ಮಕ್ಕಳನ್ನು ರಕ್ಷಿಸಿದ ಕೆಎಸ್ಸಾರ್ಟಿಸಿ ಚಾಲಕ ಮಂಜುನಾಥ್‍ಗೆ ನಗದು ಪುರಸ್ಕಾರ
ಬೆಂಗಳೂರು, ಜ.31: ತುಮಕೂರು ವಿಭಾಗದ ಶಿರಾ ಘಟಕದ ಚಾಲಕ ಮಂಜುನಾಥ್ ಹಂದಿ ಕುಂಟೆ ಅಗ್ರಹಾರ ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ತಮ್ಮ ಜೀವದ ಹಂಗು ತೊರೆದು ರಕ್ಷಿಸಿ ಶೌರ್ಯ ಮೆರೆದರು. ಚಾಲಕನ ಮಾನವೀಯತೆಯನ್ನು ಮೆಚ್ಚಿ ನಿಗಮದ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಗೌರವಿಸಿದರು.
ಮಂಗಳವಾರ ಶಾಂತಿನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಮಂಜುನಾಥ್ ಅವರ ಕುಟುಂಬದವರ ಸಮ್ಮಖದಲ್ಲಿ ಅವರನ್ನು ಸನ್ಮಾನಿಸಿ, 10 ಸಾವಿರ ರೂ.ನಗದು ಪುರಸ್ಕಾರ ಮತ್ತು ಅಭಿನಂದನಾ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನ್ಬುಕುಮಾರ್, ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಉಳಿದಿವೆ ಎಂಬುದಕ್ಕೆ ಚಾಲಕ ಮಂಜುನಾಥ್ ಜೀವಂತ ಉದಾಹರಣೆ. ಈಜು ಬರುವ ಎಷ್ಟೋ ಜನ ದಿಢೀರನೆ ನೀರಿನಲ್ಲಿ ಧುಮುಕಿ, ಇತರರ ಪ್ರಾಣ ಉಳಿಸುವ ಕಾರ್ಯ ಮಾಡಲು ಹಲವು ಬಾರಿ ಯೋಚಿಸುತ್ತಾರೆ. ಆದರೆ ಮಂಜುನಾಥ್ ಜೀವ ಉಳಿಸುವ ಸಾಹಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳ ತಾಯಿ ಮಕ್ಕಳ ಪ್ರಾಣ ಉಳಿಸಲು ಕೋರಿದಾಗ ಆ ಬಸ್ಸಿನಲ್ಲಿ 40 ಜನ ಪ್ರಯಾಣಿಕರಿದ್ದರು, ಆದರೆ ಯಾರೊಬ್ಬರು ಮಂಜುನಾಥ್ ಮಾಡಿದ ಕಾರ್ಯ ಮಾಡಲು ಮುಂದೆ ಬರಲಿಲ್ಲ, ಆದರೆ ನಮ್ಮ ಚಾಲಕ ಒಂದು ಕ್ಷಣವೂ ಯೋಚಿಸದೆ ತಕ್ಷಣವೇ ಕೆರೆಗೆ ಹಾರಿ ಆ ಎರಡು ಹೆಣ್ಣು ಮಕ್ಕಳ ಜೀವ ಉಳಿಸಿದ್ದಾನೆ. ಜೀವಕ್ಕೆ ಬೆಲೆ ಕಟ್ಟುವುದಕ್ಕೆ ಯಾವುದರಿಂದಲೂ ಸಾಧ್ಯವಿಲ್ಲ. ಆ ಎರಡು ಹೆಣ್ಣುಮಕ್ಕಳ ತಾಯಿಗೆ ಮಕ್ಕಳ ಜೀವದ ಬೆಲೆ ಆ ಪರಿಸ್ಥಿತಿಯಲ್ಲಿ ತಿಳಿದಿದೆ ಎಂದು ಅವರು ಹೇಳಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಕೆಎಸ್ರ್ಸಾಟಿಸಿ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ, ಇಲಾಖಾ ಮುಖ್ಯಸ್ಥರು, ತುಮಕೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಶಿರಾ ಘಟಕದ ವ್ಯವಸ್ಥಾಪಕರು ಭಾಗವಹಿಸಿದ್ದರು.