ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

Update: 2023-01-30 03:03 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ದೇಶ ತೀವ್ರ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿರುವ ದಿನಗಳಿಂದ ಸಾಮಾಜಿಕ ವಲಯಗಳಿಗೆ ಸರಕಾರದ ಅನುದಾನ ಇಳಿಮುಖವಾಗುತ್ತಿದೆ. ಸಹಜವಾಗಿಯೇ ಇದರ ಪರಿಣಾಮ ಸರಕಾರಿ ಆಸ್ಪತ್ರೆಗಳ ಮೇಲೂ ಬಿದ್ದಿದೆ. ಒಂದು ಕಾಲದಲ್ಲಿ ಬಡವರ ಪಾಲಿಗೆ ಆಶಾ ಕಿರಣವಾಗಿದ್ದ ಸರಕಾರಿ ಆಸ್ಪತ್ರೆಗಳು, ಅಲ್ಲಿ ದೊರಕುತ್ತಿರುವ ಸೌಲಭ್ಯಗಳು ಒಂದೊಂದಾಗಿ ಇಲ್ಲವಾಗ ತೊಡಗಿವೆ. ಸಂದರ್ಭದ ಲಾಭ ಪಡೆದುಕೊಂಡು ಖಾಸಗಿ ಸಂಸ್ಥೆಗಳು ಈ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸುತ್ತಿವೆ. ಜನರ ಪಾಲಿಗೆ ದೈಹಿಕ ಆರೋಗ್ಯವೇ ಗಗನ ಕುಸುಮವಾಗುತ್ತಿರುವ ಈ ದಿನಗಳಲ್ಲಿ ಜನರ ಮಾನಸಿಕ ಆರೋಗ್ಯಗಳ ಬಗ್ಗೆ ಚರ್ಚಿಸುವವರೇ ಇಲ್ಲವಾಗಿದ್ದಾರೆ. ಕೊರೋನ ಮತ್ತು ಲಾಕ್‌ಡೌನ್‌ನ ಬಳಿಕ ಜನಸಾಮಾನ್ಯರ ಉಳಿದೆಲ್ಲ ಆರೋಗ್ಯ ಸಮಸ್ಯೆಗಳು ಬದಿಗೆ ಸರಿದವು. ಕೊರೋನ ಮತ್ತು ಕೊರೋನ ಲಸಿಕೆಗಳಷ್ಟೇ ಮಾರುಕಟ್ಟೆಗಳಲ್ಲಿ ಸದ್ದು ಮಾಡತೊಡಗಿದವು. ಕ್ಷಯ, ಎಚ್‌ಐವಿಯಂತಹ ಮಾರಕ ರೋಗಗಳಿಗೆ ಈಗಲೂ ಸರಿಯಾದ ರೀತಿಯ ಚಿಕಿತ್ಸೆ ಸಿಗದೇ ಜನರು ನರಳುತ್ತಿದ್ದಾರಾದರೂ, ಮಾಧ್ಯಮ ಗಳು ಈಕಡೆಗೆ ಕಣ್ಣು ಹಾಯಿಸಿಯೂ ನೋಡುತ್ತಿಲ್ಲ. ದೈಹಿಕ ರೋಗಗಳಿಂದಷ್ಟೇ ಜನರು ಸಾಯುತ್ತಾರೆ ಎಂದು ನಂಬಿರುವ ನಾವು, ಆ ಕಾರಣಕ್ಕಾಗಿಯೇ ಮಾನಸಿಕ ಆರೋಗ್ಯಗಳ ಬಗ್ಗೆ ಗಮನ ಹರಿಸಿಲ್ಲ. ಆದರೆ ಮಾನಸಿಕ ರೋಗಗಳಿಂದಲೂ ಜನರು ಸಾಲು ಸಾಲಾಗಿ ಸಾಯಬಹುದು ಎನ್ನುವುದನ್ನು ಹೆಚ್ಚುತ್ತಿರುವ ಆತ್ಮಹತ್ಯೆಗಳು ಈಗಾಗಲೇ ಸಾಬೀತು ಪಡಿಸಿವೆ. ಆದರೂ ಸರಕಾರಕ್ಕೆ ಜನರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಇಂದಿನ ತುರ್ತು ಅಗತ್ಯ ಎಂದು ಅನ್ನಿಸಿಯೇ ಇಲ್ಲ.

