ಬೆಂಗಳೂರು | ಅಪಘಾತವೆಸಗಿ 5 ಕಿಲೋಮೀಟರ್ ಹಿಂಬಾಲಿಸಿ ದಂಪತಿಗೆ ಹಲ್ಲೆಗೆ ಯತ್ನಿಸಿದ ಆರೋಪಿಗಳ ಬಂಧನ

Update: 2023-01-30 12:04 GMT

ಬೆಂಗಳೂರು, ಜ.30: ದಂಪತಿ ಕಾರಿಗೆ ಡಿಕ್ಕಿ ಹೊಡೆದು 5 ಕಿಲೋ ಮೀಟರ್ ನಷ್ಟು ಹಿಂಬಾಲಿಸಿಕೊಂಡು ಬಂದು ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದ ಆರೋಪ ಪ್ರಕರಣ ಸಂಬಂಧ ಇಬ್ಬರನ್ನು ಬೆಳ್ಳಂದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಯುವಕರನ್ನು ವೃತ್ತಿಯಲ್ಲಿ ಮೀನು ಮಾರಾಟಗಾರ ಧನುಷ್ (24), ರಕ್ಷಿತ್ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 384 (ಸುಲಿಗೆ), 504 (ಶಾಂತಿ ಕದಡುವ ಉದ್ದೇಶಪೂರ್ವಕ ಅವಮಾನ) ಮತ್ತು 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ರಸ್ತೆಯಲ್ಲಿ ಟೆಕ್ಕಿ ದಂಪತಿಗಳಾದ ಅಂಕಿತಾ ಮತ್ತು ಕುಶ್ ಜೈಸ್ವಾಲ್ ಅವರು ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ನಿನ್ನೆ ಮುಂಜಾನೆ ದುಷ್ಕರ್ಮಿಗಳು ಉದ್ದೇಶ ಪೂರಕವಾಗಿ ಬಂದು ಅವರ ಕಾರಿಗೆ ಢಿಕ್ಕಿ ಹೊಡೆದಿದ್ದಾರೆ. ಆನಂತರ, ದಂಪತಿಯನ್ನು ಸುಮಾರು 5 ಕಿಲೋ ಮೀಟರ್ ದೂರ ಹಿಂಬಾಲಿಸಿಕೊಂಡು ಬಂದು ಹಲ್ಲೆಗೆ ಯತ್ನಿಸಿದ್ದರು. ಈ ಕುರಿತ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೂರ್ವ ವಿಭಾಗದ ಹೆಚ್ಚುವರಿ ಕಮಿಷನರ್, ವೈಟ್‍ಫೀಲ್ಡ್ ಡಿಸಿಪಿ ಮತ್ತು ಬೆಳ್ಳಂದೂರು ಪೊಲೀಸರಿಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Similar News