ಹಿಂಡನ್‌ಬರ್ಗ್ ವರದಿ ಬಿಚ್ಚಿಟ್ಟ ಭಾರತದ ಆರ್ಥಿಕತೆಯ ಗಂಭೀರ ಅಪಾಯಗಳು

Update: 2023-01-31 06:30 GMT

ಮೇಲ್ನೋಟದಲ್ಲಿಯೇ ಈ ಹಗರಣವು ದೇಶದ ಇದುವರೆಗಿನ ಅತೀ ದೊಡ್ಡ ಸಾರ್ವಜನಿಕ ಹಣಕಾಸು ಹಗರಣ ಹಾಗೂ ಅಪರಾಧ ಪ್ರಕರಣವಾಗಿ ಎದ್ದು ಕಾಣುತ್ತಿದೆ. ಇದರ ನಷ್ಟ ಅಂತಿಮವಾಗಿ ಈ ದೇಶದ ಜನಸಾಮಾನ್ಯರ ತಲೆಯ ಮೇಲೆ ಬಿದ್ದು ಅವರ ಕುತ್ತಿಗೆಯನ್ನು ಬಿಗಿಯತೊಡಗುತ್ತದೆ. ನವವಸಾಹತು ಕಾಲದ ಆಪ್ತ ಬಂಡವಾಳವಾದದ ನಡೆಗಳು ಜನಸಾಮಾನ್ಯರ ಬದುಕುಗಳಿಗೆ ಹೇಗೆಲ್ಲಾ ಸಂಚಕಾರ ತಂದಿಡುತ್ತವೆ ಎಂಬುದಕ್ಕೆ ಅದಾನಿ ಸಮೂಹ ಕೂಡ ಒಂದು ಉದಾಹರಣೆಯಾಗಿದೆ.


ಭಾರತದ ಆರ್ಥಿಕ ವ್ಯವಸ್ಥೆಯು ಕೊಳೆತು ನಾರಲು ತೊಡಗಿ ಬಹಳ ಕಾಲವಾಗಿದೆ. ಪ್ರಧಾನವಾಗಿ ನವವಸಾಹತುಶಾಹಿ ನೀತಿಯ ಅಳವಡಿಕೆಯು ತೀವ್ರವಾಗುತ್ತಾ ಹೋದ ಹಾಗೆಯೇ ಇದು ಹೆಚ್ಚಾಗುತ್ತಾ ಸಾಗಿದೆ. ಇಂಗ್ಲಿಷ್‌ನಲ್ಲಿ crony capitalism ಎಂದು ಕರೆಯಲ್ಪಡುವ ಆಪ್ತಬಂಡವಾಳಶಾಹಿ ಕೂಟಗಳ ಅವ್ಯವಹಾರಗಳು ಹೆಚ್ಚಾಗುತ್ತಾ ಸಾಗಿದವು. ಅದರಲ್ಲಿ ಟಾಟಾ, ಬಿರ್ಲಾ ಕೂಟ, ಧೀರೂಭಾಯಿ ಅಂಬಾನಿ ಕೂಟ, ಅಂಬಾನಿ-ಅದಾನಿ ಕೂಟ ಪ್ರಮುಖವಾದವುಗಳು. ಈ ಕೂಟಗಳು ಸರಕಾರ ಹಾಗೂ ಪ್ರಧಾನಿ ಸೇರಿದಂತೆ ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ಯಾರಿರಬೇಕೆಂದು ನಿರ್ಧರಿಸುವ ಕೂಟಗಳಾಗಿದ್ದವು. 1947ರ ಕಾಲದಿಂದಲೂ ಟಾಟಾ-ಬಿರ್ಲಾ ಬಂಡವಾಳಶಾಹಿ ಕೂಟ ಬಹಳ ಹೆಚ್ಚು ಕಾಲ ಭಾರತದ ರಾಜಕೀಯ ಹಾಗೂ ಆರ್ಥಿಕ ಆಗುಹೋಗುಗಳ ಮೇಲೆ ಪ್ರಭಾವಿಸುತ್ತಾ ಹಾಗೇನೆ ನಿಯಂತ್ರಿಸುತ್ತಾ ಬಂದಿತ್ತು. ಉದಾಹರಣೆಗೆ ಕರ್ನಾಟಕದಲ್ಲಿ ಸಾಮಾಜಿಕ ಅರಣ್ಯದ ಹೆಸರಿನಲ್ಲಿ ಯೋಜನೆ ರೂಪಿಸಿ ಬಿರ್ಲಾರ ಜವಳಿ ಉದ್ಯಮಕ್ಕಾಗಿ ಪರಿಸರ ಹಾಗೂ ಅಂತರ್ಜಲಕ್ಕೆ ಮಾರಕವಾದ ಅಕೇಶಿಯಾ, ನೀಲಗಿರಿಯಂತಹ ಕಚ್ಚಾ ವಸ್ತುಗಳನ್ನು ಸಾರ್ವಜನಿಕ ಹಣದಲ್ಲಿ ಬೆಳೆದು ಕೊಡಲಾಗಿತ್ತು. ಇಂತಹ ಸಾಕಷ್ಟು ಉದಾಹರಣೆಗಳನ್ನು ನಾವು ದೇಶಾದ್ಯಂತ ನೋಡಬಹುದು. ಕೃಷಿ ಉತ್ಪನ್ನವಾದ ಕಾಫಿ, ಟೀ, ತಂಬಾಕು, ಕೋಕೋಗಳಂತಹ ಬೆಳೆಗಳನ್ನು ಕೈಗಾರಿಕಾ ಪಟ್ಟಿಗೆ ಸೇರಿಸಿ ಟಾಟಾರಂತಹ ಭಾರೀ ಕಾರ್ಪೊರೇಟ್‌ಗಳಿಗೆ ದೇಶದ ಹತ್ತಾರು ಸಾವಿರ ಹೆಕ್ಟೇರುಗಳ ಭೂಮಿಯ ಮೇಲೆ ಮಾಲಕತ್ವ ಹೊಂದಲು ಕಾನೂನಾತ್ಮಕವಾಗಿ ಅನುಕೂಲ ಮಾಡಿಕೊಡಲಾಗಿತ್ತು. ಆಗಿನ ಸಂದರ್ಭ ಈಗಿನಂತೆ ಬಿಕ್ಕಟ್ಟಿನ ಪರಾಕಾಷ್ಠೆಯ ಕಾಲವಾಗಿಲ್ಲದೆ ಇದ್ದುದರಿಂದ ಈಗಿನಷ್ಟು ಪ್ರಮಾಣದಲ್ಲಿ ಭಾರೀ ಕಾರ್ಪೊರೇಟ್ ಕೂಟಗಳ ಅಕ್ರಮಗಳು, ಹಗರಣಗಳು ಕಾಣಿಸಿಕೊಂಡಿರಲಿಲ್ಲ ಅಷ್ಟೆ. ಅದರಲ್ಲಿ 1992ರ ಕಾಲದ ಹರ್ಷದ್ ಮೆಹ್ತಾ ಪ್ರಕರಣ, ಆನಂತರದ ಗಣಿ ಹಗರಣ, ದೂರಸಂಪರ್ಕ ಸ್ಪೆಕ್ಟ್ರಂ ಹಗರಣ, ವ್ಯಾಪಂ ಹಗರಣ, ಶಾರದಾ ಚಿಟ್‌ಫಂಡ್ಸ್ ಹಗರಣ, ಸತ್ಯಂ ಕಂಪ್ಯೂಟರ್ಸ್ ಹಗರಣ ಹೀಗೆ ದೇಶ ಹಾಗೂ ರಾಜ್ಯಗಳಲ್ಲಿನ ಹಗರಣಗಳು ಹಾಗೂ ಅಕ್ರಮಗಳ ಉದ್ದದ ಪಟ್ಟಿಯನ್ನೇ ಮಾಡಬಹುದು. ಹರ್ಷದ್ ಮೆಹ್ತಾ ಪ್ರಕರಣ ಕೆಲವು ಸಾವಿರ ಕೋಟಿ ರೂ.ಗಳಾದರೆ ನಂತರದವು ಹತ್ತಾರು ಸಾವಿರ ಕೋಟಿ ರೂ.ಗಳು ಹಾಗೂ ಹಲವಾರು ಲಕ್ಷ ಕೋಟಿ ರೂ.ಗಳದ್ದಾಗಿವೆ.

