ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆಯ ಅಗತ್ಯವಿಲ್ಲ: ಬಿಹಾರ ಸಿಎಂ ನಿತೀಶ್ ಕುಮಾರ್

Update: 2023-01-30 05:51 GMT

ಪಾಟ್ನಾ: ಜನಸಂಖ್ಯಾ ನಿಯಂತ್ರಣ ಕಾಯ್ದೆಯು ( population control law) ನಕಾರಾತ್ಮಕ ಪರಿಣಾಮ ಹೊಂದಿರುವುದರಿಂದ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಯ ಅಗತ್ಯವಿಲ್ಲ ಎಂದು ಪ್ರತಿಪಾದಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar), ಜನಸಂಖ್ಯಾ ಕಾಯ್ದೆ ಪರ ವಕಾಲತ್ತು ವಹಿಸುತ್ತಿರುವವರು ಮೂರ್ಖ ಮಾತುಕತೆಗಳಲ್ಲಿ ತೊಡಗಿದ್ದಾರೆ ಎಂದು ಕಿಡಿ ಕಾರಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಕೈಮುರ್ ಜಿಲ್ಲೆಯ ಭಭುವಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಬಾರದು. ಅಂತಹ ಕಾಯ್ದೆಯ ಪರ ವಕಾಲತ್ತು ವಹಿಸುತ್ತಿರುವವರು ಮೂರ್ಖ ಮಾತುಕತೆಗಳಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ.

ಇದರೊಂದಿಗೆ ದೇಶದಲ್ಲಿ ವಿರೋಧ ಪಕ್ಷಗಳು ದೊಡ್ಡ ಮಟ್ಟದಲ್ಲಿ ಒಗ್ಗೂಡಬೇಕಿದೆ ಎಂದು ಕರೆ ನೀಡಿದ ಅವರು, ಕಾಂಗ್ರೆಸ್ ನೇತೃತ್ವದ ಭಾರತ್ ಜೋಡೊ ಯಾತ್ರೆ ಸಮಾರೋಪಗೊಂಡ ನಂತರ ವಿರೋಧ ಪಕ್ಷಗಳಿಗಾಗಿ ದೊಡ್ಡ ವೇದಿಕೆ ನಿರ್ಮಿಸುವ ಕುರಿತು ಮಾತುಕತೆ ನಡೆಸಲಾಗುವುದು ಎಂದೂ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ತಮ್ಮ ಪಕ್ಷದ ವತಿಯಿಂದ ನಡೆಯುತ್ತಿರುವ 'ಸಮಾಧಾನ ಯಾತ್ರೆ'ಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸ್ವಂತ ಕಾರ್ಯಕ್ರಮವು ಮುಕ್ತಾಯಗೊಂಡ ನಂತರ ವಿರೋಧ ಪಕ್ಷಗಳ ಐಕ್ಯತೆ ಕುರಿತು ಮಾತುಕತೆ ನಡೆಸಲಾಗುವುದು. ಎಲ್ಲ ವಿರೋಧ ಪಕ್ಷಗಳೂ ಸಾಮಾನ್ಯ ವೇದಿಕೆಯಡಿ ಒಗ್ಗೂಡಬೇಕು ಎಂಬುದು ನನ್ನ ಭಾವನೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಅಮಿತ್ ಶಾ ಪಾದಯಾತ್ರೆ ಮಾಡಲಿ: ರಾಹುಲ್ ಸವಾಲು

Similar News