ಕೊರೋನ ಮತ್ತು ಲಾಕ್‌ಡೌನ್‌ನ ಕಾಲದಲ್ಲಿ ಜನರು ದೈಹಿಕ ಸಮಸ್ಯೆಗಳಿಗಿಂತ ಮಾನಸಿಕ ಸಮಸ್ಯೆಗಳನ್ನು ಎದುರಿಸಿರುವುದೇ ಅಧಿಕ. ಆದರೆ ಇದನ್ನು ಹಂಚಿಕೊಂಡು ಸಮಸ್ಯೆಯನ್ನು ಬಗೆ ಹರಿಸುವ ವ್ಯವಸ್ಥೆಯೇ ನಮ್ಮ ನಡುವೆ ಇದ್ದಿರಲಿಲ್ಲ. ಏಕಾಏಕಿ ಎದುರಾದ ಸಂಕಟ, ಕೊರೋನ ಕುರಿತಂತೆ ಭಯ, ಲಾಕ್‌ಡೌನ್ ಸೃಷ್ಟಿಸಿದ ಆರ್ಥಿಕ ಅಭದ್ರತೆ, ನಿರುದ್ಯೋಗ ಇವೆಲ್ಲವೂ ಜನಸಾಮಾನ್ಯರ ಬದುಕನ್ನು ತೀವ್ರ ಆತಂಕ, ಖಿನ್ನತೆಗಳಿಗೆ ತಳ್ಳಿದವು. ಕೊರೋನದಲ್ಲಿ ಸತ್ತವರಿಗಿಂತಲೂ ಕೊರೋನ ಭೀತಿಯಿಂದ ಸತ್ತವರ ಸಂಖ್ಯೆ ಅಧಿಕವಿದೆ ಎಂದು ವೈದ್ಯರು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಕೊರೋನ ಕಾಲದಲ್ಲಿ ಮಾನಸಿಕ ರೋಗಿಗಳಾಗಿ ಆತ್ಮಹತ್ಯೆಗೆ ತಳ್ಳಲ್ಪಟ್ಟವರ ಸಂಖ್ಯೆ ಬಹುದೊಡ್ಡದಿದೆ ಎಂದೂ ವರದಿ ಹೇಳುತ್ತಿದೆ. ಕೊರೋನ ಕಾಲದ ಬಳಿಕ ಎದುರಾದ ಆರ್ಥಿಕ ಒತ್ತಡಗಳು ಜನರನ್ನು ಈಗಲೂ ಮಾನಸಿಕ ರೋಗಿಗಳಾಗಿ ಪರಿವರ್ತಿಸುತ್ತಿವೆ. ಕೇವಲ ಶ್ರೀಸಾಮಾನ್ಯರು ಮಾತ್ರವಲ್ಲ, ಉದ್ಯಮಿಗಳು ಕೂಡ ಒತ್ತಡಗಳನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡು ಸುದ್ದಿಯಾದರು. ಕೊರೋನ ಕಾಲದಲ್ಲಿ ದೇಶದ ಮಾನಸಿಕ ಆರೋಗ್ಯ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರೆ ಬಹಳಷ್ಟು ಸಾವುನೋವುಗಳನ್ನು ತಡೆಯಬಹುದಿತ್ತು. ಆದರೆ ಕೊರೋನ ಗದ್ದಲದಲ್ಲಿ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಕೇಳುವವರೇ ಇಲ್ಲ ಎನ್ನುವ ಸ್ಥಿತಿಯಿತ್ತು. ಅದಾಗಲೇ ಚಿಕಿತ್ಸೆ ಪಡೆಯುತ್ತಿದ್ದ ಮಾನಸಿಕ ರೋಗಿಗಳಿಗೂ ಕೊರೋನ ಕಾಲದಲ್ಲಿ ಸೂಕ್ತ ಚಿಕಿತ್ಸೆ ಅಲಭ್ಯವಾಗಿತ್ತು.