ಅರ್ಧಕ್ಕೆ ಕಾಲೇಜು ಶಿಕ್ಷಣ ಬಿಟ್ಟ ಒಬ್ಬ ಸಾಮಾನ್ಯ ಬಂಡವಾಳಶಾಹಿಯಾಗಿದ್ದ ಗೌತಮ್ ಅದಾನಿ ರಾಜೀವ್ ಗಾಂಧಿಯ ಕಾಲದ ಎಕ್ಸಿಂ (EXIM) ನೀತಿಯ ಲಾಭ ಪಡೆದು ಆಮದು ರಫ್ತುಗಳ ದೊಡ್ಡ ಕಾರ್ಪೊರೇಟ್ ಆದರು. ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗುವುದರೊಂದಿಗೆ ಅದಾನಿ ಭಾರತದ ಅಗ್ರಗಣ್ಯ ಕಾರ್ಪೊರೇಟ್ ಆದರು. ಪಾಲಿಮರ್, ವಜ್ರದ ವ್ಯಾಪಾರಗಳು, ಆಮದು ರಫ್ತು ಜೊತೆಗೆ ಹಲವಾರು ಉದ್ದಿಮೆಗಳ ಒಡೆಯರೆಂದು ಗುರುತಿ ಸಲ್ಪಟ್ಟರು. ಏಶ್ಯದ ಅತೀ ದೊಡ್ಡ ಸಂಪತ್ತಿನ ಒಡೆಯನೆಂದು 'ಫೋರ್ಬ್ಸ್' ಹೇಳಿತ್ತು. 2013ರಲ್ಲಿ ಇಂಡಿಯಾದ ಅತೀ ದೊಡ್ಡ ಬಿಲಿಯಾಧಿಪತಿಗಳಲ್ಲಿ 22ನೇ ಸ್ಥಾನದಲ್ಲಿ ಗೌತಮ್ ಅದಾನಿ ಇದ್ದಾರೆ ಎಂದು 'ಫೋರ್ಬ್ಸ್' ಪತ್ರಿಕೆ ಪಟ್ಟಿ ಮಾಡಿತ್ತು. 2022ರಲ್ಲಿ ಜಗತ್ತಿನ ಅತೀ ದೊಡ್ಡ ಶ್ರೀಮಂತರ ಸಾಲಿನಲ್ಲಿ ಮೂರನೇ ಸ್ಥಾನಕ್ಕೇರಿ ಇದೀಗ ಅಮೆರಿಕ ಮೂಲದ ಹಿಂಡನ್‌ಬರ್ಗ್ ಸಂಶೋಧನಾ ವರದಿ ಹೊರಬಿದ್ದ ನಂತರ ಸಂಪತ್ತು ಇಳಿಕೆಯಾಗಿ ಏಳನೇ ಸ್ಥಾನಕ್ಕೆ ಇಳಿದಿದ್ದಾರೆ. ದೇಶದ ಸಾವಿರಾರು ಸಾಮಾನ್ಯ ಶೇರು ಹೂಡಿಕೆದಾರರು ನೇರವಾಗಿ ತೀವ್ರ ನಷ್ಟವನ್ನು ಅನುಭವಿಸಿದ್ದಾರೆ.

