿಲಯಗಳ, ವಿವಿಧ ಕೋರ್ಸ್‍ಗಳ ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸ ಮಾಡುವ ಹಲವಾರು ನಕಲಿ ಸಂಸ್ಥೆಗಳು ನಗರದಲ್ಲಿರುವ ಮಾಹಿತಿ ಇದ್ದು, ಈ ಬಗ್ಗೆ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸುವಂತೆ ಪ್ರತಾಪ್‍ರೆಡ್ಡಿ ಅವರು ಮನವಿ ಮಾಡಿದರು

Similar News