ದೇಶದ ಮಾನಸಿಕ ಆರೋಗ್ಯ ಸಂಸ್ಥೆಗಳ ಕುರಿತಂತೆ ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಧ್ಯಯನವೊಂದು ಮಾಡಿದ್ದು, ದೇಶದ ಎಲ್ಲ 46 ಮಾನಸಿಕ ಆರೋಗ್ಯ ಸಂಸ್ಥೆಗಳು ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ ಎನ್ನುವುದನ್ನು ಕಂಡು ಕೊಂಡಿದೆ. ಕೆಲವು ಆರೋಗ್ಯ ಸಂಸ್ಥೆಗಳಿಗೆ ಮಾನವ ಹಕ್ಕು ಆಯೋಗದ ತಂಡ ನೇರವಾಗಿ ಭೇಟಿ ಮಾಡಿದ್ದು, 42 ಆಸ್ಪತ್ರೆಗಳಿಗೆ ತನ್ನ ವಿಶೇಷ ವರದಿಗಾರರ ತಂಡವನ್ನು ಕಳುಹಿಸಿತ್ತು. 2017ರ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆಯ ಅನುಷ್ಠಾನದ ಸ್ಥಿತಿಗತಿಯ ವೌಲ್ಯ ಮಾಪನಕ್ಕಾಗಿ ಆಯೋಗ ಈ ಅಧ್ಯಯನವನ್ನು ಮಾಡಿತ್ತು. ಆಯೋಗವು ಅಧ್ಯಯನದ ಮೂಲಕ ''ದೇಶದ ಎಲ್ಲ ಆಸ್ಪತ್ರೆಗಳು ವೈದ್ಯರು ಮತ್ತು ಸಿಬ್ಬಂದಿಯ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಇದರ ಜೊತೆಜೊತೆಗೆ ಗುಣ ಮುಖರಾದ ರೋಗಿಗಳನ್ನು ಕೂಡ ಬಿಡುಗಡೆ ಮಾಡದೆ ಕಾನೂನು ಬಾಹಿರವಾಗಿ ಆಸ್ಪತ್ರೆಗಳಲ್ಲಿ ಇಟ್ಟುಕೊಳ್ಳಲಾಗುತ್ತಿದೆ'' ಎನ್ನುವುದನ್ನು ಕಂಡುಕೊಂಡಿದೆ. ಬಹುತೇಕ ಆಸ್ಪತ್ರೆಗಳ ಸ್ಥಿತಿಗತಿಗಳು ಮಾನಸಿಕ ರೋಗಿಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. ಭಾರತದಂತಹ ಹಿಂದುಳಿದ ದೇಶಗಳು ಮಾನಸಿಕ ಆರೋಗ್ಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ ಮಾತ್ರವಲ್ಲ ಅದರ ಕುರಿತಂತೆ ಆಂದೋಲನ ರೂಪದಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಯಾಕೆಂದರೆ, ಈ ದೇಶದಲ್ಲಿ ವೌಢ್ಯ ಮತ್ತು ಮಾನಸಿಕ ಅನಾರೋಗ್ಯ ಪರಸ್ಪರ ಕರುಳಬಳ್ಳಿ ಸಂಬಂಧ ಹೊಂದಿದೆ.