2014ರ ಚುನಾವಣೆ ಸಂದರ್ಭದಲ್ಲಿ ತಮ್ಮ ಬಿಜೆಪಿಯಲ್ಲೇ ಆದರಣೆ ಕಳೆದುಕೊಂಡಿದ್ದ ನರೇಂದ್ರ ಮೋದಿಯವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿಸುವುದರಲ್ಲಿ ಗೌತಮ್ ಅದಾನಿಯದು ಒಂದು ಪ್ರಧಾನ ಪಾತ್ರವಾಗಿತ್ತು. ಮೋದಿಯವರನ್ನು ಭಾರೀ ಬಹುಮತದಿಂದ ಪ್ರಧಾನಿ ಪಟ್ಟದಲ್ಲಿ ಕುಳ್ಳಿರಿಸಲು ರೂ.30,000 ಕೋಟಿಗಳಿಂದ 40,000 ಕೋಟಿಗಳಷ್ಟು ಹಣವನ್ನು ಹೂಡಲಾಗಿತ್ತು ಎಂದೆಲ್ಲಾ ವರದಿಗಳಿದ್ದವು. ಇಷ್ಟೊಂದು ಅಗಾಧ ಮೊತ್ತದ ಹಣವನ್ನು ಹೂಡಿದ್ದರಲ್ಲಿ ಅಂಬಾನಿ-ಅದಾನಿ ಕೂಟದ ಪಾತ್ರ ಪ್ರಧಾನವಾಗಿತ್ತು ಎನ್ನುವುದೂ ಕೂಡ ಸುದ್ದಿಯಾಗಿತ್ತು. ಇದರೊಂದಿಗೆ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರಗಳ ಕಾಲ ಅಂತ್ಯಗೊಂಡು ಭಾರೀ ಬಹುಮತದ ಏಕಪಕ್ಷದ ಸರಕಾರದ ಕಾಲ ಆರಂಭವಾಯಿತು. ಇದರೊಂದಿಗೆ ಮೊದಲಿನಿಂದ ಒಂದಷ್ಟು ಸ್ವಾಯತ್ತ, ಅರೆ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನು ರದ್ದುಗೊಳಿಸುವುದು, ಸಡಿಲಗೊಳಿಸುವುದು, ಇದ್ದ ಹಲ್ಲುಗಳನ್ನೂ ಕೂಡ ಕಿತ್ತು ಹಾಕುವುದು, ನಿಯಮಗಳ ನೇರ ಉಲ್ಲಂಘನೆಗಳಂತಹವುಗಳು ಅಧಿಕವಾದವು. ಇದಕ್ಕೆ ಯೋಜನಾ ಆಯೋಗ, ಚುನಾವಣಾ ಆಯೋಗ, ರಿಸರ್ವ್ ಬ್ಯಾಂಕ್, ಸಾರ್ವಜನಿಕ ರಂಗದ ಬ್ಯಾಂಕುಗಳು, ವಿಮಾ ನಿಗಮಗಳು, ಗಣಿ ನಿಗಮಗಳು, ಶೇರು ಮಾರುಕಟ್ಟೆಯ ಕ್ರಮಗಳನ್ನು ತಡೆಯಬೇಕಾದ ಸೆಬಿ ಇತ್ಯಾದಿಗಳು ತಮ್ಮ ಮೊದಲಿನ ಕಾರ್ಯ ನಿರ್ವಹಣೆಯನ್ನು ಕೂಡ ಮಾಡದಂತೆ ಎಲ್ಲವನ್ನೂ ಪ್ರಧಾನಿ ಕಾರ್ಯಾಲಯದ ಆಣತಿಯಂತೆಯೇ ನಡೆಸುವಂತೆ ಮಾಡಲಾಯಿತು. ಅದುವರೆಗೂ ಪಾಲಿಸುತ್ತಿದ್ದ ನೀತಿ ನಿಯಮಾವಳಿಗಳನ್ನು ಕೂಡ ಪಾಲಿಸದಂತೆ ಮಾಡಲಾಯಿತು. ಪ್ರಧಾನವಾಗಿ ಇದರ ಎಲ್ಲಾ ಲಾಭ ಅಂಬಾನಿ ಹಾಗೂ ಅದಾನಿಗಳಿಗೆ ಆಗುತ್ತಾ ಬರುತ್ತಿದೆ ಎಂಬುದು ಎದ್ದು ಕಾಣುತ್ತಿದೆ.

