ಮತದಾರರಿಗೆ ತಲಾ 6 ಸಾವಿರ ರೂ. ಆಮಿಷ ಒಡ್ಡಿದ ಆರೋಪ: ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Update: 2023-01-30 14:23 GMT

ಬೆಂಗಳೂರು, ಜ.30: ಬಿಜೆಪಿ ವಿರುದ್ಧ ಚುನಾವಣಾ ಅಕ್ರಮದ ಸರಣಿ ಆರೋಪ ಮಾಡುತ್ತಿರುವ ಕಾಂಗ್ರೆಸ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅಕ್ರಮಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿದೆ.

ಸೋಮವಾರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಶಾಸಕ ರಿಝ್ವಾನ್ ಅರ್ಶದ್, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದು, ಬಿಜೆಪಿ ಶಾಸಕರು ಮತದಾರರಿಗೆ 6ಸಾವಿರ ರೂ.ಲಂಚ ನೀಡುವ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮತದಾರರಿಗೆ ಆಮಿಷವೊಡ್ಡಿರುವ ಆರೋಪದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಇದಕ್ಕೆ ಸಂಬಂಧಿಸಿದಂತೆ 30 ಸಾವಿರ ಕೋಟಿ ರೂ.ಹಣದ ಹಿನ್ನೆಲೆಯ ತನಿಖೆಗೆ ಐಟಿ ಇಲಾಖೆಗೆ ಸೂಚಿಸಬೇಕು. ಅಲ್ಲದೆ, ಅಕ್ರಮದ ಮೂಲಕ ರೂವಾರಿಗಳಾದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬೊಮ್ಮಾಯಿ, ಶಾಸಕ ರಮೇಶ್ ಜಾರಕಿಹೊಳಿ ಮೇಲೆ ಎಫ್‍ಐಆರ್ ದಾಖಲಿಸಲು ಆಯೋಗ ಸೂಚನೆ ನೀಡಬೇಕು. ರಮೇಶ್ ಜಾರಕಿಹೊಳಿ ಹಾಗೂ ಬೊಮ್ಮಾಯಿಯನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ನಡ್ಡಾ ಹಾಗೂ ಕಟೀಲ್‍ಗೂ ನೋಟಿಸ್ ನೀಡಿ ಎಂಪಿ ಸ್ಥಾನಗಳಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನದ ಆರ್ಟಿಕಲ್ 324 ರಂತೆ ಮುಕ್ತ ನ್ಯಾಯ ಸಮ್ಮತ ಚುನಾವಣೆ ನಡೆಸಬೇಕೆಂದು ಆಯೋಗದ ಸಿಇಓಗೆ ಮನವಿ ಮಾಡಿದ್ದೇವೆ. ಅಕ್ರಮವನ್ನು ನಾವು ಮಾಡಿರಲಿ, ಮತ್ತೊಬ್ಬರು ಮಾಡಿರಲಿ ಅದನ್ನು ನಿಯಂತ್ರಿಸುವುದು, ಕ್ರಮ ಕೈಗೊಳ್ಳುವುದು ಆಯೋಗದ ಕರ್ತವ್ಯ. ಆ ಕೆಲಸವನ್ನು ಆಯೋಗ ಮಾಡಬೇಕು. ನಮ್ಮ ಮಾಹಿತಿ ಪ್ರಕಾರ ನಮ್ಮ ಶಾಸಕರು ಆ ರೀತಿ ಮಾಡಿಲ್ಲ. ಬಿಜೆಪಿಯವರ ಹತ್ತಿರ ಆ ಬಗ್ಗೆ ಮಾಹಿತಿ ಇದ್ದರೆ, ಅದನ್ನು ಆಯೋಗಕ್ಕೆ ಕೊಡಬೇಕು. ಹಾಗಿದ್ದಲ್ಲಿ ಕ್ರಮ ಜರುಗಿಸಲು ನಮ್ಮ ಅಭ್ಯಂತರ ಇಲ್ಲ ಎಂದರು.

ಪ್ರತಿ ಮತದಾರರಿಗೆ ತಲಾ 6ಸಾವಿರ ರೂ. ಕೊಡುತ್ತೇವೆಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಾವು ಈಗಾಗಲೇ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಆದರೆ ಪೊಲೀಸರು ಈಗಲೂ ಕಾನೂನು ಸಲಹೆ ಪಡೆಯುತ್ತೇವೆಂದು ಹೇಳುತ್ತಿದ್ದಾರೆ. ಚುನಾವಣೆ ಆಯೋಗಕ್ಕೆ ಸಂಬಂಧಿಸಿದ ವಿಷಯ ಎಂದಿದ್ದಾರೆ. ಹೀಗಾಗಿ ಆಯೋಗಕ್ಕೆ ದೂರು ಕೊಟ್ಟಿದ್ದೇವೆ ಎಂದು ವಿ.ಎಸ್.ಉಗ್ರಪ್ಪ ತಿಳಿಸಿದರು.

Similar News