ಕಳೆದ ಎಂಟು ವರ್ಷಗಳಲ್ಲಿ ಲಾಭವಾದದ್ದು ಯಾರಿಗೆ?

Update: 2023-01-29 10:31 GMT

ಇನ್ನು ಇತ್ತೀಚಿನ ದಿನಗಳಲ್ಲಿ 'ಗೋದಿ ಮೀಡಿಯಾ' ಎಂಬ ತೀವ್ರ ಟೀಕೆಗೆ ಗುರಿಯಾಗಿರುವ ಭಾರತದ ರಾಷ್ಟ್ರೀಯ ಮಾಧ್ಯಮಗಳು ನಿತ್ಯ ಮೋದಿ ಸರಕಾರದ ಜಪ ಮಾಡುತ್ತಿರುವುದನ್ನು ಪ್ರತಿಯೊಬ್ಬ ಸಾಮಾನ್ಯ ವೀಕ್ಷಕನೂ ಗಮನಿಸುತ್ತಿದ್ದಾನೆ. ಈ ಹಿಂದಿನ ಯಾವ ಸರಕಾರಗಳ ಬಗ್ಗೆಯೂ (ವಾಜಪೇಯಿ ಸರಕಾರವನ್ನೂ ಸೇರಿದಂತೆ) ಇಷ್ಟು ಮೃದು ಧೋರಣೆ ತೋರದ ರಾಷ್ಟ್ರೀಯ ಮಾಧ್ಯಮಗಳು ಮೋದಿ ನೇತೃತ್ವದ ಬಿಜೆಪಿ ಸರಕಾರದ ಬಗ್ಗೆ ಇಷ್ಟೊಂದು ಮೃದು ಧೋರಣೆ ಪ್ರದರ್ಶಿಸುತ್ತಿರುವುದೇಕೆ, ದೇಶ ರಕ್ಷಣೆಯಂಥ ಗಹನ ವಿಚಾರಗಳಲ್ಲಿನ ಲೋಪವನ್ನೂ ಬಚ್ಚಿಟ್ಟು, ಮೋದಿ ಸರಕಾರದ ರಕ್ಷಣೆಗೆ ನಿಂತಿರುವುದೇಕೆ ಎಂಬ ಸತ್ಯವನ್ನು ಹುಡುಕಿ ಹೊರಟರೆ, ಅದರ ಹಿಂದಿರುವ ವ್ಯಾಪಾರಿ ಹಿತಾಸಕ್ತಿಗಳೂ ಬಯಲಾಗುತ್ತಾ ಹೋಗುತ್ತವೆ.


ಚೀನಾದ ವಿಷಯ ಬಂದಾಗ ಬಿಜೆಪಿ ಬೆಂಬಲಿಗರು ಚೀನಾ ವಸ್ತುಗಳ ಬಾಯ್ಕಟ್‌ಗೆ ಕರೆ ನೀಡುವುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿ ಬದಲಾಗಿದೆ. ಈ ಬಾಯ್ಕಟ್‌ಗಳನ್ನು ಬಿಜೆಪಿ ಬೆಂಬಲಿಗ ವರ್ತಕರು ಗಂಭೀರವಾಗಿ ಪರಿಗಣಿಸಿದ್ದಿದ್ದರೆ, ಚೀನಾವಿಂದು ಭಾರತದ ಮುಂದೆ ಮಂಡಿಯೂರಿ ಕುಳಿತಿರಬೇಕಾಗುತ್ತಿತ್ತು. ಆದರೆ, ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ಭಾರತ-ಚೀನಾ ನಡುವಿನ ವ್ಯಾಪಾರ ಕೊರತೆಯು 2013-14ರ ಅವಧಿಯಲ್ಲಿ 36.21 ಬಿಲಿಯನ್ ಡಾಲರ್ ಇದ್ದದ್ದು, 2022-23ರ ಹೊತ್ತಿಗೆ 101.02 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಅರ್ಥಾತ್, ಕಳೆದ ಎಂಟು ವರ್ಷಗಳಲ್ಲಿ ಭಾರತ-ಚೀನಾ ನಡುವಿನ ವ್ಯಾಪಾರ ಕೊರತೆಯು ಶೇ. 278ರಷ್ಟು ಏರಿಕೆಯಾಗಿದೆ.