ಇಲ್ಲಿ ಮಾನಸಿಕ ಅನಾರೋಗ್ಯದ ಕುರಿತಂತೆ ದೇಶದ ದೊಡ್ಡ ಸಂಖ್ಯೆಯ ಜನರಿಗೆ ಅರಿವೇ ಇಲ್ಲ. ಆ ಬಗ್ಗೆ ಅರಿವಿರುವವರು ಕೂಡ, ಮಾನಸಿಕ ವೈದ್ಯರನ್ನು ಸಂಪರ್ಕಿಸುವ ಬಗ್ಗೆ ಕೀಳರಿಮೆಯನ್ನು, ಹಿಂಜರಿಕೆಯನ್ನು ಹೊಂದಿದ್ದಾರೆ. ಸ್ಕಿಜೋಫ್ರೇನಿಯಾದಂತಹ ಗಂಭೀರ ಕಾಯಿಲೆಗಳ ಬಗ್ಗೆ ವಿದ್ಯಾವಂತರಿಗೂ ಮಾಹಿತಿಯಿಲ್ಲ. ಇವರೆಲ್ಲರು ಸುಲಭದಲ್ಲಿ ಮಾಟ, ಮಂತ್ರದಂತಹ ವಾಮಾಚಾರ ನಡೆಸುವವರಿಗೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ, ಮಾನಸಿಕ ಕಾಯಿಲೆ ಪೀಡಿತರನ್ನು ಪುರೋಹಿತರು, ಮಾಂತ್ರಿಕರು ಎಂದು ಗುರುತಿಸಿಕೊಂಡವರು ದೊಡ್ಡ ಮಟ್ಟದಲ್ಲಿ ಶೋಷಣೆ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಮಾಟಗಾತಿ, ಮಂತ್ರವಾದಿಗಳೆಂದು ಆರೋಪಿಸಿ ಹತ್ಯೆಗಳೂ ನಡೆಯುತ್ತವೆ. ಇಂದಿಗೂ ಈ ದೇಶದಲ್ಲಿ ನರಬಲಿ ಅಸ್ತಿತ್ವದಲ್ಲಿದೆ. ಇವೆಲ್ಲವೂ ಮಾನಸಿಕ ಆರೋಗ್ಯದೊಂದಿಗೆ ತಳಕುಹಾಕಿಕೊಂಡಿವೆ. ಈ ದೇಶದಲ್ಲಿ ವೌಢ್ಯಗಳ ವಿರುದ್ಧ ಕಾನೂನು ಜಾರಿಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಾನಸಿಕ ಆರೋಗ್ಯದ ಕುರಿತಂತೆ ಜಾಗೃತಿಯನ್ನು ಮೂಡಿಸುವುದು ಕೂಡ ವೌಢ್ಯಗಳ ವಿರುದ್ಧ ನಡೆಸುವ ಆಂದೋಲವೇ ಆಗಿದೆ ಎನ್ನುವುದನ್ನು ನಾವು ಮರೆತಿದ್ದೇವೆ. ದೇಹ ಹೇಗೆ ಒತ್ತಡವನ್ನು ಅನುಭವಿಸಿದಾಗ ಕಾಯಿಲೆಗೀಡಾಗುತ್ತದೆಯೋ ಹಾಗೆಯೇ ಮನಸ್ಸು ಒತ್ತಡಕ್ಕೀಡಾದಾಗ ಅಸ್ವಸ್ಥಗೊಳ್ಳುತ್ತದೆ ಎನ್ನುವ ಅರಿವನ್ನು ಜನರಲ್ಲಿ ಮೂಡಿಸುವುದು ಹಿಂದೆಂದಿಗಿಂತಲೂ ಅತ್ಯಗತ್ಯವಾಗಿದೆ. ಯಾಕೆಂದರೆ, ಇಂದು ಖಿನ್ನತೆ ಮತ್ತು ಆತಂಕದಂತಹ ಸ್ಥಿತಿಗೆ ಬಲಿಯಾಗುವವರಲ್ಲಿ ಯುವ ಸಮುದಾಯ ಮತ್ತು ಮಹಿಳೆಯರೇ ಹೆಚ್ಚು. ದೇಹ ಅಸ್ವಸ್ಥಗೊಂಡಾಗ ವೈದ್ಯರನ್ನು ಸಂಪರ್ಕಿಸುವಷ್ಟೇ ಸಹಜವಾಗಿ, ಮನಸ್ಸು ಅಸ್ವಸ್ಥಗೊಂಡಾಗಲೂ ವೈದ್ಯರನ್ನು ಸಂಪರ್ಕಿಸುವ ಅಗತ್ಯವನ್ನು ಜನರಿಗೆ ತಿಳಿ ಹೇಳುವ ಪ್ರಯತ್ನವನ್ನು ಮಾಡಬೇಕು.

