ನಿವೃತ್ತ ಅಂಗನವಾಡಿ ನೌಕರರಿಗೆ ಮಾಸಿಕ ಪೆನ್ಷನ್ ಜಾರಿಗೆ ಒತ್ತಾಯ

Update: 2023-01-30 12:54 GMT

ಬೆಂಗಳೂರು, ಜ. 30: ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಮತ್ತು ಮಾಸಿಕ ಪೆನ್ಷನ್ ಜಾರಿಗೊಳಿಸುವಂತೆ ಒತ್ತಾಯಿಸಿ ನಿವೃತ್ತ ಅಂಗನವಾಡಿ ನೌಕರರು ಎಐಟಿಯುಸಿ ನೇತೃತ್ವದಲ್ಲಿ ಸೋಮವಾರದಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸುಮಾರು ಮೂರು ದಶಕಗಳ ಕಾಲ ನಿರಂತರವಾಗಿ ದುಡಿದು ನಿವೃತ್ತರಾಗಿದ್ದೇವೆ. ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ವೃದ್ಧಾಪ್ಯ ಜೀವನವನ್ನು ಅತ್ಯಂತ ಜಿಗುಪ್ಸೆಯಿಂದ ಕಳೆಯುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ನಿವೃತ್ತಿಗೊಂಡಾಗ ಕನಿಷ್ಠ ಪ್ರಮಾಣದ ಹಿಡಿ ಗಂಟನ್ನು ನೀಡಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರಕಾರಗಳು ನಿವೃತ್ತಿ ಜೀವನ ನಿರ್ವಹಣೆಗಾಗಿ ಅಗತ್ಯ ಇರುವ ಪಿಂಚಣಿ-ಆರೋಗ್ಯದಂತಹ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಜಾರಿಗೊಳಿಸಲು ಆಸಕ್ತಿವಹಿಸುವುದಿಲ್ಲ. ಇದರ ಪರಿಣಾಮ ನಿವೃತ್ತಿಗೊಂಡಿರುವ ಸಾವಿರಾರು ಸಂಖ್ಯೆಯ ಕಾರ್ಯಕರ್ತೆ-ಸಹಾಯಕಿಯರು ನರಕಯಾತನೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರವು ನಿವೃತ್ತ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಾಯಕಿಯರಿಗೆ ಕನಿಷ್ಠ 5ಸಾವಿರ ರೂ. ಮಾಸಿಕ ಪಿಂಚಣಿಯನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು. ಗ್ರಾಚ್ಯುಟಿ ಪಡೆಯಲು ಅಂಗನವಾಡಿ ಉದ್ಯೋಗಿಗಳು ಅರ್ಹರು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಹಾಗಾಗಿ ರಾಜ್ಯದಲ್ಲಿಯೀ ಗ್ರಾಚ್ಯುಟಿ ಸೌಲಭ್ಯವನ್ನು ಶಾಸನಾತ್ಮಕವಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

‘ಗಾಂಧಿ ಸಂಸ್ಮರಣಾ ದಿನವಾದ ಜ.30ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಿವೃತ್ತ ಅಂಗನವಾಡಿ ನೌಕರರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಸರಕಾರ ಅವರ ಬೇಡಿಕೆಗಳನ್ನು ಈಡೇರಿಸಿದರೆ, ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ನಿವೃತ್ತ ನೌಕರರಿಗೆ ಉಪಯೋಗವಾಲಿದೆ. ಈಗಾಗಲೇ ನಿವೃತ್ತ ಅಂಗನವಾಡಿ ನೌಕರರು ಬಿ.ಪಿ., ಶುಗರ್‍ನಂತಹ ಕಾಯಿಲೆಯಿಂದ ಬಳಲುತ್ತಿದ್ದಾರೆ’

-ಬಿ.ಅಮ್ಜದ್, ಎಐಟಿಯುಸಿ ಮುಖಂಡ

Similar News