ಸಂಸ್ಕೃತವೇಕೆ ಅಧಿಕೃತ ಭಾಷೆಯಾಗಬಾರದು?: ಮಾಜಿ ಸಿಜೆಐ ಎಸ್.ಎ.ಬೋಬ್ಡೆ

Update: 2023-01-28 17:51 GMT

ನಾಗ್ಪುರ,ಜ.28: ನ್ಯಾಯಾಲಯಗಳಲ್ಲಿ ಬಳಕೆ ಸೇರಿದಂತೆ ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಮಾಡುವುದನ್ನು ಪ್ರತಿಪಾದಿಸಿರುವ ಭಾರತದ ಮಾಜಿ ಮುಖ್ಯ ನ್ಯಾಯಾಧೀಶ (CJI) ಎಸ್.ಎ. ಬೋಬ್ಡೆ(S.A Bobde) ಅವರು,1949ರ ಮಾಧ್ಯಮ ವರದಿಗಳಂತೆ ಸಂವಿಧಾನ ಶಿಲ್ಪಿ ಹಾಗೂ ಖ್ಯಾತ ನ್ಯಾಯಶಾಸ್ತ್ರಜ್ಞ ಡಾ.ಬಿ.ಆರ್.ಅಂಬೇಡ್ಕರ್( Dr.B.R Ambedkar) ಅವರೂ ಇದನ್ನು ಪ್ರಸ್ತಾಪಿಸಿದ್ದರು ಎಂದು ಹೇಳಿದ್ದಾರೆ.

ಸಂಸ್ಕೃತ ಭಾರತಿ ಆಯೋಜಿಸಿದ್ದ ಅಖಿಲ ಭಾರತ ವಿದ್ಯಾರ್ಥಿ ಸಮ್ಮೇಳನದಲ್ಲಿ ಮಾತನಾಡಿದ ಅವರು,ಕಾನೂನಿನಂತೆ ಆಡಳಿತದಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್‌ನ್ನು ಅಧಿಕೃತ ಭಾಷೆಗಳನ್ನಾಗಿ ಬಳಸಲಾಗುತ್ತಿದೆ. ಪ್ರತಿಯೊಬ್ಬ ಮುಖ್ಯ ನ್ಯಾಯಾಧೀಶರೂ ಆಯಾ ಪ್ರಾದೇಶಿಕ ಭಾಷೆಗಳ ಬಳಕೆಗೆ ಅನುಮತಿ ಕೋರಿ ಪ್ರಾತಿನಿಧ್ಯಗಳನ್ನು ಸ್ವೀಕರಿಸುತ್ತಾರೆ. ಅದು ಈಗ ಜಿಲ್ಲಾಮಟ್ಟದ ನ್ಯಾಯಾಂಗ ಮತ್ತು ಕೆಲವು ಉಚ್ಚ ನ್ಯಾಯಾಲಯಗಳಲ್ಲಿ ಸಾಕಾರಗೊಂಡಿದೆ. 

ಉಚ್ಚ ನ್ಯಾಯಾಲಯ ಮಟ್ಟದಲ್ಲಿ ಇಂಗ್ಲಿಷ್ ಅಧಿಕೃತ ಭಾಷೆಯಾಗಿದೆ,ಆದರೂ ಹಲವು ಉಚ್ಚ ನ್ಯಾಯಾಲಯಗಳು ಪ್ರಾದೇಶಿಕ ಭಾಷೆಗಳಲ್ಲಿ ಅರ್ಜಿಗಳು,ಅಹವಾಲುಗಳು ಮತ್ತು ದಾಖಲೆಗಳಿಗೂ ಅವಕಾಶ ನೀಡುತ್ತಿವೆ ಎಂದರು. ಈ ಸಮಸ್ಯೆ (ಅಧಿಕೃತ ಭಾಷೆಯ)ಯು ಬಗೆಹರಿಯದೆ ಉಳಿಯಬೇಕು ಎಂದು ತಾನು ಭಾವಿಸುವುದಿಲ್ಲ. ಇದು 1949ರಿಂದಲೂ ಬಗೆಹರಿಯದೆ ಉಳಿದುಕೊಂಡಿದೆ. ಇದು ಚರ್ಚೆಯ ಸ್ಥಳವಲ್ಲವಾದರೂ ಆಡಳಿತ ಮತ್ತು ನ್ಯಾಯದ ಆಡಳಿತದಲ್ಲಿ ತಪ್ಪು ಸಂವಹನದ ಗಂಭೀರ ಅಪಾಯಗಳಿವೆ ಎಂದರು.

