×
Ad

ಡಿಕೆಶಿ, ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವೈಯಕ್ತಿಕ ದ್ವೇಷ, ಹಗೆತನ ತೋರುತ್ತಿದ್ದಾರೆ: ರಮೇಶ್ ಬಾಬು

Update: 2023-01-31 20:26 IST

ಬೆಂಗಳೂರು, ಜ.31: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ  ಸಂದರ್ಭದಲ್ಲಿ ನಮ್ಮ ನಾಯಕರ ವಿರುದ್ಧ ಷಡ್ಯಂತ್ರ ರೂಪಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಕೀಳುಮಟ್ಟದ ಆರೋಪಗಳನ್ನು ಮಾಡುವ ಮೂಲಕ ವೈಯಕ್ತಿಕ ದ್ವೇಷ, ಹಗೆತನವನ್ನು ತೋರಿಸಿದ್ದಾರೆ ಎಂದರು.

ಕ್ಲೀನ್ ಚಿಟ್ ದೊರೆತಿಲ್ಲ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಸಾರ್ವಜನಿಕ ಒತ್ತಡಕ್ಕೆ ಮಣಿದು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈ ಪ್ರಕರಣದ ಬಿ ರಿಪೋರ್ಟ್ ವಿಚಾರವಾಗಿ ಎಸ್‍ಐಟಿ ನೀಡಿರುವ ವರದಿ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇದ್ದು, ಇಲ್ಲಿಯವರೆಗೆ ಅವರಿಗೆ ಕ್ಲೀನ್ ಚಿಟ್ ದೊರೆತಿಲ್ಲ ಎಂದು ರಮೇಶ್ ಬಾಬು ಹೇಳಿದರು.

ಈ ವಿಚಾರವಾಗಿ ಅವರು ಯಾವುದೇ ಪೊಲೀಸ್ ಠಾಣೆಗಳಲ್ಲಿ ದೂರು ನೀಡದೆ ಈಗ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿದ್ದಾರೆ. ತಾವು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿರುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಅವರು ತಿಳಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕೀಳು ಮಟ್ಟದ ಆರೋಪ ಸಲ್ಲ: ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿಯಾಗಿ ತಮ್ಮ ವೈಯಕ್ತಿಕ ಸಾಮಥ್ರ್ಯದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಆದರೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೀಳು ಮಟ್ಟದ ಟೀಕೆಗೆ ಮಾಡುತ್ತಿರುವುದು ಸರಿಯಲ್ಲ ಎಂದು ರಮೇಶ್ ಬಾಬು ಹೇಳಿದರು.

ಜನರ ಹಾದಿ ತಪ್ಪಿಸುವ ವಿಚಾರ: ರಮೇಶ್ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡುವಾಗ ಬೆಂಗಳೂರಿನ ಶಾಂತಿನಗರ ಹೌಸಿಂಗ್ ಸೊಸೈಟಿ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇದು ಜನರನ್ನು ಹಾದಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪದಾಧಿಕಾರಿಗಳಾದ ಜಿ.ಸಿ.ರಾಜು, ದಿವಾಕರ್, ವಕ್ತಾರರಾದ ರಾಮಚಂದ್ರ ರೆಡ್ಡಿ, ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Similar News