ಫೆ.5 ರಿಂದ 7ರ ವರೆಗೆ ಬೆಂಗಳೂರಿನಲ್ಲಿ ಮೊದಲ ಜಿ20 ಇಂಧನ ಪರಿವರ್ತನೆ ಕಾರ್ಯ ಗುಂಪಿನ ಸಭೆ: ಅಲೋಕ್ ಕುಮಾರ್

Update: 2023-01-30 14:30 GMT

ಬೆಂಗಳೂರು, ಜ.30: ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಜಿ 20 ಇಂಧನ ಪರಿವರ್ತನೆ ಕಾರ್ಯ ಗುಂಪಿನ(ಎನರ್ಜಿ ಟ್ರಾನ್ಸಿಷನ್ ವರ್ಕಿಂಗ್ ಗ್ರೂಪ್-ಇಟಿಡಬ್ಲ್ಯೂಜಿ) ಸಭೆ ಫೆ.5 ರಿಂದ 7 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಅಲೋಕ್ ಕುಮಾರ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿ 20 ಸದಸ್ಯ ರಾಷ್ಟ್ರಗಳು, ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್‍ಲ್ಯಾಂಡ್ಸ್, ನೈಜೀರಿಯಾ, ಒಮಾನ್, ಸಿಂಗಾಪುರ, ಯುಎಇ ಮತ್ತು ಸ್ಪೇನ್ ಸೇರಿದಂತೆ ಒಂಭತ್ತು ವಿಶೇಷ ಆಹ್ವಾನಿತ ಅತಿಥಿ ರಾಷ್ಟ್ರಗಳು ಸಹಿತ 150ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದರ ಜೊತೆಗೆ ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್, ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್  ಪ್ರೋಗ್ರಾಂ (ಯುಎನ್‍ಡಿಪಿ), ಇಂಟರ್ ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ), ಕ್ಲೀನ್ ಎನರ್ಜಿ ಮಿನಿಸ್ಟೀರಿಯಲ್ (ಸಿಇಎಂ), ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (ಯುಎನ್‍ಇಪಿ), ಇಂಟರ್‍ನ್ಯಾಷನಲ್ ಸೋಲಾರ್ ಅಲೈಯನ್ಸ್ (ಐಎಸ್‍ಎ), ಯುನೈಟೆಡ್ ನೇಷನ್ಸ್ ಇಂಟರ್‍ನ್ಯಾಷನಲ್ ಡೆವಲಪ್ ಮೆಂಟ್ ಆರ್ಗನೈಸೇಶನ್ (ಯುನಿಡೋ) ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಅಲ್ಲದೆ, ಏಷ್ಯಾ ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ಯುಎನ್‍ಇಎಸ್ ಸಿಎಪಿ), ಆರ್.ಡಿ. 20 ಮತ್ತು ಜ್ಞಾನಕ್ಕೆ ಸಂಬಂಧಿಸಿದ ಪಾಲುದಾರರು, ಸಂಬಂಧಿತ ಸಚಿವಾಲಯಗಳ ಹಿರಿಯ ಸರಕಾರಿ ಅಧಿಕಾರಿಗಳು ಇಟಿಡಬ್ಲ್ಯೂಜಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕವು ಸಭೆಗೆ ಬೆಂಬಲ ಮತ್ತು ಸಮನ್ವಯವನ್ನು ಒದಗಿಸುತ್ತಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.

