ಅಜ್ಮೀರ್ ದರ್ಗಾಕ್ಕೆ 'ಚಾದರ್' ಸಮರ್ಪಿಸಿದ ಬಿಜೆಪಿ ಶಾಸಕ ಉದಯ್ ಗರುಡಾಚಾರ್

Update: 2023-01-30 17:06 GMT

ಬೆಂಗಳೂರು, ಜ.30: ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಅಜ್ಮೀರ್ ದರ್ಗಾದಲ್ಲಿ 811ನೆ ಉರುಸ್‍ ಹಿನ್ನೆಲೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು ಚಾದರ್ ಸಮರ್ಪಿಸಿದ್ದಾರೆ.

ನಗರದ ಚಾಮರಾಜಪೇಟೆಯ ಐತಿಹಾಸಿಕ ದರ್ಗಾ ಹಝ್ರತ್ ಸೆಯ್ಯದ್ ಸಫ್ದಾರ್ ಅಲಿ ಶಾ ಖಾದ್ರಿ ಹಾಗೂ ಹಝ್ರತ್ ಶಂಶೀರ್ ಅಲಿ ಶಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ ಅವರು, ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ ನೇತೃತ್ವದಲ್ಲಿ ಅಝ್ಮಿರ್ ದರ್ಗಾಕ್ಕೆ ಚಾದರ್ ಸಮರ್ಪಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದಯ್ ಗರುಡಾಚಾರ್, ಸಮಾಜದಲ್ಲಿ ಎಲ್ಲರೂ ಒಗ್ಗೂಡಿ ಬದುಕು ಕಟ್ಟಿಕೊಂಡರೆ ಮಾತ್ರ ದೇಶ ಪ್ರಗತಿಯಲ್ಲಿ ಸಾಗಲಿದೆ.ಹೀಗಾಗಿ, ಸೌಹಾರ್ದತೆಯ ಕಾರ್ಯಕ್ರಮಗಳಿಗೆ ನಾವು ಸದಾ ಬೆಂಬಲ ನೀಡುತ್ತೇನೆ ಎಂದು ಹೇಳಿದರು.

ಭಾರತದ ನಾಗರಿಕರು ಸೌಹಾರ್ದತೆ ಬೆಳಸಿಕೊಳ್ಳಬೇಕು. ಧಾರ್ಮಿಕ, ಪ್ರಾದೇಶಿಕ ಮತ್ತು ಭಾಷಾವಾರು ಪ್ರತ್ಯೇಕತೆಯನ್ನು ಮೀರಿ ನಿಂತು ಸಹೋದರಭಾವ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸೂಫಿ ವಾಲಿಬಾ ಮಾತನಾಡಿ, ಸೌಹಾರ್ದತೆ ಎಂಬುದು ಮಾತಿನಲ್ಲಿ ಅಲ್ಲ. ಅದು ಲೋಕ ಜೀವನದಲ್ಲಿ ಹಾಗೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಧರ್ಮ, ನಂಬಿಕೆ, ಕರುಣೆ ಯಾವ ಕಾಲದಲ್ಲಿ ನಮ್ಮನ್ನು ಕೈಕೊಡುತ್ತದೆ ಎಂಬ ಭಯ ನಮ್ಮಲ್ಲಿ ಆವರಿಸುತ್ತದೆ. ಪರಸ್ಪರ ಸಂಬಂಧಗಳು ಹೆಣೆಯುವುದು ಅತ್ಯಂತ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ದರ್ಗಾ ಆಡಳಿತ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಅಲೀಂ, ಜಂಟಿ ಕಾರ್ಯದರ್ಶಿ ಶೇಖ್ ಅಹ್ಮದ್, ಖಜಾಂಚಿ ಇಬ್ರಾಹಿಂ ನದೀಮ್, ನ್ಯಾಯವಾದಿ ಸಲ್ಮಾನ್ ಖಲೀದ್ ಸೇರಿದಂತೆ ಪ್ರಮುಖರಿದ್ದರು.

Similar News