ಅತ್ಯಂತ ಆಕ್ರಮಣಕಾರಿಯಾಗಿ ಮೋದಿ ಸರಕಾರದ ನೇರ ಬೆಂಬಲದೊಂದಿಗೆ ಇಂಡಿಯಾದ ಸಾರ್ವಜನಿಕ ಸಂಪತ್ತಿನ ಸ್ವಾಧೀನತೆಯಲ್ಲಿ ಅದಾನಿ ಕುಟುಂಬ ಸಮೂಹ ದಾಪುಗಾಲಿಟ್ಟು ಮುಂದೆ ಸಾಗುತ್ತಿದೆ. ಗಣಿಗಾರಿಕೆ, ವಿಮಾನ ನಿಲ್ದಾಣ, ಬಂದರು, ವಿದ್ಯುತ್, ರೈಲ್ವೆ, ವಿಶೇಷ ಆರ್ಥಿಕ ವಲಯ, ಸೌರವಿದ್ಯುತ್, ಮೂಲ ಸೌಕರ್ಯ ಅಭಿವೃದ್ಧಿ, ನೀರು ಇತ್ಯಾದಿ ಕ್ಷೇತ್ರಗಳಲ್ಲಿ ತನ್ನ ಹಿಡಿತ ಸಾಧಿಸುತ್ತಾ ಸಾಗುತ್ತಿದೆ. ಇದರ ಭಾಗವಾಗಿ ಕರ್ನಾಟಕದ ಉಡುಪಿಯ ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರ, ಮಂಗಳೂರಿನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ವಶಕ್ಕೆ ಹೋಗಿದೆ. ರಾಜ್ಯದ ಹಲವಾರು ಸಣ್ಣ ಮಧ್ಯಮ ಬಂದರುಗಳು ಅದಾನಿ ವಶವಾಗತೊಡಗಿವೆ. ನೂರಾರು ಎಕರೆ ಭೂಮಿ ಪಡೆದು ರಾಜ್ಯದಲ್ಲಿ ಸೌರ ವಿದ್ಯುತ್ ಕ್ಷೇತ್ರದಲ್ಲಿ ಅದಾನಿ ತೊಡಗುತ್ತಿದ್ದಾರೆ. ಪಕ್ಕದ ಕೇರಳದಲ್ಲಿ ಅದಾನಿ ಸಮೂಹ ಅದರ ರಾಜಧಾನಿಯಾದ ತಿರುವನಂತಪುರದ ವಿಮಾನನಿಲ್ದಾಣವನ್ನು ವಶಪಡಿಸಿಕೊಂಡಿದೆ. ಜೊತೆಗೆ ವಿಜಿಂಗಮ್ ಬಂದರು ನಿರ್ಮಾಣ ಹಾಗೂ ನಿರ್ವಹಣೆಯನ್ನು ಅದಾನಿ ಸಮೂಹ ಮಾಡುತ್ತಿದೆ. ಜನರು ಹಾಗೂ ಪರಿಸರದ ಮೇಲೆ ಅದರಿಂದಾಗುವ ಮಾರಕ ಹಾನಿಯ ವಿರುದ್ಧ ನಡೆಯುತ್ತಿರುವ ಜನಹೋರಾಟಗಳನ್ನು ಅದಾನಿ ಸಮೂಹ ಅಲ್ಲಿನ ಎಡರಂಗ ಸರಕಾರ ಹಾಗೂ ಒಕ್ಕೂಟ ಸರಕಾರದ ಬೆಂಬಲದೊಂದಿಗೆ ಹಲವಾರು ರೀತಿಗಳಲ್ಲಿ ಹತ್ತಿಕ್ಕುತ್ತಿದೆ. ಎಡರಂಗ ಸರಕಾರ ಅದಾನಿ ಸಮೂಹದ ಪರವಾಗಿ ನಿಂತು ಯುಎಪಿಎಯಂತಹ ಕರಾಳ ಕಾಯ್ದೆಗಳನ್ನು ಹೇರಿ ನೂರಾರು ಹೋರಾಟಗಾರರ ಮೇಲೆ ಪ್ರಕರಣಗಳನ್ನು ದಾಖಲಿಸಿ ಬಂಧಿಸಿಟ್ಟಿದೆ. ಜೊತೆಗೆ ಯೂನಿಯನ್ ಸರಕಾರದ ಅರೆಸೈನಿಕ ಪಡೆಗಳನ್ನು ವಿಜಿಂಗಮ್ ಹೋರಾಟವನ್ನು ದಮನಿಸಲು ಕರೆಸಿಕೊಂಡಿದೆ. ಇದನ್ನೆಲ್ಲಾ ಯುಎಪಿಎಯಂತಹ ಕರಾಳ ಕಾಯ್ದೆಗಳನ್ನು ತಾವು ವಿರೋಧಿಸುತ್ತೇವೆ, ಫೆಡರಲ್ ನೀತಿಗಳನ್ನು ತಾವು ಅನುಸರಿಸುತ್ತೇವೆ, ಯೂನಿಯನ್ ಸರಕಾರ ರಾಜ್ಯಗಳ ಮೇಲೆ ಸವಾರಿ ಮಾಡಲು ನಾವು ಒಪ್ಪುವುದಿಲ್ಲ ಎಂದೆಲ್ಲಾ ಹೇಳಿಕೊಳ್ಳುತ್ತಲೇ ಈ ಎಡರಂಗ ಸರಕಾರ ಮಾಡುತ್ತಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.

 ಇದೀಗ ಅಮೆರಿಕ ಮೂಲದ ಹಿಂಡನ್‌ಬರ್ಗ್ ಸಂಶೋಧನಾ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ತನಿಖೆಯನ್ನು ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅದಾನಿ ಸಮೂಹದ ದೊಡ್ಡಮಟ್ಟದ ಆಕ್ರಮಗಳನ್ನು ಪಟ್ಟಿ ಮಾಡಿ ವರದಿಯೊಂದನ್ನು ಬಿಡುಗಡೆ ಮಾಡಿರುವುದು ಸಾಕಷ್ಟು ಜನರಿಗೆ ತಿಳಿದಿದೆ. ಅದರಿಂದಾಗಿ ಅದಾನಿಯ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿದ ಸಂಪತ್ತು ಕರಗಿ ಹೋಗಿರುವುದು ಕೂಡ ತಿಳಿದಿರುವ ವಿಚಾರ.

ಈ ವರದಿಯಲ್ಲಿ ಒಂದೊಂದನ್ನೇ ಗುರುತಿಸುತ್ತಾ ಪಟ್ಟಿ ಮಾಡುತ್ತಾ ಹೋಗಲಾಗಿದೆ. ಮೊದಲನೆಯದಾಗಿ ಶೇರು ಬೆಲೆಗಳನ್ನು ಶೇರುಮಾರುಕಟ್ಟೆಯಲ್ಲಿ ಕೃತಕವಾಗಿ ಏರುವಂತೆ ಮಾಡಿ ಹಾಗೂ ಹಲವಾರು ವರ್ಷಗಳಿಂದ ಲೆಕ್ಕಪತ್ರ ಹಗರಣ ನಡೆಸುತ್ತಾ 17.8 ಟ್ರಿಲಿಯನ್ (218 ದಶಲಕ್ಷ ಅಮೆರಿಕನ್ ಡಾಲರುಗಳು) ಹಗರಣವನ್ನು ಅದಾನಿ ಸಮೂಹ ನಡೆಸಿದೆ.

