ಜನತೆಯ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಗಣತಂತ್ರ ಬಲಿಷ್ಠ: ಪ್ರಧಾನಿ

‘ಪದ್ಮ’ ಪುರಸ್ಕೃತ ಬುಡಕಟ್ಟು ಸಾಧಕರಿಗೆ ಮೋದಿ ಅಭಿನಂದನೆ

Update: 2023-01-29 18:04 GMT

ಹೊಸದಿಲ್ಲಿ,ಜ.29: ದೇಶದ ಗಣತಂತ್ರವನ್ನು ಬಲಪಡಿಸಲು ಅವಿರತವಾಗಿ ಶ್ರಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ರವಿವಾರ ರಾಷ್ಟ್ರದ ಜನತೆಗೆ ಕರೆ ನೀಡಿದ್ದಾರೆ. ರವಿವಾರ ತನ್ನ 97ನೇ ‘ಮನ್ಕೀ ಬಾತ್’ ರೇಡಿಯೋ ಭಾಷಣ ಮಾಡಿದ ಅವರು ‘ಜನರ ಸಕ್ರಿಯ ಪಾಲ್ಗೊಳ್ಳುವಿಕೆ, ರಾಷ್ಟ್ರ ಕರ್ತವ್ಯ ನಿರ್ವಹಣೆ ಹಾಗೂ ಪ್ರತಿಯೊಬ್ಬರ ಪರಿಶ್ರಮದಿಂದ ಗಣರಾಜ್ಯವು ಬಲಿಷ್ಠವಾಗಲಿದೆ’ ಎಂದರು. ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ ಪ್ರಧಾನಿ, ದೇಶದ ಹಿತ ಎಲ್ಲಕ್ಕಿಂತ ಮೊದಲು ಎಂಬ ಅವರ ನಿಲುವನ್ನು ಪ್ರಶಂಸಿಸಿದರು.

ಈ ಸಲದ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಬುಡಕಟ್ಟು ಸಮುದಾಯವರು ಹಾಗೂ ಬುಡಕಟ್ಟು ಜನತೆಯ ಜೀವನದ ಜೊತೆ ನಂಟು ಹೊಂದಿದವರು ಗಣನೀಯ ಸಂಖ್ಯೆಯಲ್ಲಿರುವ ಬಗ್ಗೆ ಅವರು ಗಮನಸೆಳೆದರು. ‘‘ಟೊಟೊ, ಹೊ, ಕುಯಿ,ಕುವಿ ಹಾಗೂ ಮಾಂಡದಂತಹ ಬುಡಕಟ್ಟು ಭಾಷೆಗಳ ಅಭಿವೃದ್ಧಿಗೆ ದುಡಿದ ಮಹಾನ್ ವ್ಯಕ್ತಿಗಳು ಈ ಸಲದ ಪದ್ಮಪ್ರಶಸ್ತಿಗಳನ್ನು ಪಡೆದಿದ್ದು, ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ’’ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.

‘‘ಹಲವಾರು ಮಂದಿ ಪದ್ಮಪುರಸ್ಕೃತರು ಶ್ರದ್ಧೆಯಿಂದ ತಮ್ಮನ್ನು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಅದಕ್ಕಾಗಿ ಅವರು ಯಾವುದೇ ರೀತಿಯ ಪುರಸ್ಕಾರವನ್ನು ನಿರೀಕ್ಷಿಸಿರಲಿಲ್ಲ. ದೇಶವೇ ಮೊದಲು ಎಂಬ ತತ್ವಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಇವರು ಯಾರಿಗಾಗಿ ಕೆಲಸ ಮಾಡಿದ್ದರೋ ಅವರ ಮುಖದಲ್ಲಿ ಮೂಡಿಬಂದ ಸಂತೃಪ್ತಿಯ ಮುಗುಳ್ನಗೆಯೇ ಇವರಿಗೆ ದೊರೆತ ಅತ್ಯುನ್ನತ ಪುರಸ್ಕಾರವಾಗಿದೆ. ಇಂತಹ ಸಮರ್ಪಣಾ ಮನೋಭಾವದ ವ್ಯಕ್ತಿಗಳನ್ನುಗೌರವಿಸುವುದರಿಂದ ನಮ್ಮ ದೇಶದ ಜನತೆಯ ಘನತೆ ವೃದ್ಧಿಯಾಗಿದೆ’’ ಎಂದವರು ಹೇಳಿದರು.