‘ಡಾ.ಅಂಬೇಡ್ಕರ್ ಅವರು ಸಂಸ್ಕೃತವನ್ನು ಭಾರತ ಒಕ್ಕೂಟದ ಅಧಿಕೃತ ಭಾಷೆಯನ್ನಾಗಿ ಮಾಡುವ ಉಪಕ್ರಮವನ್ನಾರಂಭಿಸಿದ್ದಾರೆ ಎಂದು 1949,ಸೆ.11ರ ವೃತ್ತಪತ್ರಿಕೆಗಳು ವರದಿ ಮಾಡಿದ್ದವು. ನಮ್ಮ ಹಲವಾರು ಭಾಷೆಗಳಲ್ಲಿ ಸಂಸ್ಕೃತ ಪದಗಳು ಸಾಮಾನ್ಯವಾಗಿವೆ. ಡಾ.ಅಂಬೇಡ್ಕರ್ ಅವರು ಪ್ರಸ್ತಾವಿಸಿದ್ದಂತೆ ಸಂಸ್ಕೃತವೇಕೆ ನಮ್ಮ ಅಧಿಕೃತ ಭಾಷೆಯಾಗಬಾರದು ಎಂಬ ಪ್ರಶ್ನೆಯನ್ನು ನಾನು ನನಗೇ ಕೇಳಿಕೊಳ್ಳುತ್ತೇನೆ ’ ಎಂದು ಹೇಳಿದ ನ್ಯಾ.ಬೋಬ್ಡೆ,ಸಂಸ್ಕೃತವನ್ನು ಪರಿಚಯಿಸುವುದು ಎಂದರೆ ಯಾವುದೇ ಧರ್ಮವನ್ನು ಪರಿಚಯಿಸುವುದು ಎಂಬರ್ಥವಲ್ಲ,ಏಕೆಂದರೆ ಶೇ.95ರಷ್ಟು ಭಾಷೆಗೂ ಯಾವುದೇ ಧರ್ಮಕ್ಕೂ ಸಂಬಂಧವಿಲ್ಲ. 

ಸಂಸ್ಕೃತ ಭಾಷೆಯು ದಕ್ಷಿಣ ಅಥವಾ ಉತ್ತರ ಭಾರತಕ್ಕೆ ಸೇರಿದ್ದಲ್ಲ ಮತ್ತು ಜಾತ್ಯತೀತ ಬಳಕೆಯ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ. ಅದು ಕಂಪ್ಯೂಟರ್‌ಗಳಿಗೆ ಅತ್ಯಂತ ಸೂಕ್ತ ಭಾಷೆ ಎನ್ನುವುದನ್ನು ನಾಸಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಕೆಲವೇ ಪದಗಳಲ್ಲಿ ಸಂದೇಶಗಳ ಸಂವಹನಕ್ಕೆ ಅದನ್ನು ಬಳಸಬಹುದು ಎಂದರು.

ಆದರೂ,ಸಂಸ್ಕೃತಕ್ಕೆ ಪರಿವರ್ತನೆ ರಾತ್ರೋರಾತ್ರಿ ಸಾಧ್ಯವಿಲ್ಲ,ಅದಕ್ಕೆ ಹಲವು ವರ್ಷಗಳೇ ಬೇಕಾಗುತ್ತವೆ ಎನ್ನುವುದನ್ನು ಒಪ್ಪಿಕೊಂಡ ನ್ಯಾ.ಬೋಬ್ಡೆ,ಯಾವುದೇ ಧರ್ಮದ ಲೇಪವಿಲ್ಲದೆ ಸಂಸ್ಕೃತವನ್ನು ಕಲಿಸಬೇಕಾಗುತ್ತದೆ,ವೃತ್ತಿಪರ ಕೋರ್ಸ್‌ಗಳಲ್ಲಿ ಇಂಗ್ಲಿಷ್‌ನಲ್ಲಿ ಬೋಧಿಸುವಂತೆ. ಪದಕೋಶವನ್ನು ಸೃಷ್ಟಿಸಬೇಕಾಗುತ್ತದೆ ಮತ್ತು ಸಂಸ್ಕ್ರತವನ್ನು ಅಧಿಕೃತ ಭಾಷೆಗಳ ಕಾಯ್ದೆಗೆ ಸೇರಿಸಬೇಕಾಗುತ್ತದೆ ಎಂದರು.

Similar News