ಕಳೆದ ಮೂರು ವರ್ಷಗಳಿಂದ ಗೌತಮ್ ಅದಾನಿ ಶೇರು ಮಾರುಕಟ್ಟೆಯಲ್ಲಿ ತನ್ನ ಸಮೂಹದ ಶೇರುಗಳ ಬೆಲೆಯನ್ನು ಕೃತಕವಾಗಿ ಏರಿಸಿ ಒಟ್ಟು ಸುಮಾರು 120 ದಶಲಕ್ಷ ಅಮೆರಿಕನ್ ಡಾಲರುಗಳನ್ನು ಕೂಡಿಸಿಕೊಂಡಿದೆ ಎಂಬ ಆರೋಪವಿದೆ. ಅದಾನಿ ಸಮೂಹದ ಏಳು ಕಂಪೆನಿಗಳ ಶೇರುಗಳ ಬೆಲೆಗಳು ಸರಾಸರಿ ಶೇ. 819ರಷ್ಟು ಏರಿಕೆಯನ್ನು ಈ ಕಾಲದಲ್ಲಿ ಕಾಣಿಸಲಾಗಿದೆ. ಅದಾನಿ ಸಮೂಹವು ಸಾರ್ವಜನಿಕ ಮಿತ ಕಂಪೆನಿಯೆಂದು ನೋಂದಾಯಿಸಿಕೊಂಡಿದ್ದರೂ ಅದು ಅಪ್ಪಟ ಅದಾನಿ ಕುಟುಂಬದ ಕಂಪೆನಿಯಾಗಿದೆ. ಅದರ ಇಪ್ಪತ್ತೆರಡು ಅತ್ಯುನ್ನತ ಹುದ್ದೆಗಳಲ್ಲಿ ಎಂಟು ಜನರು ಅದಾನಿ ಕುಟುಂಬದವರೇ ಆಗಿದ್ದಾರೆ. ಎಲ್ಲಾ ಪ್ರಮುಖ ತೀರ್ಮಾನಗಳನ್ನು ಅದಾನಿ ಕುಟುಂಬದ ಕೆಲವೇ ಜನರು ತೆಗೆದುಕೊಳ್ಳುತ್ತಾರೆ.

ಅದಾನಿ ಕುಟುಂಬವು ಮಾರಿಷಸ್, ಯುಎಇ, ಕೆರಿಬಿಯನ್ ದ್ವೀಪಗಳಲ್ಲಿ ಶೆಲ್ ಕಂಪೆನಿಗಳ ಮೂಲಕ ಹಣ ಬಿಳಿ ಮಾಡುವ ಮನಿ ಲಾಂಡರಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಆರೋಪಗಳಿವೆ. ಅಕ್ರಮಗಳನ್ನು ತನಿಖೆ ಮಾಡುವ ನಾಲ್ಕು ಪ್ರಮುಖ ಸರಕಾರಿ ಸಂಸ್ಥೆಗಳು ಈ ಆರೋಪಗಳನ್ನು ಮಾಡಿದ್ದಲ್ಲದೇ ತೆರಿಗೆದಾರರ ಅಂದಾಜು 17 ದಶಲಕ್ಷ ಅಮೆರಿಕನ್ ಡಾಲರುಗಳಷ್ಟು ಹಣವನ್ನು ಕಳ್ಳತನ ಹಾಗೂ ಭ್ರಷ್ಟಾಚಾರಗಳ ಮೂಲಕ ಸಂಗ್ರಹಿಸಿದೆ ಎಂದೂ ಹೇಳಿದೆ.
ಗೌತಮ್ ಅದಾನಿಯ ಕಿರಿಯ ಸಹೋದರ ರಾಜೇಶ್ ಅದಾನಿ, ಸಹೋದರಿಯ ಗಂಡ ಸಮೀರ್ ವೋರಾ ವಜ್ರದ ವ್ಯಾಪಾರದಲ್ಲಿ ಕೃತಕ ಕಂಪೆನಿಗಳನ್ನು ತೊಡಗಿಸಿದ್ದರು ಹಾಗೂ ಅದರ ಮೂಲಕ ಹಣಕಾಸು ಅಕ್ರಮಗಳನ್ನು ನಡೆಸಿದ್ದರು ಎಂದು ಆದಾಯ ತನಿಖಾ ನಿರ್ದೇಶನಾಲಯ (DRI) ಹೇಳಿತ್ತು. ಅಲ್ಲದೆ ರಾಜೇಶ್ ಅದಾನಿ ಕನಿಷ್ಠ ಎರಡು ಬಾರಿಯಾದರೂ ಅಕ್ರಮ ಹಾಗೂ ತೆರಿಗೆ ಮೋಸ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅದಾನಿ ಕುಟುಂಬವು ಆತನನ್ನೇ ಅದಾನಿಯ ಆಸ್ಟ್ರೇಲಿಯದ ವ್ಯವಹಾರಗಳ ಕಾರ್ಯನಿರ್ವಾಹಕ ನಿರ್ದೇಶಕನನ್ನಾಗಿ ಮಾಡಿತ್ತು.