ಮಾನಸಿಕ ಆರೋಗ್ಯ ಕೇಂದ್ರಗಳ ಕೊರತೆ ಮತ್ತು ಮಾಹಿತಿಗಳ ಕೊರತೆಗಳನ್ನು ಕೆಲವು ಖಾಸಗಿ ವೈದ್ಯರು ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ. ಕಾಯಿಲೆಗಳ ಕುರಿತಂತೆ ಇರುವ ಮುಜುಗರ ಮತ್ತು ಕೀಳರಿಮೆಗಳಿಂದಾಗಿ, ಮಾನಸಿಕ ವೈದ್ಯರ ಬೇಜಬ್ದಾರಿಗಳನ್ನು ಬಹಿರಂಗ ಪಡಿಸಲು ರೋಗಿಗಳು ಸಿದ್ಧರಿರುವುದಿಲ್ಲ. ಹಣಕ್ಕಾಗಿ ರೋಗಿಗಳನ್ನು ಶೋಷಣೆ ಮಾಡುವುದು, ಅನಗತ್ಯ ಔಷಧಿಗಳನ್ನು ಅವರ ಮೇಲೆ ಹೇರಿ ಅವರನ್ನು ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದಿದ್ದರೂ ಇಟ್ಟುಕೊಳ್ಳುವುದು ಇತ್ಯಾದಿಗಳು ನಿರಂತರವಾಗಿ ನಡೆಯುತ್ತಿವೆ. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಬರೇ ದೇಹ ಮಾತ್ರವಲ್ಲ ಮನಸ್ಸು ಕೂಡ ಆರೋಗ್ಯವಾಗಿರಬೇಕು. ಒತ್ತಡಗಳನ್ನು ಎದುರಿಸುವ ಶಕ್ತಿಯನ್ನು ಆರೋಗ್ಯವಂತ ದೇಹ ಮಾತ್ರ ನೀಡುವುದಲ್ಲ, ಮನಸ್ಸು ಕೂಡ ನೀಡುತ್ತದೆ. ದೇಶದಲ್ಲಿ ಆತ್ಮಹತ್ಯೆ, ಕೊಲೆ, ಹಿಂಸೆ ಇತ್ಯಾದಿಗಳು ಹೆಚ್ಚುತ್ತಿರುವಾಗ ಅವುಗಳನ್ನು ಒಂದು ರೋಗವಾಗಿ ನೋಡಿ ಚಿಕಿತ್ಸೆ ನೀಡಲು ಮಾನಸಿಕ ವೈದ್ಯರ ಅಗತ್ಯ ಹೆಚ್ಚಿದೆ. ಆದುದರಿಂದ ಸರಕಾರ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಪುನರುಜ್ಜೀವಗೊಳಿಸಲು, ಮಾನಸಿಕ ಆರೋಗ್ಯದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಯೋಜನೆಗಳನ್ನು ರೂಪಿಸಬೇಕಾಗಿದೆ. ಅದಕ್ಕಾಗಿ ಹೆಚ್ಚಿನ ಅನುದಾನಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಿಡುಗಡೆ ಮಾಡಬೇಕಾಗಿದೆ.

Similar News