ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಇಷ್ಟವಿಲ್ಲವೆಂದರೆ ‘ನೋಟಾ’ ಚಲಾಯಿಸಿ: ವಿಶ್ವೇಶ್ವರ ಹೆಗಡೆ ಕಾಗೇರಿ

''ನನ್ನ ಮತ ಮಾರಾಟಕ್ಕಿಲ್ಲ' ಎಂಬ ಅಭಿಯಾನ ಆರಂಭಿಸಿ''

Update: 2023-02-01 13:45 GMT

ಬೆಂಗಳೂರು, ಫೆ.1: ಚುನಾವಣೆಗಳಲ್ಲಿ ತಮಗೆ ಅಭ್ಯರ್ಥಿ ಇಷ್ಟವಿಲ್ಲವೆಂದರೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ‘ನೋಟಾ’ (ಮೇಲಿನ ಯಾವುದೂ ಅಲ್ಲ) ಆಯ್ಕೆ ಚಲಾಯಿಸಿ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದ್ದಾರೆ.

ಬುಧವಾರ ಬೆಂಗಳೂರು ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ, ಕಾನೂನು ವ್ಯಾಸಂಗ ಮಾಡುತ್ತಿರುವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ “ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ” ಕುರಿತ ಸಂವಾದಲ್ಲಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಯಾರೂ ಸರಿ ಇಲ್ಲ ಅನಿಸಿದರೆ ನೋಟಾ ಚಲಾಯಿಸಿ. ಇಲ್ಲದಿದ್ದರೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲೇ ಉತ್ತಮರು ಯಾರೆಂದು ಪರಿಗಣಿಸಿ ಆಯ್ಕೆ ಮಾಡಿ.ಆದರೆ, ಮತದಾನ ಮಾಡದೆ ಸುಮ್ಮನಿರಬೇಡಿ ಎಂದು ಅವರು ಹೇಳಿದರು.

ಚುನಾವಣೆಗಳಲ್ಲಿ ಹಣ, ಹೆಂಡ, ಇತರೆ ಆಮಿಷಗಳಿಗೆ ಮತ ಮಾರಿಕೊಳ್ಳುವುದಿಲ್ಲ ಎಂದು ಪ್ರತಿ ಪ್ರಜೆಯೂ ಅಭಿಯಾನ ಆರಂಭಿಸಿ, ಶ್ರೇಷ್ಠ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆಯನ್ನು ರಕ್ಷಿಸಬೇಕು. ಅದರಲ್ಲೂಹಣದ ಆಮಿಷ, ಜಾತಿ, ಉಪ ಜಾತಿ, ತೋಳ್ಬಲಕ್ಕೆ ನಮ್ಮ ಮತಗಳು ಮಾರಾಟವಾಗುತ್ತಿರುವುದು ಅಪಾಯದ ಸಂಕೇತ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕ ವ್ಯಕ್ತಪಡಿಸಿದರು.

ಅಂಬೇಡ್ಕರರ ಕೊಡುಗೆಯಿಂದ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆ ಹೊಂದಿದ್ದೇವೆ. ಆದರ್ಶ ಸಂಸದೀಯ ವ್ಯವಸ್ಥೆಯನ್ನು ರಕ್ಷಿಸಿ, ಇನ್ನಷ್ಟು ಶಕ್ತಿಯಾಲಿಯಾಗಿ ಬೆಳೆಸಬೇಕಿದ್ದರೆ ಯುವ ಸಮೂಹ ಜವಾಬ್ದಾರಿ ಅರಿತು ಪ್ರಜಾಪ್ರಭುತ್ವದ ಕಾವಲುಗಾರರಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಆದರ್ಶ ಮೌಲ್ಯಗಳು ಕುಸಿದಿವೆ. ವಿಷ ವರ್ತುಲದಿಂದ ಈ ವಿಷ ವರ್ತುಲದಿಂದ ಹೊರ ಬೇಕಾದರೆ ಈಗಿನ ವ್ಯವಸ್ಥೆಗೆ ಅಮೂಲಾಗ್ರ ಬದಲಾವಣೆ ತರುವುದು ಅವಶ್ಯವಿದೆ ಎಂದು ಸ್ಪೀಕರ್ ಪ್ರತಿಪಾದಿಸಿದರು.

ಮತ್ತೊಂದೆಡೆ ಮತದಾನದಲ್ಲಿ ಆಸಕ್ತಿ ಇಲ್ಲದ ಪ್ರಜಾಪ್ರಭುತ್ವದ ಪ್ರಜೆಗಳಾಗಿದ್ದೇವೆ ನಾವು. ಗ್ರಾಮೀಣ ಪ್ರದೇಶದಲ್ಲಿ ಶೇ.70, ಶೇ.80, ಶೇ.85 ರಷ್ಟು ಮತದಾನವಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಶೇ.30, 40 ರಷ್ಟು ಆಗುತ್ತದೆ. ಚುನಾವಣಾ ಆಯೋಗವು ವರ್ಷಪೂರ್ತಿ ಮತದಾರರ ನೋಂದಣಿ, ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಬೇಕು. ಇದರಿಂದ ಹೆಚ್ಚು ಸುಧಾರಣೆ ತರಬಹುದು ಎಂದು ಕಾಗೇರಿ ನುಡಿದರು.

ಬೆಂಗಳೂರು ನಗರದ ಜಿಲ್ಲಾಧಿಕಾರಿ ಕೆ.ದಯಾನಂದ್ ಪ್ರಾಸ್ತಾವಿಕ ಮಾತುಗಳಾನ್ನಡಿ, ಚುನಾವಣೆಯ ಹೊಸ್ತಿಲಲ್ಲಿರುವ ನಾವು ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಅಗತ್ಯತೆ ಬಗ್ಗೆ ನಾವು ಪ್ರತಿಯೊಬ್ಬ ಪ್ರಜೆಗೂ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಸಂಗಪ್ಪ, ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಸೇರಿದಂತೆ ಪ್ರಮುಖರಿದ್ದರು.

ಇದನ್ನೂ ಓದಿ: ಸುಮಲತಾಗೆ ಅಭಿಮಾನಿಗಳೇ ಹೈಕಮಾಂಡ್?; ಕುತೂಹಲ ಮೂಡಿಸುತ್ತಿರುವ ಮಂಡ್ಯ ರಾಜಕೀಯ

Similar News