ಭಾರತದ ಪ್ರಜಾಪ್ರಭುತ್ವದ ಇತಿಹಾಸದ ಬಗ್ಗೆ ಮಾತನಾಡಿದ ಪ್ರಧಾನಿ, ತಮಿಳುನಾಡಿನ ಉದಿರಾಮೆರೂರ್ ಎಂಬಲ್ಲಿ 1100-1200 ವರ್ಷಗಳಷ್ಟು ಹಿಂದಿನ ಶಿಲಾಶಾಸನವಿದ್ದು, ಅದು ಒಂದು ರೀತಿಯ ಮಿನಿ ಸಂವಿಧಾನದಂತಿದೆ. ‘‘ ಗ್ರಾಮಸಭೆಗಳನ್ನು ಹೇಗೆ ನಿರ್ವಹಿಸಬೇಕು ಹಾಗೂ ಅದರ ಸದಸ್ಯರನ್ನು ಆಯ್ಕೆ ಮಾಡಲು ಯಾವ ವಿಧಾನಗಳನ್ನು ಅನುಸರಿಸಬೇಕು ಎಂಬ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ’’ ಎಂದು ಪ್ರಧಾನಿ ಗಮನಸೆಳೆದರು.

ಮೋದಿ ಭಾಷಣದ ಹೈಲೈಟ್ಸ್

1. ಜನತೆ ಯೋಗ ಹಾಗೂ ದೈಹಿಕ ಫಿಟ್ನೆಸ್ ಕಾರ್ಯಕ್ರಮಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವನ್ನು ತಮ್ಮ ಬದುಕಿನ ಒಂದು ಭಾಗವಾಗಿ ಮಾಡಿದ್ದಾರೆ. ಅದೇ ರೀತಿ ಸಿರಿಧಾನ್ಯಗಳ ಬಳಕೆಯನ್ನು ಕೂಡಾ ಜನತೆ ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ

2. ಇ-ತ್ಯಾಜ್ಯಗಳನ್ನು ಜಾಗರೂಕತೆಯಿಂದ ಮರುಬಳಕೆ ಮಾಡಿದಲ್ಲಿ ಅದು ಆರ್ಥಿಕತೆಗೆ ಒಂದು ಮಹಾನ್ ಶಕ್ತಿಯಾಗಲಿದೆ. ವಿವಿಧ ಸಂಸ್ಕರಣೆಗಳ ಮೂಲಕ ಇ-ತ್ಯಾಜ್ಯದಿಂದ 17 ವಿಧದ ಅಮೂಲ್ಯ ಲೋಹಗಳನ್ನು ಹೊರತೆಗೆಯಬಹುದಾಗಿದೆ. ಚಿನ್ನ,ಬೆಳ್ಳಿ, ತಾಮ್ರ ಹಾಗೂ ನಿಕೆಲ್ ಕೂಜಾ ಅವುಗಳಲ್ಲಿ ಸೇರಿವೆ. ಇ-ತ್ಯಾಜ್ಯದ ಮರುಬಳಕೆಯು ಕಚ್ರೆಯಿಂದ ಕಾಂಚಾಣ ಪಡೆಯಬಹುದಾಗಿದೆ.

3.ತೇವಭೂಮಿಗಳನ್ನು ರಕ್ಷಿಸುವಲ್ಲಿ ಸ್ಥಳೀಯ ಸಮುದಾಯಗಳ ಕೊಡುಗೆ ಅಭಿನಂದನಾರ್ಹವಾಗಿದೆ. ಭಾರತದ ತೇವಾಂಶಭರಿತ ಭೂಮಿಗಳು ನಮ್ಮ ಪ್ರಾಕೃತಿಕ ಸಾಮರ್ಥ್ಯದ ನಿದರ್ಶನಗಳಾಗಿವೆ,

ಬಸವಣ್ಣನವರ ಅನುಭವ ಮಂಟಪ ಸ್ಮರಿಸಿದ ಮೋದಿ

ಪ್ರಧಾನಿ ಮೋದಿ ಅವರು ತನ್ನ ರವಿವಾರದ ಮನ್ಕಿ ಬಾತ್ ಭಾಷಣದಲ್ಲಿ ಕ್ರಾಂತಿಯೋಗಿ ಬಸವಣ್ಣ ನವರು ಸ್ಥಾಪಿಸಿದ ಅನುಭವಮಂಟಪವನ್ನು ಪ್ರಸ್ತಾವಿಸಿದ್ದಾರೆ. ‘‘ 12ನೇ ಶತಮಾನದಲ್ಲಿ ಬಸವೇಶ್ವರ ಅವರು ಸ್ಥಾಪಿಸಿದ್ದ ಅನುಭವ ಮಂಟಪವು ನಮ್ಮ ದೇಶದ ಇತಿಹಾಸದಲ್ಲಿ ರುವ ಪ್ರಜಾತಾಂತ್ರಿಕ ವೌಲ್ಯಗಳಿಗೆ ಇನ್ನೊಂದು ಉದಾಹರಣೆಯಾಗಿದೆ. ಅನುಭವಮಂಟಪಗಲ್ಲಿ ಮುಕ್ತ ಚರ್ಚೆ ಹಾಗೂ ವಿಚಾರವಿಮರ್ಶೆಗೆ ಉತ್ತೇಜನ ನೀಡಲಾಗುತ್ತಿತ್ತು. ಬ್ರಿಟನ್ನಲ್ಲಿ ‘ಮ್ಯಾಗ್ನಾ ಕಾರ್ಟಾ’ ಎಂಬ ಪ್ರಜಾಪ್ರಭುತ್ವವಾದಿ ಒಡಂಬಡಿಕೆ ಜಾರಿಗೆ ಬರುವ ಮೊದಲೇ ಅನುಭವ ಮಂಟಪ ಅಸ್ತಿತ್ವದಲಿತ್ತು.