ವಿನೋದ್ ಅದಾನಿ ಮತ್ತು ಆತನ ಹತ್ತಿರದ ಸಹಾಯಕರು ಮಾರಿಷಸ್‌ನಲ್ಲೇ 38 ಕೃತಕ ಕಂಪೆನಿಗಳ ನಿಯಂತ್ರಣವನ್ನು ಹೊಂದಿದ್ದಾರೆ. ಅದೇ ರೀತಿ ಸೈಪ್ರಸ್, ಯುಎಇ, ಸಿಂಗಾಪುರ ಮತ್ತಿತರ ಕೆರಿಬಿಯನ್ ದ್ವೀಪಗಳಲ್ಲಿ ಕೂಡ ಹಲವಾರು ಕೃತಕ ಕಂಪೆನಿಗಳನ್ನು ಈತ ಮತ್ತು ಈತನ ಸಹಾಯಕರು ನಿಯಂತ್ರಿಸುತ್ತಿದ್ದಾರೆ. ಈ ಕಂಪೆನಿಗಳಿಗೆ ಸರಿಯಾದ ಉದ್ಯೋಗಿಗಳಾಗಲೀ, ಪ್ರತ್ಯೇಕ ವಿಳಾಸವಾಗಲೀ, ಪ್ರತ್ಯೇಕ ದೂರವಾಣಿ ಸಂಖ್ಯೆಯಾಗಲೀ, ಸರಿಯಾದ ಜಾಲ ವಿಳಾಸವಾಗಲೀ ಇಲ್ಲ. ಹೀಗೆಲ್ಲಾ ಇದ್ದರೂ ಈ ಕೃತಕ ಕಂಪೆನಿಗಳು ಬಿಲಿಯಾಂತರ ಡಾಲರುಗಳನ್ನು ಯಾವುದೇ ಸರಿಯಾದ ವ್ಯವಹಾರ ಮಾಹಿತಿ ತೋರಿಸದೆ ಭಾರತದಲ್ಲಿರುವ ಅದಾನಿ ಸಮೂಹದ ಸಾರ್ವಜನಿಕವಾಗಿ ಹಾಗೂ ಖಾಸಗಿಯಾಗಿ ನೋಂದಾಯಿತವಾಗಿರುವ ಸಂಸ್ಥೆಗಳಿಗೆ ರವಾನಿಸಿವೆ. ಇಷ್ಟೇ ಅಲ್ಲದೆ ಅದಾನಿ ಸಮೂಹದ ಕಂಪೆನಿಗಳ ಬಹುತೇಕ ಶೇರು ಮಾಲಕರು ಅದಾನಿ ಕುಟುಂಬದವರೇ ಆಗಿದ್ದಾರೆ. ಇದು ಕಾನೂನು ಉಲ್ಲಂಘನೆಯಾಗಿದೆ. ಸೋರಿಕೆಯಾಗಿರುವ ಇಮೇಲ್ ಮಾಹಿತಿಯ ಪ್ರಕಾರ ಕೇತನ್ ಪಾರೇಕ್ ಎಂಬ ಕುಖ್ಯಾತ ಶೇರುದಲ್ಲಾಳಿಯ ಜೊತೆಗೂಡಿ ಅಕ್ರಮಗಳನ್ನು ಎಸಗಿ ಬಂಧನವನ್ನು ತಪ್ಪಿಸಿ ಪಲಾಯನ ಮಾಡಿರುವ ಧರ್ಮೇಶ್ ದೋಷಿ ಎಂಬ ಲೆಕ್ಕಪತ್ರಗಾರನ ಮೂಲಕ ಅದಾನಿ ಸಮೂಹ ವ್ಯವಹಾರ ನಡೆಸುತ್ತಿದೆ. ಶೇರುಗಳನ್ನು ಹಿಡಿದಿಟ್ಟುಕೊಂಡು ಮಾರುಕಟ್ಟೆಯಲ್ಲಿ ಕೃತಕ ಬೇಡಿಕೆ ಸೃಷ್ಟಿಸಿ ಅದರ ಮೂಲಕ ಶೇರು ಬೆಲೆಗಳು ಏರುವಂತೆ ಮಾಡಿ ಲಾಭ ದೋಚುವ ಕಾರ್ಯವನ್ನು ಅದಾನಿ ಸಮೂಹವು ತಮ್ಮದೇ ಕೃತಕ ಕಂಪೆನಿಗಳ ಮೂಲಕಮಾಡಿದೆ.

ಕೇತನ್ ಪಾರೇಕ್‌ರೊಂದಿಗಿನ ಸಹಕಾರ ಹಾಗೂ ವ್ಯವಹಾರ ಸಾಬೀತಾಗಿದ್ದರಿಂದಾಗಿ 2007ರಲ್ಲಿ ಅದಾನಿ ಸಮೂಹವನ್ನು ಸೆಬಿ ನಿಷೇಧಕ್ಕೆ ಒಳಪಡಿಸಿತ್ತು. ನಂತರ ಅದನ್ನು ಬದಲಾಯಿಸಿ ದಂಡ ವಿಧಿಸುವ ಮಟ್ಟಕ್ಕೆ ಇಳಿಸಲಾಯಿತು. ಅದಾನಿ ಸಮೂಹವು ಕೇತನ್ ಪಾರೇಕ್ ಹಣಹೂಡಿಕೆ ಮೂಲಕ ಗುಜರಾತಿನ ಮುಂಡ್ರ ಬಂದರು ವ್ಯವಹಾರವನ್ನು ಆರಂಭಿಸಲು ಬಳಸಲಾಗಿತ್ತು ಎಂದು ಸೆಬಿಗೆ ಬರಹ ರೂಪದಲ್ಲಿ ಉತ್ತರಿಸಿತ್ತು ಕೂಡ. ಅದಾನಿ ಸಮೂಹದ ಅದಾನಿ ಎಂಟರ್ ಪ್ರೈಸಸ್ ಹಾಗೂ ಅದಾನಿ ಟೋಟಲ್ ಗ್ಯಾಸ್‌ನ ಲೆಕ್ಕಪತ್ರ ಪರಿಶೋಧಕರಾಗಿ ಸಹಿ ಮಾಡಿರುವವರು ವೃತ್ತಿ ಅನುಭವ ಇಲ್ಲದ 24 ಹಾಗೂ 23 ವಯಸ್ಸಿನವರು. ಒಂದು ಪುಟ್ಟ ಕಚೇರಿಯನ್ನು ಹೊಂದಿದೆ ಎಂದು ತೋರಿಸಿರುವ ಶಾ ದಂಧಾರಿಯಾ ಇವರ ಸಂಸ್ಥೆ ಆಗಿದೆ.

ತನ್ನ ಮೇಲೆ ವಿಮರ್ಶೆ, ಟೀಕೆ, ಪ್ರಶ್ನೆ ಮಾಡುವ ಪತ್ರಕರ್ತರ ಮೇಲೆ, ಸರಕಾರಗಳ ಮೇಲೆ, ಸರಕಾರಿ ಸಂಸ್ಥೆಗಳ ಮೇಲೆ ಒತ್ತಡ ಹೇರಿ ಪ್ರಕರಣಗಳನ್ನು ದಾಖಲಿಸುವ, ಜೈಲಿಗೆ ಕಳಿಸುವ, ಇನ್ನಿತರ ಮಾರ್ಗಗಳ ಮೂಲಕ ಅವರ ಸದ್ದಡಗಿಸುವ ಕಾರ್ಯವನ್ನು ಅದಾನಿ ಸಮೂಹ ಮಾಡುತ್ತಿದೆ. ತನ್ನ ವಿರುದ್ಧ ಯಾವುದೇ ದನಿಗಳೂ ಹೂಡಿಕೆದಾರ ವಲಯದಿಂದಾಗಲೀ, ಪತ್ರಕರ್ತ ವಲಯದಿಂದಾಗಲೀ, ರಾಜಕೀಯ ವಲಯದಿಂದಾಗಲೀ ಬಾರದಂತೆ ಹಲವಾರು ರೀತಿಗಳಲ್ಲಿ ನೋಡಿಕೊಂಡು ಬರುತ್ತಿದೆ.

