ಏಳನೇ ದಿನಕ್ಕೆ ಅಂಗನವಾಡಿ ನೌಕರರ ಧರಣಿ: ಜೆಡಿಎಸ್ ನಾಯಕರ ಬೆಂಬಲ

Update: 2023-01-28 16:50 GMT

ಬೆಂಗಳೂರು, ಜ.28: ಅಂಗನವಾಡಿ ನೌಕರರ ಗ್ರಾಚ್ಯುಟಿ ಸೌಲಭ್ಯ, ಮುಂಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಜೆಡಿಎಸ್ ನಾಯಕರು ಬೆಂಬಲ ಸೂಚಿಸಿದ್ದಾರೆ.

ನೌಕರರ ಧರಣಿ ಸ್ಥಳಕ್ಕೆ ಜೆಡಿಎಸ್‍ನ ವಿಧಾನಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ತಿಪ್ಪೇಸ್ವಾಮಿ ಆಗಮಿಸಿ ಸರಕಾರ ಕೂಡಲೇ ನೌಕರರ ಬೇಡಿಕೆಗಳನ್ನು ಜಾರಿಗೊಳಿಸುವ ಮೂಲಕ ಸ್ಥಗಿತಗೊಂಡಿರುವ ಅಂಗನವಾಡಿ ಕೇಂದ್ರಗಳನ್ನು ಕೂಡಲೇ ತೆರೆಯಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಶನಿವಾರ ಸುಮಾರು ಆರು ಸಾವಿರಕ್ಕೂ ಹೆಚ್ಚು ನೌಕರರು ಅಂಗನವಾಡಿ ಕೇಂದ್ರಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಏಳು ದಿನಗಳಿಂದ ನೌಕರರ ಕೆಲಸ ಸ್ಥಗಿತವಾಗಿರುವ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಸರಕಾರ ಮಹಿಳಾ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ನೌಕರರ ಬೇಡಿಕೆಗಳ ಅನುಗುಣವಾಗಿ ಸರಕಾರದಿಂದ ಆದೇಶ ಬರುವವರೆಗೂ ಹೋರಾಟ ಮುಂದುವರೆಸಲಾಗುತ್ತದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮೀ ತಿಳಿಸಿದ್ದಾರೆ.

Similar News