×
Ad

ಸರಕಾರ ಸಂವೇದನಾಶೀಲತೆ ಕಳೆದುಕೊಂಡಿವೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2023-01-31 20:52 IST

ಬೆಂಗಳೂರು, ಜ.31: ಇಂದಿನ ಸರಕಾರ ಅಂಗನವಾಡಿ ಶಿಕ್ಷಕರು ಬದುಕು ಕಟ್ಟಿಕೊಳ್ಳಲು ಕೇಳುತ್ತಿರುವ ಕನಿಷ್ಠ ಬೇಡಿಕೆಯನ್ನು ಈಡೇರಿಸಲಾಗದಷ್ಟು ಸಂವೇದನಾಶೀಲತೆಯನ್ನು ಕಳೆದುಕೊಂಡಿವೆ ಎಂದು ಪ್ರಗತಿಪರ ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಕುವೆಂಪು ಮತ್ತು ದ.ರಾ.ಬೇಂದ್ರೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣಿಗೆ ಹೆಚ್ಚು ಗೌರವ ಕೊಟ್ಟ, ಸ್ತ್ರೀಪರವಾದ ಸಾಹಿತ್ಯ ರಚಿಸಿದ ಕುವೆಂಪು, ಬೇಂದ್ರೆಯವರನ್ನು ಸ್ಮರಿಸುತ್ತಿರುವ ಈ ಹೊತ್ತಿನಲ್ಲಿ ಹತ್ತಾರು ದಿನಗಳಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಿರತ ಅಂಗನವಾಡಿ ಕಾರ್ಯಕರ್ತೆಯರ ಗೋಳು ಕೇಳುವವರಿಲ್ಲದಿರುವುದು ನೋವಿನ ಸಂಗತಿ ಎಂದರು.

ಧರಣಿ ನಿರತ ಹೆಣ್ಣು ಮಕ್ಕಳು ತಮ್ಮ ಸಣ್ಣ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಕೊರೆಯುವ ಚಳಿಯಲ್ಲಿ ಧರಣಿ ನಿರತರಾಗಿರುವ ಅವರಿಗೆ ಸ್ನಾನ, ಶೌಚಾಲಯದ ವ್ಯವಸ್ಥೆ ಇಲ್ಲದಂತಾಗಿದೆ. ಅವರ ಪರಿಸ್ಥಿತಿ ನೋಡಿದರೆ ಕರುಳು ಕಿತ್ತು ಬರುವಂತಿದೆ. ಜನಪ್ರತಿನಿಧಿಗಳು ಅವರ ಗೋಳು ಕೇಳದಿರುವಷ್ಟು ಸಂವೇದನೆ ರಹಿತ ಸ್ಥಿತಿಗೆ ತಲುಪಿದ್ದಾರೆ. ನಾವುಗಳು ಇಂತಹ ಸಾಂಸ್ಕøತಿಕ ವೇದಿಕೆಗಳಲ್ಲಿ ಇಂತಹ ಕೆಟ್ಟ ನಡೆಯನ್ನು ಪ್ರಶ್ನಿಸಲೇಬೇಕು. ಪ್ರಶ್ನಿಸದಿದ್ದರೆ ನಮಗೆ ನೈತಿಕತೆ ಇಲ್ಲವೆಂದೇ ತಿಳಿಯಬೇಕು ಎಂದರು.

ವೇದಿಕೆಯಲ್ಲಿ ಆರ್. ಶಿವಪ್ರಕಾಶ್‍ಗೆ ಕುವೆಂಪು ಯುವಕವಿ ಪ್ರಶಸ್ತಿ, ಡಾ.ಬಸವರಾಜ ಸಬರದಗೆ ಚಿರಂತನ ವೈಚಾರಿಕ ಪ್ರಶಸ್ತಿ ಹಾಗೂ ಭೂಹಳ್ಳಿ ಪುಟ್ಟಸ್ವಾಮಿಗೆ ಕುವೆಂಪು ಅನಿಕೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.  

ಕಾರ್ಯಕ್ರಮದಲ್ಲಿ ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ, ಬರಹಗಾರರಾದ ಡಾ.ಕರೀಗೌಡ ಬೀಚನಹಳ್ಳಿ, ಎಲ್. ಗಿರಿಜಾರಾಜ್, ತಾ.ಸಿ. ತಿಮ್ಮಯ್ಯ, ಇಂದಿರಾ ಶರಣ್ ಜಮ್ಮಲದಿನ್ನಿ ಉಪಸ್ಥಿತರಿದ್ದರು.

Similar News