ವಸತಿ ಶಾಲೆಗಳನ್ನು ಬಲಪಡಿಸಲು ಅನುದಾನ: ಮುಖ್ಯಮಂತ್ರಿ ಬೊಮ್ಮಾಯಿ

''ಏನೇನು ಕೆಲಸವಾಗಬೇಕು, ಅಭಿವೃದ್ಧಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ: ಪಟ್ಟಿ ಕೊಡಿ''

Update: 2023-01-27 17:12 GMT

ಬೆಂಗಳೂರು, ಜ.27: ವಸತಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಶಾಲೆಗಳಿಗೆ ಏನೇನು ಕೆಲಸವಾಗಬೇಕು, ಅಭಿವೃದ್ಧಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬುದರ ಪಟ್ಟಿ ನೀಡಿದರೆ, ಶಾಲೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆದ ವಿಜ್ಞಾನ ಮೇಳದಲ್ಲಿ ಮಾತನಾಡಿದ ಅವರು, ಸರಕಾರದಿಂದ ವಸತಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದರು.

ವಸತಿ ಹಾಗೂ ಶಿಕ್ಷಣ ಸಂಸ್ಥೆಗಳ ಕಟ್ಟಡ, ಕಾಂಪೌಂಡ್ ಗೋಡೆಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದೇವೆ. ಈಗಾಗಲೇ ಸಚಿವ ಸಂಪುಟ ಸಭೆಗಳಲ್ಲಿ ಹೇಳಿರುವಂತೆ ಮಕ್ಕಳಿಗೆ ಅಗತ್ಯವಿರುವ ವ್ಯವಸ್ಥೆಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಮಾಡಲೇಬೇಕಾದ ಬದಲಾವಣೆಗಳನ್ನು ಕೂಡಲೇ ತನ್ನಿ, ನಂತರ ಉಳಿದ ವಿಷಯಗಳ ಕಡೆಗೆ ಗಮನ ಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಗುತ್ತಿಗೆದಾರರ ಮಧ್ಯಸ್ಥಿಕೆಯಿಂದ ಒಂದು ಶಾಲೆ ನಿರ್ಮಾಣಕ್ಕೆ 30ಕೋಟಿ ರೂ.ಖರ್ಚು ಮಾಡಿದರೂ ಮಕ್ಕಳಿಗೆ ಯಾವ ವ್ಯವಸ್ಥೆಯಾಗಬೇಕೋ ಅದು ಸರಿಯಾಗಿ ಆಗುತ್ತಿಲ್ಲ. 3 ವರ್ಷಗಳಿಂದ ವಿಶೇಷ ಅನುದಾನದಡಿಯಲ್ಲಿ ಮಕ್ಕಳಿಗೆ ಡೆಸ್ಕ್, ಪುಸ್ತಕ ಸೇರಿದಂತೆ ಉಳಿದ ವಿಚಾರಗಳಿಗೆ ಹೆಚ್ಚಿನ ಗಮನ ನೀಡಲು ಪ್ರಾರಂಭಿಸಲಾಗಿದೆ ಎಂದರು.

ಪರಿಶಿಷ್ಠ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಉನ್ನತ ಶಿಕ್ಷಣ, ಗುಣಾತ್ಮಕ ಶಿಕ್ಷಣ, ಎಲ್ಲ್ಲ ವ್ಯವಸ್ಥೆಗಳಿರುವ ವಸತಿ ಶಾಲೆಗಳನ್ನು ನೀಡಬೇಕೆನ್ನುವ ಉದ್ದೇಶದಿಂದ ವಸತಿ ಶಾಲೆಗಳು ಪ್ರಾರಂಭವಾಗಿವೆ. ಇಲ್ಲಿ ಸಾವಿರಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದು, ಈ ಶಾಲೆಗಳ ಮೌಲ್ಯ ಮಾಪನ ಮಾಡಿದಾಗ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಗುಣಮಟ್ಟವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬೇರೆಯವರಿಗಿಂತ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ಕೀಳರಿಮೆ ಹೋಗಿ ಆತ್ಮವಿಶ್ವಾಸ ಜಾಗೃತವಾಗಿವೆ. ಹೀಗಾಗಿ ಈ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದರು. 

ಸಚಿವ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಉತ್ತಮ ಕೆಲಸಗಳಾಗಿವೆ. 3 ಲಕ್ಷ ಶಾಲಾ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಿರುವುದು ದೊಡ್ಡ ಸಾಧನೆ. ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಬಹಳ ದೊಡ್ಡ ಕಾರ್ಯಕ್ರಮವನ್ನು ಸಚಿವರು ಕೈಗೊಂಡಿದ್ದಾರೆ. ಪರಿಶಿಷ್ಠ ಜಾತಿ, ಪಂಗಡ ಜನಾಂಗಕ್ಕೆ ಸೌಲಭ್ಯಗಳನ್ನು ನೀಡಲು ಒತ್ತಾಸೆಯಾಗಿ ಕೆಲಸ ಮಾಡಿದ್ದಾರೆ. ಅವರು ಬಂದ ನಂತರ ಪ್ರತಿ ಮನೆಗೆ 1.75ಲಕ್ಷ ರೂ.ಗಳಿಗೆ ಹೆಚ್ಚಳ, 75 ಯೂನಿಟ್ ಉಚಿತ ವಿದ್ಯುತ್, ಜಮೀನು ಖರೀದಿಗೆ 20.ಲಕ್ಷ ರೂ.ಗಳ ಯೋಜನೆ, ಮೀಸಲಾತಿಯನ್ನು ಎಸ್.ಸಿಗೆ ಶೇ 15ರಿಂದ 17ಕ್ಕೆ ಹಾಗೂ ಎಸ್.ಟಿ ಗೆ  ಶೇ.3 ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಸರಕಾರ ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಪ್ರತಿ ಕ್ಷೇತ್ರಕ್ಕೆ 100 ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕಾರ್ಯಕ್ರಮ ರೂಪಿಸಿದೆ ಎಂದರು. 

ವಿಜ್ಞಾನ ಮೇಳದ ಮೂಲಕ ಅವಕಾಶ ವಂಚಿತ ವರ್ಗದ ಮಕ್ಕಳಲ್ಲಿರುವ ವೈಜ್ಞಾನಿಕ ಮನೋಭಾವವನ್ನು ಬೆಳೆಸಿ ಪ್ರತಿಭೆ ಪ್ರದರ್ಶಿಸಲು ಅನುಕೂಲವಾಗಿದೆ. ಮಕ್ಕಳು ವಿಜ್ಞಾನ, ಗಣಿತ ಎಲ್ಲಾ ರಂಗಗಳಲ್ಲಿ ಮುಂದೆ ಬರಬೇಕು. ಆ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯೋಗ ಎಂದ ಅವರು, ಎಲ್ಲ ಗ್ರಾಮಗಳಲ್ಲಿಯೂ ವಿಜ್ಞಾನ ಮೇಳ ಏರ್ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಉಪಸ್ಥಿತರಿದ್ದರು.

Similar News