ಕಾಕತೀಯ ದೊರೆಗಳ ಪ್ರಜಾತಾಂತ್ರಿಕ ಪರಂಪರೆಗಳು ಕೂಡಾ ಅತ್ಯಂತ ಪ್ರಸಿದ್ಧವಾಗಿದ್ದವು. ಪಶ್ಚಿಮ ಭಾರತದಲ್ಲಿ ಭಕ್ತಿ ಪಂಥದ ಚಳವಳಿಯು ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಬೆಳೆಸಿತು’’ ಎಂದು ಪ್ರಧಾನಿ ಹೇಳಿದರು. ಭಾರತೀಯ ಇತಿಹಾಸ ಸಂಶೋಧನಾ ಸಂಸ್ಥೆ (ಐಸಿಎಚ್ಆರ್) ಸಿದ್ಧಪಡಿಸಿ, ಪ್ರಕಟಿಸಿರುವ ಇಂಡಿಯಾ: ದಿ ಮದರ್ ಆಫ್ ಡೆಮಾಕ್ರಸಿ ಕೃತಿಯ ಕುರಿತು ಪ್ರಧಾನಿ ತನ್ನ ಭಾಷಣದಲ್ಲಿ ಉಲ್ಲೇಖಿಸಿದ ಸಂದರ್ಭ ಈ ವಿಚಾರಗಳನ್ನು ಪ್ರಸ್ತಾವಿಸಿದರು.

ಬೆಂಗಳೂರಿನ ಐಐಎಸ್ಸಿ ಪೇಟೆಂಟ್ ಸಾಧನೆಗೆ ಪ್ರಶಂಸೆ

2022ರಲ್ಲಿ ತನ್ನ ಹೆಸರಿನಲ್ಲಿ ಹಲವಾರು ಸಂಶೋಧನಾ ಪೇಟೆಂಟ್ ಹಕ್ಕುಗಳನ್ನು ಪಡೆದುಕೊಂಡ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯನ್ನು ಪ್ರಧಾನಿ ನರೇಂದ್ರ ಮೋದಿ ಮನ್ಕೀ ಬಾತ್ನಲ್ಲಿ ಪ್ರಶಂಸಿಸಿದರು.

2022ರಲ್ಲಿ ಬೆಂಗಳೂರಿನ ಐಐಎಸ್ಸಿ ಯ ಹೆಸರಿನಲ್ಲಿ ಒಟ್ಟು 145 ಪೇಟೆಂಟ್ (ಹಕ್ಕುಸ್ವಾಮ್ಯ)ಗಳು ದೊರೆತಿವೆ. ಅಂದರೆ ಪ್ರತಿ ಐದು ದಿನಗಳಿಗೆ ಎರಡು ಪೇಟೆಂಟ್ಗಳು ದೊರೆತ ಹಾಗಾಗುತ್ತದೆ. ಇದೊಂದು ಅದ್ಬುತವಾದ ದಾಖಲೆಯ ಈ ಯಶಸ್ಸಿಗಾಗಿ ಐಐಎಸ್ಸಿಯನ್ನು ಅಭಿನಂದಿಸುತ್ತೇನೆ’’ ಎಂದು ಪ್ರಧಾನಿ ಹೇಳಿದರು.

ಜಮ್ಶೇಡ್ಜಿ ಟಾಟಾ ಹಾಗೂ ಸ್ವಾಮಿ ವಿವೇಕಾನಂದ ಅವರು ಐಏಎಸ್ಸಿ ಸಂಸ್ಥೆಯ ಸ್ಥಾಪನೆಗೆ ಸ್ಫೂರ್ತಿಯಾಗಿದ್ದರು’’ ಎಂದವರು ಹೇಳಿದರು.

Similar News