2014-15ರ ಅವಧಿಯಲ್ಲಿ ಚೀನಾದಿಂದ ಭಾರತದ ಆಮದು ಮೊತ್ತ 60.41 ಬಿಲಿಯನ್ ಡಾಲರ್‌ನಷ್ಟಿದ್ದದ್ದು, ಎಪ್ರಿಲ್-ಡಿಸೆಂಬರ್ 2022ರ ಹೊತ್ತಿಗೆ 75.87 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿತ್ತು. ಅರ್ಥಾತ್, ಶೇ. 25ರಷ್ಟು ಏರಿಕೆಯಾಗಿದೆ. ಅದೇ ಹೊತ್ತಿನಲ್ಲಿ ಭಾರತವು ಚೀನಾಗೆ ರಫ್ತು ಮಾಡಿರುವ ಮೊತ್ತ 2014-15ರಲ್ಲಿ 11.93 ಬಿಲಿಯನ್ ಡಾಲರ್‌ನಷ್ಟಿದ್ದರೆ, 2022ರಲ್ಲಿ 17.48 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಅರ್ಥಾತ್, ಕಳೆದ ಎಂಟು ವರ್ಷಗಳಲ್ಲಿ ಭಾರತದ ರಫ್ತು ಪ್ರಮಾಣ ಶೇ. 50ರಷ್ಟು ಏರಿಕೆಯಾಗಿದ್ದರೂ, ಚೀನಾದ ಆಮದು ಮೊತ್ತಕ್ಕೆ ಹೋಲಿಸಿದರೆ ತೀರಾ ಕನಿಷ್ಠ ಪ್ರಮಾಣದಲ್ಲಿದೆ.
ಭಾರತ ಚೀನಾದ ಪಾಲಿಗೆ ಬಹುದೊಡ್ಡ ರಫ್ತು ಮಾರುಕಟ್ಟೆಯಾಗಿರುವುದು ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳು, ಕಂಪ್ಯೂಟರ್ ಬಿಡಿ ಭಾಗಗಳು, ಆಟಿಕೆ ಸಾಮಾನುಗಳಿಗೆ ಎಂಬುದು ಗಮನಾರ್ಹ ಸಂಗತಿ. ಈ ಆಮದು ಮಾರುಕಟ್ಟೆಯ ಬಹಪಾಲು ಹಿಡಿತ ಹೊಂದಿರುವುದು ಬನಿಯಾ ಸಮುದಾಯ. ಚೀನಾ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ದೊರೆಯುವ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳು, ಕಂಪ್ಯೂಟರ್‌ಬಿಡಿ ಭಾಗಗಳು ಹಾಗೂ ಆಟಿಕೆ ಸಾಮಾನುಗಳಿಗೆ ಈ ಬನಿಯಾ ವರ್ತಕರ ಒಡೆತನದ ಕಂಪೆನಿಗಳೇ ಬಹು ದೊಡ್ಡ ಗ್ರಾಹಕ ಸಂಸ್ಥೆಗಳು. ಚೀನಾ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ದೊರೆಯುವ ಈ ಸಾಮಗ್ರಿಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರುವುದರಿಂದ ಬಹು ದೊಡ್ಡ ಲಾಭವನ್ನು ಈ ಬನಿಯಾ ವರ್ತಕ ಸಮುದಾಯ ಗಳಿಸುತ್ತಿದೆ. ಹೀಗಾಗಿಯೇ ಈ ಮುನ್ನ ಚೀನಾದಿಂದ ಆಮದಾಗುವ ಸಾಮಗ್ರಿಗಳ ಮೇಲೆ ವಿಧಿಸಲಾಗುತ್ತಿದ್ದ ಸುಂಕವನ್ನು ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಮಾಡಿರುವುದಲ್ಲದೆ, ಮುಕ್ತ ಆಮದಿಗೂ ರಹದಾರಿ ಒದಗಿಸಲಾಗಿದೆ.