ಅದಾನಿ ಸಮೂಹದ ಅವ್ಯವಹಾರಗಳ ಬಗ್ಗೆ ದನಿಯೆತ್ತಿದ ಕಾರಣಕ್ಕೆ ಪತ್ರಕರ್ತ ಪರಂಜಯ್ ಗುಹಾ ತಾಕುರ್ತಾರನ್ನು ಸುಳ್ಳು ಪ್ರಕರಣದಡಿ ಜೈಲಿಗೆ ತಳ್ಳಿದ್ದನ್ನು ಈ ವರದಿಯಲ್ಲಿ ಹೇಳಲಾಗಿದೆ. ಅದಾನಿ ಸಮೂಹದ ಏಳು ನೋಂದಾಯಿತ ಕಂಪೆನಿಗಳು ತಮ್ಮ ನಿಜವಾದ ಮಾರುಕಟ್ಟೆ ಮೌಲ್ಯಕ್ಕಿಂತಲೂ ಶೇ. 85ಕ್ಕಿಂತಲೂ ಹೆಚ್ಚು ಹೆಚ್ಚುವರಿ ಮೌಲ್ಯೀಕರಣ ಮಾಡಿಕೊಂಡಿವೆ. ಹೀಗೆ ಅದಾನಿ ಸಮೂಹದ ಆರ್ಥಿಕ ಅಪರಾಧಗಳ ಬಹಳ ಗಂಭೀರವಾದ ವಿವರಗಳನ್ನು ಹಿಂಡನ್ ಬರ್ಗ್ ವರದಿ ನೀಡಿದೆ. ಅದಾನಿ ಸಮೂಹವು ಸುಮಾರು 578ರಷ್ಟು ನೋಂದಾಯಿತ ಸಹಸಂಸ್ಥೆಗಳನ್ನು ತೆರಿಗೆದಾರರ ಸ್ವರ್ಗ ಎನಿಸಿರುವ ದೇಶಗಳಲ್ಲಿ ಹೊಂದಿವೆ ಎಂಬ ವರದಿಯಿದೆ. ಇವುಗಳು ಕೃತಕ ಶೆಲ್ ಕಂಪೆನಿಗಳು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಪ್ರಮುಖವಾಗಿ ಈ ವರದಿಯು ಅದಾನಿ ಸಮೂಹದ ಇಂಡಿಯಾದ ಹೊರಗಿನ ಶೇರು ವ್ಯವಹಾರಗಳನ್ನು ಆಧರಿಸಿ ಮಾತ್ರ ಮಾಡಲಾಗಿದೆ ಎಂದು ಹಿಂಡನ್ ಬರ್ಗ್ ಹೇಳಿಕೊಂಡಿದೆ.

ಇವೆಲ್ಲಾ ಒಂದು ಕಡೆ ಇದ್ದರೆ ಅದಾನಿ ಸಮೂಹ ತನ್ನ ವ್ಯವಹಾರಗಳನ್ನು ಸಾಲಗಳ ಮೇಲೆಯೇ ಬಹುತೇಕವಾಗಿ ಆಧರಿಸಿ ನಡೆಸುತ್ತಿದೆ ಎಂದು 'ಕ್ರೆಡಿಟ್ ಸೈಟ್ಸ್' ಎಂಬ ಸಂಸ್ಥೆಯ ವರದಿ ಈ ಹಿಂದೆ ಬಂದಿತ್ತು. ಅದರಲ್ಲೂ ಭಾರತದ ಸಾರ್ವಜನಿಕ ರಂಗದ ಹಣಕಾಸು ಸಂಸ್ಥೆಗಳೇ ಅದಾನಿ ಸಮೂಹದ ಪ್ರಧಾನ ಹಣಕಾಸು ಮೂಲ ಹಾಗೂ ಹೂಡಿಕೆದಾರರೂ ಆಗಿದ್ದಾರೆ. ಅದರಲ್ಲೂ ಭಾರತದ ಅತೀ ದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದಾನಿ ಸಮೂಹಕ್ಕೆ ಅತೀ ದೊಡ್ಡ ಹಣಕಾಸು ಸಾಲ ಪೂರೈಕೆದಾರ ಹಾಗೂ ಹೂಡಿಕೆದಾರ ಸಂಸ್ಥೆಯಾಗಿದೆ ಎಂಬ ವರದಿಗಳಿವೆ. ಖಾಸಗಿ ಬ್ಯಾಂಕುಗಳು ಅದಾನಿ ಸಮೂಹಕ್ಕೆ ನೀಡಿರುವ ಸಾಲದ ಪ್ರಮಾಣ ಕೇವಲ ಶೇ. 2 ಆಗಿದೆ ಎಂಬ ವರದಿಗಳಿವೆ. ಅಲ್ಲದೆ ಸಾಗರೋತ್ತರ ಕಂಪೆನಿಗಳೊಂದಿಗಿನ ವ್ಯವಹಾರಗಳ ಫಲಾನುಭವಿಗಳ ಸಾಚಾತನಗಳ ಬಗ್ಗೆ 2021ರ ಜೂನ್‌ನಲ್ಲಿಯೇ ಒಂದಷ್ಟು ಸುದ್ದಿಯಾದಾಗ ಅದರಿಂದಾಗಿ ಅದಾನಿ ಸಮೂಹದ ಶೇರುಗಳ ಬೆಲೆ ಕುಸಿತ ಕಂಡಿತ್ತು. ಕಲ್ಲಿದ್ದಲು ಬೆಲೆಯನ್ನು ಕೃತಕವಾಗಿ ಭಾರೀ ಮಟ್ಟಕ್ಕೆ ಏರಿಸಿ ಲಾಭ ದೋಚಿದ ಆರೋಪ ಕೂಡ ಅದಾನಿ ಸಮೂಹದ ಮೇಲೆ 2016ರಲ್ಲಿ ಬಂದಿತ್ತು. ಇದು 4.4 ಬಿಲಿಯನ್ ಅಮೆರಿಕನ್ ಡಾಲರುಗಳ ಹಗರಣವೆಂದು ಕರೆಸಿಕೊಂಡಿತ್ತು.

