ಡಿಕೆಶಿ ಸಹೋದರಿಯ ಪತಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ

Update: 2023-01-30 12:17 GMT

ಬೆಂಗಳೂರು, ಜ.30: ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಡಿ.ಕೆ.ಶಿವಕುಮಾರ್ ಸಹೋದರಿಯ ಪತಿ ಸಿ.ಪಿ.ಶರತ್‍ ಚಂದ್ರ ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು. 

ಸೋಮವಾರ ನಗರದಲ್ಲಿರುವ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಪಕ್ಷದ ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಮ್ಮುಖದಲ್ಲಿ ಅವರು ಪಕ್ಷ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ನಾಯಕ ಸಿ.ಪಿ.ಶರತ್ ಚಂದ್ರರವರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗುತ್ತಿರುವುದು ಆ ಭಾಗದಲ್ಲಿನ ಪಕ್ಷದ ಸಂಘಟನೆಗೆ ಆನೆಬಲ ತಂದು ಕೊಡಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಂತಾದ ಸಾಂಪ್ರದಾಯಿಕ ಪಕ್ಷಗಳ ನಿಷ್ಕ್ರಿಯತೆ, ಭ್ರಷ್ಟಾಚಾರ ಹಾಗೂ ಜನವಿರೋಧಿ ನಿಲುವುಗಳಿಂದಾಗಿ ಆ ಪಕ್ಷಗಳ ಪ್ರಾಮಾಣಿಕ ನಾಯಕರು ಆಮ್ ಆದ್ಮಿ ಪಾರ್ಟಿ ಸೇರುತ್ತಿದ್ದಾರೆ ಎಂದು ಹೇಳಿದರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಸಿ.ಪಿ.ಶರತ್ ಚಂದ್ರ, ಆಮ್ ಆದ್ಮಿ ಪಾರ್ಟಿಯು ದಿಲ್ಲಿ ಹಾಗೂ ಪಂಜಾಬ್‍ನಲ್ಲಿ ನೀಡುತ್ತಿರುವ ಆಡಳಿತವು ಅತ್ಯಂತ ಜನಪರ ಹಾಗೂ ದಕ್ಷವಾಗಿದೆ. ದಿಲ್ಲಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಕರ್ನಾಟಕದಲ್ಲೂ ಪ್ರಾಮಾಣಿಕ, ದಕ್ಷ ಹಾಗೂ ಜನಪರ ಆಡಳಿತ ಬರಬೇಕೆಂಬ ಸದುದ್ದೇಶದಿಂದ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಈ ವೇಳೆ ಪಕ್ಷದ ಮುಖಂಡ ಝಫರ್ ಮೊಹಿಯುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News