ಇಟಿಡಬ್ಲ್ಯೂಜಿ ಸಭೆಯು ಆರು ಆದ್ಯತೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. (1) ತಂತ್ರಜ್ಞಾನದ ಅಂತರಗಳನ್ನು ಪರಿಹರಿಸುವ ಮೂಲಕ ಇಂಧನ ಪರಿವರ್ತನೆ (2) ಇಂಧನ ಪರಿವರ್ತನೆಗೆ ಕಡಿಮೆ ವೆಚ್ಚದ ಹಣಕಾಸು (3) ಇಂಧನ ಭದ್ರತೆ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳು (4) ಇಂಧನ ದಕ್ಷತೆ, ಕೈಗಾರಿಕಾ ಕ್ಷೇತ್ರದಲ್ಲಿ ಕಡಿಮೆ ಇಂಗಾಲದ ಪರಿವರ್ತನೆಗಳು ಮತ್ತು ಜವಾಬ್ದಾರಿಯುತ ಬಳಕೆ, (5) ಭವಿಷ್ಯಕ್ಕಾಗಿ ಇಂಧನಗಳು ಮತ್ತು (6) ಶುದ್ಧ ಇಂಧನ ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ನ್ಯಾಯಯುತ, ಕೈಗೆಟುಕುವ ಮತ್ತು ಅಂತರ್ಗತ ಇಂಧನ ಪರಿವರ್ತನೆ ಮಾರ್ಗ ಎಂದು ಅವರು ವಿವರಿಸಿದರು.

ಇಟಿಡಬ್ಲ್ಯೂಜಿ ಸಭೆಯ ಅಂಗವಾಗಿ, ಪ್ರತಿನಿಧಿಗಳು ಇನ್ಫೋಸಿಸ್ ಗ್ರೀನ್ ಬಿಲ್ಡಿಂಗ್ ಕ್ಯಾಂಪಸ್ ಮತ್ತು ಪಾವಗಡ ಸೋಲಾರ್ ಪಾರ್ಕ್‍ಗೆ ಭೇಟಿ ನೀಡಲಿದ್ದು, ನವೀಕರಿಸಬಹುದಾದ ಇಂಧನ ವಲಯಕ್ಕೆ ಭಾರತದ ಉತ್ತೇಜನ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸುವ ಪ್ರಯತ್ನಗಳನ್ನು ವೀಕ್ಷಿಸಲಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದರು.

ಭಾರತ ಸರಕಾರದ ವಿದ್ಯುತ್ ಸಚಿವಾಲಯವು ಇಟಿಡಬ್ಲ್ಯೂಜಿಯ ನೋಡಲ್ ಸಚಿವಾಲಯವಾಗಿದೆ ಮತ್ತು ಕೇಂದ್ರೀಕೃತ ಆದ್ಯತೆಯ ಕ್ಷೇತ್ರಗಳ ಬಗ್ಗೆ ಚರ್ಚೆಗಳು ಮತ್ತು ಮಾತುಕತೆಗಳನ್ನು ಮುನ್ನಡೆಸುತ್ತದೆ. ಭಾರತದ ಅಧ್ಯಕ್ಷತೆಯಲ್ಲಿ, ನಾಲ್ಕು ಇಟಿಡಬ್ಲ್ಯೂಜಿ ಸಭೆಗಳು, ವಿವಿಧ ನೇಪಥ್ಯ ಕಾರ್ಯಕ್ರಮಗಳು ಮತ್ತು ಸಚಿವರ ಸಭೆಯನ್ನು ಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಶುದ್ಧ ಇಂಧನ ಪರಿವರ್ತನೆಯಲ್ಲಿ ಜಾಗತಿಕ ಸಹಕಾರದ ಉದ್ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ ಮತ್ತು ಅದನ್ನು ಸುಸ್ಥಿರ ಆರ್ಥಿಕ ಅಭಿವೃದ್ಧಿ ಕಾರ್ಯಸೂಚಿಯ ಕೇಂದ್ರಬಿಂದುವಾಗಿಸುವ ನಿಟ್ಟಿನಲ್ಲಿ ಹಿಂದಿನ ಅಧ್ಯಕ್ಷ ರಾಷ್ಟ್ರಗಳು ಕೈಗೊಂಡ ಪ್ರಯತ್ನಗಳು ಮತ್ತು ಫಲಿತಾಂಶಗಳನ್ನು ಆಧರಿಸಿ ಭಾರತದ ಜಿ 20 ಅಧ್ಯಕ್ಷತೆಯು ಮುಂದಿನ ಹೆಜ್ಜೆಯನ್ನು ಇಡಲಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠೀಯಲ್ಲಿ ಬೆಂಗಳೂರಿನ ಪಿಐಬಿಯ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ. ರವೀಂದ್ರ ಉಪಸ್ಥಿತರಿದ್ದರು.

Similar News