ಅದಾನಿ ಸಮೂಹಗಳ ಅಧ್ಯಕ್ಷ ಗೌತಮ್ ಅದಾನಿ ತನ್ನ ಸಮೂಹದ ಪ್ರಧಾನ ಹೂಡಿಕೆ ಅಂತರ್‌ರಾಷ್ಟ್ರೀಯ ಬಾಂಡ್‌ಗಳ ಮೂಲಕ ಆಗುತ್ತಿದೆ. ಒಂಭತ್ತು ವರ್ಷಗಳ ಹಿಂದೆ ತನ್ನ ಶೇ. 86ರಷ್ಟು ಹಣಕಾಸು ಸಾಲ ಸಾರ್ವಜನಿಕ ರಂಗದ ಬ್ಯಾಂಕುಗಳಿಂದ ಆಗುತ್ತಿತ್ತು. ಈಗ ಅದು ಶೇ. 32 ಮಾತ್ರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. (ಭಾರೀ ಕಾರ್ಪೊರೇಟ್‌ಗಳ ಹತ್ತಾರು ಲಕ್ಷ ಕೋಟಿ ರೂ. ಸಾಲಗಳನ್ನು ಯೂನಿಯನ್ ಸರಕಾರ ಕಳೆದ ಹತ್ತಾರು ವರ್ಷಗಳ ಅವಧಿಯಲ್ಲಿ ರೈಟ್‌ಆಫ್ ಹೆಸರಿನಲ್ಲಿ ಮನ್ನಾ ಮಾಡಿದ್ದನ್ನು ಗಮನಿಸಬೇಕು) ಅದೇ ವೇಳೆ ಅದಾನಿ ಸಮೂಹದ ಶೇರುಗಳ ಕುಸಿತದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಲ್‌ಐಸಿ ಇತ್ಯಾದಿ ಸಾರ್ವಜನಿಕ ರಂಗದ ಹಣಕಾಸು ಸಂಸ್ಥೆಗಳ ಶೇರುಗಳೂ ಕುಸಿತ ಕಂಡು ಹತ್ತಾರು ಸಾವಿರ ಕೋಟಿ ರೂ.ಗಳಷ್ಟು ದೊಡ್ಡ ನಷ್ಟಗಳನ್ನು ಅನುಭವಿಸಿವೆ.

ಹಿಂಡನ್ ಬರ್ಗ್ ವರದಿ ಹೊರಬಿದ್ದು ಅದು ಪ್ರಮುಖವಾದ ಎಂಬತ್ತಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಮುಂದಿಟ್ಟ ನಂತರ ಅದಾನಿ ಸಮೂಹವು ಅದರ ವಿರುದ್ಧ ಕಾನೂನು ಕ್ರಮದ ಬೆದರಿಕೆ ಒಡ್ಡಿತ್ತು. ಅದನ್ನು ಸ್ವಾಗತಿಸಿದ ಹಿಂಡನ್ ಬರ್ಗ್ ಸಂಸ್ಥೆ ತಾನು ಕಾರ್ಯ ನಿರ್ವಹಿಸುತ್ತಿರುವ ಅಮೆರಿಕದಲ್ಲಿಯೇ ದಾವೆ ಹೂಡುವಂತೆ ಹೇಳಿ ತನ್ನ ವರದಿ ಸಾಕ್ಷ್ಯಾಧಾರಗಳನ್ನು ಆದರಿಸಿದೆ ಎಂದು ಸವಾಲು ಹಾಕಿದೆ. ತಾನು ಎತ್ತಿರುವ ಯಾವ ಪ್ರಶ್ನೆಗಳಿಗೂ ಉತ್ತರಿಸದೆ ಕಾನೂನು ಕ್ರಮದ ಬೆದರಿಕೆ ಒಡ್ಡಿರುವ ಅದಾನಿ ಸಮೂಹದ ನಡೆಯನ್ನು ಅದು ಟೀಕಿಸಿದೆ.

ಮೇಲ್ನೋಟದಲ್ಲಿಯೇ ಈ ಹಗರಣವು ದೇಶದ ಇದುವರೆಗಿನ ಅತೀ ದೊಡ್ಡ ಸಾರ್ವಜನಿಕ ಹಣಕಾಸು ಹಗರಣ ಹಾಗೂ ಅಪರಾಧ ಪ್ರಕರಣವಾಗಿ ಎದ್ದು ಕಾಣುತ್ತಿದೆ. ಇದರ ನಷ್ಟ ಅಂತಿಮವಾಗಿ ಈ ದೇಶದ ಜನಸಾಮಾನ್ಯರ ತಲೆಯ ಮೇಲೆ ಬಿದ್ದು ಅವರ ಕುತ್ತಿಗೆಯನ್ನು ಬಿಗಿಯತೊಡಗುತ್ತದೆ. ನವವಸಾಹತು ಕಾಲದ ಆಪ್ತ ಬಂಡವಾಳವಾದದ ನಡೆಗಳು ಜನಸಾಮಾನ್ಯರ ಬದುಕುಗಳಿಗೆ ಹೇಗೆಲ್ಲಾ ಸಂಚಕಾರ ತಂದಿಡುತ್ತವೆ ಎಂಬುದಕ್ಕೆ ಅದಾನಿ ಸಮೂಹ ಕೂಡ ಒಂದು ಉದಾಹರಣೆಯಾಗಿದೆ. ಹಿಂಡನ್ ಬರ್ಗ್‌ನ ಸಂಪೂರ್ಣ ವರದಿಗೆ ಆಸಕ್ತರು ಈ ಲಿಂಕ್ ಮೂಲಕ ಸಂಪರ್ಕಿಸಬಹುದು.

https://hindenburgresearch.com/?p=2376

ಮಿಂಚಂಚೆ: nandakumarnandana67@gmail.com

Similar News