ಫೆ.1ರಂದು ನಡೆಯುವ ಪ್ರತಿಭಟನೆಗೆ ಬೆಂಬಲವಿಲ್ಲ: ದ.ಕ. ಜಿಲ್ಲಾ ಪೌರಕಾರ್ಮಿಕರ ಸಂಘ
ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೊಳಪಡಿಸಿ ಹಂತಹಂತವಾಗಿ ಖಾಯಂಗೊಳಿಸುವಂತೆ ಆಗ್ರಹಿಸಿ ಫೆ.1ರಿಂದ ಕಸ ಸಾಗಿಸುವ ವಾಹನ ಚಾಲಕರು ನೀರು ಸರಬರಾಜು ಸಹಾಯಕರು ಲೋಡರ್ಸ್ ಕ್ಲೀನರ್ಸ್ ಹೆಲ್ಪರ್ಸ್, ಒಳಚರಂಡಿ ಕಾರ್ಮಿಕರು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ನಡೆಸಲಿರುವ ಅನಿರ್ದಿಷ್ಟ್ಟಾವಧಿ ಮುಷ್ಕರಕ್ಕೆ ಜಿಲ್ಲಾ ಪೌರ ಕಾರ್ಮಿಕರ ಸಂಘದ ಬೆಂಬಲ ಇಲ್ಲ ಎಂದು ಪೌರಕಾರ್ಮಿಕರ ಹಾಗೂ 4ನೇ ದರ್ಜೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಪೌರ ಕಾರ್ಮಿಕರ ಮಹಾ ಸಂಘದ ವತಿಯಿಂದ ರಾಜ್ಯದಾದ್ಯಂತ ಕಳೆದ 2022ನೇ ಜೂನ್ ತಿಂಗಳಲ್ಲಿ ನಡೆದ 4 ದಿವಸಗಳ ಪ್ರತಿಭಟನೆಯ ಫಲವಾಗಿ ರಾಜ್ಯ ಪೌರ ಕಾರ್ಮಿಕರ ಮಹಾ ಸಂಘದ ಬೇಡಿಕೆಗಳ ಈಡೇರಿಸುವ ಬಗ್ಗೆ ಸರಕಾರವು ಭರವಸೆ ನೀಡಿತ್ತು ಎಂದು ಹೇಳಿದ್ದಾರೆ.
ಸಂಘಟನೆಯ ರಾಜ್ಯಾಧ್ಯಕ್ಷ ನಾರಾಯಣ ಮೈಸೂರು ಹಾಗೂ ಇತರ ಪದಾಧಿಕಾರಿಗಳಿಗೆ ಲಿಖಿತ ಭರವಸೆ ನೀಡಿದ ಪ್ರಕಾರ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 785 ಹುದ್ದೆಗಳ ಪೈಕಿ 392 ಪೌರಕಾರ್ಮಿಕರನ್ನು ಖಾಯಂಗೊಳಿಸಿದೆ. ಉಳಿದ ಅಂದರೆ 392 ಪೌರಕಾರ್ಮಿಕರನ್ನು ಆಯ್ಕೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಸರಕಾರವು ಆಧಿಸೂಚನೆ ಹೊರಡಿಸಿದೆ.
ವಿಷಯ ಹೀಗಿರುವಾಗ ಪೌರಕಾರ್ಮಿಕರನ್ನು ದಾರಿ ತಪ್ಪಿಸಿ ಪೌರಕಾರ್ಮಿಕರಿಗೆ ದ್ರೋಹ ಮಾಡುವ ಉದ್ದೇಶದಿಂದ ಅವರಿಗೆ ದೊರಕುವ ನೇಮಕಾತಿಯನ್ನು ವಿರೋಧಿಸಿ ಸಫಾಯಿ ಕರ್ಮಚಾರಿಗಳ ಸಂಘದ ಮಂಗಳೂರು ಎಂಬ ಹೆಸರಿನಲ್ಲಿ ಅದರ ಅಧ್ಯಕ್ಷ ನಾರಾಯಣ ಶೆಟ್ಟಿ, ಪದಾಧಿಕಾರಿಗಳಾದ ಅಣ್ಣಪ್ಪ ಕೆರೆಕಾಡು ತೆಗೆದುಕೊಂಡಿರುವ ನಿರ್ಧಾರವನ್ನು ಬದಲಿಸಲು ಜಿಲ್ಲಾಡಳಿತದ ಅನುಮತಿ ಇಲ್ಲದೆ ವಿಲೇವಾರಿ ಸಂಸ್ಥೆಗೆ ತಿಳಿಸದೆ ಕಾನೂನುಬಾಹಿರ ಪ್ರತಿಭಟನೆ ಮಾಡಲು ಹೊರಟಿರುತ್ತಾರೆ ಎಂದು ಆರೋಪಿಸಿದ್ದಾರೆ.
ಒಂದು ವೇಳೆ ನಮ್ಮ ಜಿಲ್ಲೆಯ ಪೌರಕಾರ್ಮಿಕರ ಹಾಗೂ ವಾಹನ ಚಾಲಕರು ಈ ಮೇಲಿನ ಕಾನೂನು ಬಾಹಿನ ಪ್ರತಿಭಟನೆಯಲ್ಲಿ ಭಾಗವಹಿಸಿದಲ್ಲಿ ಅವರಿಗೆ ಸರಕಾರದಿಂದ ಸಿಗಲಿರುವ ಖಾಯಂ ಹಾಗೂ ನೇರ ನೇಮಕಾತಿ ಮಂಜೂರಾತಿ ರದ್ದಾಗಬಹುದು .ಇದರಿಂದಾಗಿ ತಮ್ಮ ಸಂಘಟನೆಯ ಹೋರಾಟಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಆನಂದ್, ಮಾಜಿ ಅಧ್ಯಕ್ಷ ನಾಗೇಶ್ ಕಾರ್‌ಸ್ಟ್ರೀಟ್, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಗಾಂಧಿ ನಗರ ಉಪಸ್ಥಿತರಿದ್ದರು.