ಮಂಗಳೂರು: ಫೆ.1ರಿಂದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಮುಷ್ಕರ

Update: 2023-01-30 18:32 GMT

ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೊಳಪಡಿಸಿ ಹಂತಹಂತವಾಗಿ ಖಾಯಂಗೊಳಿಸುವಂತೆ ಆಗ್ರಹಿಸಿ ಫೆ.1ರಿಂದ ಕಸ ಸಾಗಿಸುವ ವಾಹನ ಚಾಲಕರು ನೀರು ಸರಬರಾಜು ಸಹಾಯಕರು ಲೋಡರ್ಸ್ ಕ್ಲೀನರ್ಸ್ ಹೆಲ್ಸರ್ಸ್ ಒಳಚರಂಡಿ ಕಾರ್ಮಿಕರು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಅನಿರ್ದಿಷ್ಟವಧಿ ಮುಷ್ಕರ  ನಡೆಸಲಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರಾವಳಿ ವಿಭಾಗದ ಸಂಚಾಲಕ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು ಅವರು  ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ಸರಕಾರ ಪೌರಕಾರ್ಮಿಕರೊಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು.ನೀರುಸರಬರಾಜು ಸಹಾಯಕರು ಲೋಡರ್ಸ್ ಕ್ಲೀನರ್ಸ್ ಹೆಲ್ಪರ್ಸ್‌ಗಳು, ಡಾಟ ಆಪರೇಟರುಗಳು ,ಸ್ಯಾನಿಟರಿ ಸೂಪರ್ ವೈಸರುಗಳು ಸೇರಿದಂತೆ 15ಸಾವಿರಕ್ಕೂ  ಹೆಚ್ಚು ನೌಕರರನ್ನು ಗುತ್ತಿಗೆಯಲ್ಲಿ ಉಳಿಸಿ ತಾರತಮ್ಯ ಎಸಗಿದೆ ಎಂದು ಆರೋಪಿಸಿದರು.

ಹೊರಗುತ್ತಿಗೆ ನೌಕರರ ನೇರಪಾವತಿ ಹಾಗೂ ಖಾಯಂಗೊಳಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಕುಡಿಯುವ ನೀರು ಹಾಗೂ ಸ್ವಚ್ಚತೆ ಸ್ಥಗಿತಗೊಳಿಸಿ ಅನಿರ್ದಿಷ್ಟವಧಿ ಧರಣಿ ನಡೆಸಲಾಗುವುದು.

ನಗರಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ನಿರ್ವಹಣೆಯಲ್ಲಿ ಹೊರಗುತ್ತಿಗೆ ನೌಕರರ ಪಾತ್ರ ಮಹತ್ವದ್ದಾಗಿದೆ.2017ರಲ್ಲಿ ಪೌರಕಾರ್ಮಿಕರ ನೇಮಕಾತಿಗೊಳಿಸಿದಾಗಲೂ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲೆ ಉಳಿಸಲಾಯಿತು.ಈಗಲೂ ಸಹ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲೆ ಮುಂದುವರಿಸುವ ಸರಕಾರದ ನೀತಿ ಒಂದುಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಪೌರಕಾರ್ಮಿಕರ ನೇರನೇಮಕಾತಿಯನ್ನು ಸ್ವಾಗತಿಸುತ್ತೇವೆ ಆದರೆ ಹೊರಗುತ್ತಿಗೆ ನೌಕರರ ನ್ಯಾಯಬದ್ದ ಹಕ್ಕಿಗಾಗಿ ಆಗ್ರಹಿಸುವುದು ನಮ್ಮ ಹಕ್ಕಾಗಿದೆ. ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರ ಮಧ್ಯೆ ಒಡೆದಾಳುವ ನೀತಿ ಅನುಸರಿಸುವುದು ಯಾವುದೇ ಸರಕಾರಕ್ಕೆ ಶೋಭೆಯಲ್ಲ ಎಂದು ಹೇಳಿದ್ದಾರೆ.

ಸರಕಾರ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಹಾಗೂ ಪೌರಕಾರ್ಮಿಕರನ್ನು ವಿಭಜಿಸಿದೆ.ವಾಸ್ತವವಾಗಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ನೌಕರರು ಸಹ ನಗರಗಳ ಸ್ವಚ್ಛತೆಗೆ ಕುಡಿಯುವ ನೀರು ಪೂರೈಕೆಗೆ ಪರಸ್ಪರ ಪೂರಕವಾಗಿ ದುಡಿಯುವದರೆ ಆಗಿದ್ದಾರೆ ಆದರೆ ಅಧಿಕಾರಿಗಳು ಈ ನೌಕರರನ್ನು ವಿಭಜಿಸಿ ತಾರತಮ್ಯ ಎಸಗಿದ್ದಾರೆ. ಸರಕಾರ ಅಗಿರುವ ಲೋಪವನ್ನು ಸರಿಪಡಿಸಿ ಹೊರಗುತ್ತಿಗೆ ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೊಳಪಡಿಸಿ ಹಂತಹಂತವಾಗಿ ಖಾಯಂಗೊಳಿಸುವಂತೆ ವಿನಂತಿಸುತ್ತೇವೆ. ರಾಜ್ಯದ 330ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು ಕುಡಿಯುವ ನೀರು ಹಾಗೂ ಕಸ ವಿಲೇವಾರಿಯಲ್ಲಿ. ನಾಗರೀಕರಿಗೆ ಆಗುವ ಅನಾನೂಕೂಲಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ನಾರಾಯಣ ಶೆಟ್ಟ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಸಫಾಯಿ ಕರ್ಮಾಚಾರಿಗಳ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಹಾಜರಿದ್ದರು.

Similar News