ಭಾರತ-ಚೀನಾ ನಡುವಿನ ವ್ಯಾಪಾರ ಕೊರತೆ ಹಿಗ್ಗುತ್ತಿರುವುದರ ನೇರ ಪರಿಣಾಮ ಎದುರಿಸುತ್ತಿರುವುದು ರೂಪಾಯಿ ಮೌಲ್ಯ. 2013-14ರಲ್ಲಿ ಪ್ರತೀ ಡಾಲರ್‌ಗೆ ಸುಮಾರು 55 ರೂಪಾಯಿ ಇದ್ದ ವಿದೇಶಿ ವಿನಿಮಯ ದರವು, 2022-23ರಲ್ಲಿ 82 ರೂಪಾಯಿಯನ್ನು ದಾಟಿ ನಾಗಾಲೋಟದಿಂದ ಮುನ್ನುಗ್ಗುತ್ತಿದೆ. ಇದರಿಂದ 2022-23ನೇ ಸಾಲಿನ ಏಶ್ಯದ ಅತ್ಯಂತ ಕಳಪೆ ಕರೆನ್ಸಿಗಳ ಸಾಲಿಗೆ ರೂಪಾಯಿಯೂ ಸೇರಿದ್ದರೂ, ಚೀನಾದೊಂದಿಗಿನ ವ್ಯಾಪಾರ ಕೊರತೆಯನ್ನು ತಗ್ಗಿಸಲು ಯಾವುದೇ ಸಣ್ಣ ಪ್ರಯತ್ನವನ್ನೂ ಮೋದಿ ಸರಕಾರ ಮಾಡುತ್ತಿಲ್ಲ.

ಇನ್ನು ಇತ್ತೀಚಿನ ದಿನಗಳಲ್ಲಿ 'ಗೋದಿ ಮೀಡಿಯಾ' ಎಂಬ ತೀವ್ರ ಟೀಕೆಗೆ ಗುರಿಯಾಗಿರುವ ಭಾರತದ ರಾಷ್ಟ್ರೀಯ ಮಾಧ್ಯಮಗಳು ನಿತ್ಯ ಮೋದಿ ಸರಕಾರದ ಜಪ ಮಾಡುತ್ತಿರುವುದನ್ನು ಪ್ರತಿಯೊಬ್ಬ ಸಾಮಾನ್ಯ ವೀಕ್ಷಕನೂ ಗಮನಿಸುತ್ತಿದ್ದಾನೆ. ಈ ಹಿಂದಿನ ಯಾವ ಸರಕಾರಗಳ ಬಗ್ಗೆಯೂ (ವಾಜಪೇಯಿ ಸರಕಾರವನ್ನೂ ಸೇರಿದಂತೆ) ಇಷ್ಟು ಮೃದು ಧೋರಣೆ ತೋರದ ರಾಷ್ಟ್ರೀಯ ಮಾಧ್ಯಮಗಳು ಮೋದಿ ನೇತೃತ್ವದ ಬಿಜೆಪಿ ಸರಕಾರದ ಬಗ್ಗೆ ಇಷ್ಟೊಂದು ಮೃದು ಧೋರಣೆ ಪ್ರದರ್ಶಿಸುತ್ತಿರುವುದೇಕೆ, ದೇಶ ರಕ್ಷಣೆಯಂಥ ಗಹನ ವಿಚಾರಗಳಲ್ಲಿನ ಲೋಪವನ್ನೂ ಬಚ್ಚಿಟ್ಟು, ಮೋದಿ ಸರಕಾರದ ರಕ್ಷಣೆಗೆ ನಿಂತಿರುವುದೇಕೆ ಎಂಬ ಸತ್ಯವನ್ನು ಹುಡುಕಿ ಹೊರಟರೆ, ಅದರ ಹಿಂದಿರುವ ವ್ಯಾಪಾರಿ ಹಿತಾಸಕ್ತಿಗಳೂ ಬಯಲಾಗುತ್ತಾ ಹೋಗುತ್ತವೆ.

