ಟಿಐಎಸ್‌ಎಸ್ ಎಚ್ಚರಿಕೆ ನಡುವೆಯೇ 200 ವಿದ್ಯಾರ್ಥಿಗಳಿಂದ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಣೆ

Update: 2023-01-29 05:54 GMT

ಮುಂಬೈ: ಇಲ್ಲಿನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್‌ಎಸ್) ಅಧಿಕಾರಿಗಳ ಹಲವು ಎಚ್ಚರಿಕೆಗಳನ್ನು ಧಿಕ್ಕರಿಸಿದ ಬಿಗಿ ಪೊಲೀಸ್ ಭದ್ರತೆ ನಡುವೆ ಸುಮಾರು 200 ಮಂದಿ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಬಗೆಗಿನ ಬಿಬಿಸಿ ಸಾಕ್ಷ್ಯಚಿತ್ರವನ್ನು ಶನಿವಾರ ವೀಕ್ಷಿಸಿದರು.

ಚಿತ್ರದ ಸಾರ್ವಜನಿಕ ಪ್ರದರ್ಶನ ಸಾಧ್ಯವಾಗದಿದ್ದರೂ, ವಿದ್ಯಾರ್ಥಿಗಳು ಕ್ಯಾಂಪಸ್‌ನ ಒಳಗೆ ಸಮಾವೇಶಗೊಂಡು ತಮ್ಮ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್‌ಗಳಲ್ಲಿ ಚಲನಚಿತ್ರವನ್ನು ವೀಕ್ಷಿಸಿದರು. ಆದರೆ ಚಿತ್ರದ ಸಾರ್ವಜನಿಕ ಪ್ರದರ್ಶನ ನಡೆದಿಲ್ಲ; ಸಂಸ್ಥೆ ಇದಕ್ಕೆ ಯಾವುದೇ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ ಎಂದು ಸಂಸ್ಥೆಯ ಆಡಳಿತ ವರ್ಗ ಸ್ಪಷ್ಟಪಡಿಸಿದೆ.

ಒಟ್ಟು ಒಂಬತ್ತು ಲ್ಯಾಪ್‌ಟಾಪ್‌ಗಳಲ್ಲಿ ಚಿತ್ರವನ್ನು ವೀಕ್ಷಿಸಲಾತು. ಪ್ರೋಗ್ರೆಸಿವ್ ಸ್ಟೂಡೆಂಟ್ಸ್ ಫೋರಂ (ಪಿಎಸ್‌ಎಫ್) ಈ ಹಿಂದೆ ನೀಡಿದ ಕರೆಯ ಹಿನ್ನೆಲೆಯಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಎಸ್‌ಎಫ್‌ಐ ಪ್ರತಿನಿಧಿಗಳು ಕೂಡಾ ಈ ಕರೆಯನ್ನು ಬೆಂಬಲಿಸಿದ್ದರು ಹಾಗೂ ಅಧಿಕೃತ ವಿದ್ಯಾರ್ಥಿ ಸಂಘವಾದ ಟಿಐಎಸ್‌ಎಸ್ ವಿದ್ಯಾರ್ಥಿ ಸಂಘ, ಶುಕ್ರವಾರ ಸಂಜೆ ನಡೆಸಿದ ದಿಢೀರ್ ಪ್ರತಿಭಟನೆ ವೇಳೆ ಚಿತ್ರದ ಕ್ಯೂಆರ್ ಕೋಡ್‌ಗಳನ್ನು ಕೂಡಾ ಹಂಚಿಕೊಂಡಿತು. ಸಂಸ್ಥೆಯ ಆಡಳಿತ ವರ್ಗ ಎರಡು ಎಚ್ಚರಿಕೆ ನೋಟಿಸ್ ನೀಡಿದರೂ, ಚಿತ್ರ ಪ್ರದರ್ಶನದ ಯೋಜನೆಯನ್ನು ವಿದ್ಯಾರ್ಥಿಗಳು ಕೈಬಿಡಲಿಲ್ಲ. ನಿಷೇಧಿತ ಚಿತ್ರವನ್ನು ಪ್ರದರ್ಶಿಸುವ ಪ್ರಯತ್ನವನ್ನು ಮತ್ತೊಂದು ವಿದ್ಯಾರ್ಥಿ ಸಂಘಟನೆ ಡೆಮಾಕ್ರಟಿಕ್ ಸೆಕ್ಯುಲರ್ ಸ್ಟೂಡೆಂಟ್ಸ್ ಫೋರಂ ವಿರೋಧಿಸಿತ್ತು.

ಇದಕ್ಕೂ ಮುನ್ನ ಚಿತ್ರಪ್ರದರ್ಶನವನ್ನು ವಿರೋಧಿಸಿ ಬಿಜೆಪಿ ಯವಮೋರ್ಚಾ ಪದಾಧಿಕಾರಿಗಳು ಕ್ಯಾಂಪಸ್ ಹೊರಗೆ ಪ್ರತಿಭಟನೆ ನಡೆಸಿದರು. ಮುಂಬೈ ಪೊಲೀಸರ ಭರವಸೆ ಬಳಿಕ ಪ್ರತಿಭಟನಾಕಾರರು ಚದುರಿದರು.

Similar News