ಮತದಾರರ ಪಟ್ಟಿಯಿಂದ ಮುಸ್ಲಿಮ್-ಕ್ರೈಸ್ತ ಮತದಾರರ ಹೆಸರು ಡಿಲೀಟ್; ಆಯೋಗಕ್ಕೆ ಶಾಸಕ ರಿಝ್ವಾನ್ ಅರ್ಶದ್ ದೂರು

Update: 2023-01-30 15:46 GMT

ಬೆಂಗಳೂರು, ಜ.30: ಶಿವಾಜಿನಗರ ಕ್ಷೇತ್ರದ ಮತದಾರರ ಪಟ್ಟಿ ಡಿಲೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಿಝ್ವಾನ್ ಅರ್ಶದ್, ಮುಖ್ಯ ಚುನಾವಣಾಧಿಕಾರಿ ಮನೋಜ್ ಮೀನಾ ಅವರಿಗೆ ಸೋಮವಾರ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಸೋಮವಾರ ಮನವಿ ಮಾಡಿದ್ದಾರೆ. 

ಶಿವಾಜಿನಗರದ 9,195 ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕಲಾಗುತ್ತಿದ್ದು, ಇದರಲ್ಲಿ 8 ಸಾವಿರಕ್ಕೂ ಹೆಚ್ಚು ಮತದಾರರು ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಪಟ್ಟಿಯಿಂದ ಡಿಲೀಟ್ ಆಗಿರುವ 9,195 ಮಂದಿ ಮತದಾರರಿಗೂ ನೋಟಿಸ್ ನೀಡಿದ್ದಾರೆ. ಶಿವಾಜಿನಗರದ 193 ಮತಗಟ್ಟೆಗಳಲ್ಲಿ 91 ಮತಗಟ್ಟೆಗಳಲ್ಲಿ ಮಾತ್ರ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯುವ ಬಗ್ಗೆ ಗುರುತಿಸಲಾಗಿದೆ. ಅವರೆಲ್ಲರೂ ಬಡವರು, ಅನಕ್ಷರಸ್ಥರಾಗಿದ್ದು, ಈ ಮತದಾರರಿಗೆ ಮತಪಟ್ಟಿ ಸೇರ್ಪಡೆ ಹಾಗೂ ಅಳಿಸುವ ಬಗ್ಗೆ ಉತ್ತರ ನೀಡಲು ಗೊತ್ತಿಲ್ಲ.

ಈಗಾಗಲೇ ಅಂತಿಮ ಮತಪಟ್ಟಿ ಪರಿಷ್ಕರಣೆ ಆಗಿದ್ದು, ಅದರಲ್ಲಿ 17ಸಾವಿರ ಮಂದಿ ಮತದಾರರನ್ನು ಮತ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅಂತಿಮ ಪರಿಷ್ಕರಿಣೆ ನಂತರವೂ 9,195 ಮಂದಿಗೆ ನೋಟಿಸ್ ನೀಡಲಾಗಿದೆ. ಅಂತಿಮ ಪಟ್ಟಿ ಪರಿಷ್ಕರಣೆ ಬಳಿಕ ನೋಟಿಸ್ ನೀಡಿರುವುದು ಚುನಾವಣಾ ತಂತ್ರಗಾರಿಕೆಯ ಪ್ರಯತ್ನವಾಗಿದೆ. ಆಯೋಗ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ರಿಝ್ವಾನ್ ಅರ್ಶದ್ ಒತ್ತಾಯಿಸಿದರು.

Similar News