ಭಾರತದ ರಾಷ್ಟ್ರೀಯ ಮಾಧ್ಯಮಗಳ ಒಡೆತನ ಹಾಗೂ ನೀತಿ ನಿರ್ಧಾರಕ ಹುದ್ದೆಗಳಲ್ಲಿರುವ ಜಾತಿ ಸಮುದಾಯಗಳ ಕುರಿತು, ಹವ್ಯಾಸಿ ಪತ್ರಕರ್ತ ಅನಿಲ್ ಚಂದ್ರ, ಮಾಧ್ಯಮ ಅಧ್ಯಯನ ಗುಂಪಿನ ಸ್ವತಂತ್ರ ಪತ್ರಕರ್ತ ಜಿತೇಂದ್ರ ಕುಮಾರ್ ಹಾಗೂ ಸಿಎಸ್‌ಡಿಎಸ್ ಸಂಸ್ಥೆಯ ಯೋಗೇಂದ್ರ ಪ್ರಸಾದ್ ಯಾದವ್ ಅವರನ್ನೊಳಗೊಂಡ ತಂಡವು ಮೇ 30, 2006ರಿಂದ ಜೂನ್ 3, 2006ರ ನಡುವೆ ತಾನು ನಡೆಸಿದ್ದ ಅಧ್ಯಯನ ಸಮೀಕ್ಷೆಯಲ್ಲಿ ಆಘಾತಕಾರಿ ಸಂಗತಿಗಳನ್ನು ಬಯಲು ಮಾಡಲಾಗಿತ್ತು. ಈ ಅಧ್ಯಯನ ವರದಿಯ ಪ್ರಕಾರ, ದೇಶದ ಜನಸಂಖ್ಯೆಯ ಪೈಕಿ ಒಟ್ಟು ಶೇ. 8ರಷ್ಟು ಜನಸಂಖ್ಯೆ ಮಾತ್ರ ಹೊಂದಿರುವ ಬನಿಯಾ ಮತ್ತು ಬ್ರಾಹ್ಮಣ ಸಮುದಾಯವೇ ಭಾರತದಲ್ಲಿರುವ ಮಾಧ್ಯಮ ಸಂಸ್ಥೆಗಳ ಪೈಕಿ ಶೇ. 71ರಷ್ಟು ಒಡೆತನ ಹೊಂದಿರುವ ಸಂಗತಿ ಬಯಲಾಗಿತ್ತು.

ಭಾರತದ ರಾಷ್ಟ್ರೀಯ ವಾಹಿನಿಗಳಲ್ಲಿನ 315 ನೀತಿ ನಿರ್ಧಾರಕ ಹುದ್ದೆಗಳ ಪೈಕಿ ದೇಶದ ಒಟ್ಟು ಜನಸಂಖ್ಯೆಯ ಶೇ. 16ರಷ್ಟಿರುವ ದ್ವಿಜ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ಸಮುದಾಯಗಳು ಶೇ. 86ರಷ್ಟು ಹುದ್ದೆಗಳನ್ನು ಹೊಂದಿರುವ ಸಂಗತಿಯನ್ನೂ ಈ ಅಧ್ಯಯನ ವರದಿ ಬೆಳಕಿಗೆ ತಂದಿತ್ತು. ಈ ಪೈಕಿ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಭೂಮಿಹಾರ್ ಮತ್ತು ತ್ಯಾಗಿ ಸಮುದಾಯದವರು ಶೇ. 49ರಷ್ಟಿದ್ದಾರೆ ಎಂಬುದರತ್ತಲೂ ಬೊಟ್ಟು ಮಾಡಿತ್ತು. ಇದರೊಂದಿಗೆ ದೇಶದ ಜನಸಂಖ್ಯೆಯಲ್ಲಿ ಶೇ. 41ರಷ್ಟಿರುವ ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಶೇ. 3ರಷ್ಟು ಮಂದಿಯಿದ್ದರೆ, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯ ಶೂನ್ಯ ಪ್ರಾತಿನಿಧ್ಯ ಹೊಂದಿದೆ ಎಂಬ ಆತಂಕಕಾರಿ ಸಂಗತಿಯನ್ನೂ ಬೆಳಕಿಗೆ ತಂದಿತ್ತು. ದೇಶದ ಜನಸಂಖ್ಯೆಯಲ್ಲಿ ಶೇ. 15ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಮ್ ಸಮುದಾಯವು ಶೇ. 3ರಷ್ಟು ಹುದ್ದೆಗಳನ್ನು ಹೊಂದಿರುವ ಸಂಗತಿಯತ್ತಲೂ ಅಧ್ಯಯನ ವರದಿ ಬೆಳಕು ಚೆಲ್ಲಿತ್ತು. ಡಿಜಿಟಲ್ ಮಾಧ್ಯಮದಲ್ಲಿ ಮಾತ್ರ ಸಿಖ್ ಸಮುದಾಯ ತನ್ನ ಜನಸಂಖ್ಯೆಗನುಗುಣವಾದ ಪ್ರಾತಿನಿಧ್ಯ ಹೊಂದಿದೆ ಎಂಬ ಸಂಗತಿಯನ್ನೂ ಈ ಅಧ್ಯಯನ ವರದಿ ಒಳಗೊಂಡಿತ್ತು.

2014ರ ಲೋಕಸಭಾ ಚುನಾವಣೆಯಲ್ಲಿ ಬಹು ದೊಡ್ಡ ಚುನಾವಣಾ ವಿಷಯವಾಗಿದ್ದದ್ದು ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿದ್ದಾರೆಂದು ಹೇಳಲಾಗಿರುವ ಕಪ್ಪುಹಣ. ಬಿಜೆಪಿ ಅಧಿಕಾರಕ್ಕೆ ಬಂದರೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ಮರಳಿ ತಂದು, ಪ್ರತೀ ಭಾರತೀಯರ ಖಾತೆಗೆ ತಲಾ ರೂ. 15. ಲಕ್ಷ ಜಮಾ ಮಾಡಲಾಗುವುದು ಎಂದು ಅಂದಿನ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು ಚುನಾವಣಾ ಭರವಸೆ ನೀಡಿದ್ದರು. ಹಾಗೆ ಭರವಸೆ ನೀಡಿದ ನರೇಂದ್ರ ಮೋದಿ ಗೆದ್ದು ಎಂಟೂವರೆ ವರ್ಷಗಳೇ ಕಳೆದು ಹೋಗಿವೆ. ಹೀಗಿದ್ದೂ, ಪ್ರತೀ ಭಾರತೀಯರ ಖಾತೆಗೆ ತಲಾ ರೂ. 15 ಲಕ್ಷ ಮೊತ್ತವನ್ನು ಜಮಾ ಮಾಡುವುದು ಒತ್ತಟ್ಟಿಗಿರಲಿ; ಈ ಎಂಟೂವರೆ ವರ್ಷಗಳಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ ಹಣದ ಪ್ರಮಾಣ ಶೇ. 600ರಷ್ಟು ಹೆಚ್ಚಳವಾಗಿದೆ. 2007-08ರ ಅವಧಿಯಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಠೇವಣಿ ಇರಿಸಿದ್ದ ಮೊತ್ತ ರೂ. 5,000 ಕೋಟಿಯಾಗಿದ್ದರೆ, 2022-23ರ ಅವಧಿಯಲ್ಲಿ ಈ ಮೊತ್ತವು ರೂ. 30,000 ಕೋಟಿಗೆ ಏರಿಕೆಯಾಗಿದೆ. ಇದರಿಂದ ಸ್ಪಷ್ಟವಾಗಿ ಅರ್ಥವಾಗುವುದೇನೆಂದರೆ, ಮೋದಿ ಸರಕಾರದ ಅವಧಿಯಲ್ಲಿ ಕಪ್ಪುಹಣದ ಕುಳಗಳಿಗೆ ಭೀತಿ ಸೃಷ್ಟಿಯಾಗಿಲ್ಲ; ಬದಲಿಗೆ ಅಭಯ ದೊರೆತಿದೆ ಎಂದು.

ಈಗಲಾದರೂ ಅರ್ಥವಾಯಿತೆ, ಯಾಕೆ ವರ್ತಕ ಸಮುದಾಯ ಹಾಗೂ ಮೇಲ್ಜಾತಿಗಳ ಒಡೆತನ ಹೊಂದಿರುವ ರಾಷ್ಟ್ರೀಯ ಮಾಧ್ಯಮಗಳು ಮೋದಿ ಸರಕಾರದ ಆರ್ಥಿಕ ನಿರ್ವಹಣೆ ವೈಫಲ್ಯವನ್ನು ಬಚ್ಚಿಟ್ಟು, ಅವರನ್ನು ದೇವಮಾನವನಂತೆ ಬಿಂಬಿಸುತ್ತಿವೆ ಎಂದು? ಅಂದಹಾಗೆ, ಯುಪಿಎ-2 ಸರಕಾರ ನಿರ್ಗಮಿಸುವಾಗ ಭಾರತದ ಮೇಲಿದ್ದ ವಿದೇಶಿ ಸಾಲದ ಮೊತ್ತ ರೂ. 54,90,763 ಕೋಟಿ ಇದ್ದದ್ದು, ಮಾರ್ಚ್ 31, 2022ಕ್ಕೆ ಅಂತ್ಯಗೊಂಡಂತೆ ರೂ. 155.31 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹೀಗಿದ್ದರೂ ಈ ಅವಧಿಯಲ್ಲಿ ವಿದೇಶಿ ಸಾಲವಿಲ್ಲದ ಕಂಪೆನಿಯಾಗಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್ ಹೊರಹೊಮ್ಮಿದೆ!! ಅಂದಮೇಲೆ ದೇಶದ ವಿದೇಶಿ ಸಾಲ ಯಾರ ಉದ್ಧಾರಕ್ಕಾಗಿ ಏರಿಕೆಯಾಗಿದೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವಲ್ಲವೇ?!

Similar News