×
Ad

ಶಾಲಾ ಕಾಲೇಜುಗಳಲ್ಲಿ ಕನ್ನಡ ಬೋಧನಾ ಅವಧಿಗೆ ಕತ್ತರಿ: ಬಂಜಗೆರೆ ಜಯಪ್ರಕಾಶ್ ಕಳವಳ

''ಕನ್ನಡ ಶಾಲೆಗಳ ನಿರ್ಲಕ್ಷ್ಯದ ವಿಚಾರದಲ್ಲಿ ಎಲ್ಲ ಪಕ್ಷಗಳ ಪಾತ್ರವಿದೆ''

Update: 2023-02-01 18:53 IST

ಬೆಂಗಳೂರು, ಫೆ.1: ಬಹುತೇಕ ಶಾಲಾ ಕಾಲೇಜುಗಳಲ್ಲಿ ಕನ್ನಡ ತರಗತಿಯ ಬೋಧನಾ ಅವಧಿಯನ್ನು ಕಡಿಮೆಗೊಳಿಸಲಾಗುತ್ತಿದ್ದು, ಸರಕಾರ ಸೂಕ್ತ ಕ್ರಮಕೈಗೊಳ್ಳುವಂತೆ ಸಾಹಿತ್ಯ ಪರಿಷತ್ತು ಹೋರಾಡಬೇಕು ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.

ಬುಧವಾರ ಚಾಮರಾಜಪೇಟೆ ಶ್ರೀ ಕೃಷ್ಣ ಪರಿಷತ್ತಿ ಮಂದಿರದಲ್ಲಿ ಜಯ ಕರ್ನಾಟಕ ಜನಪದ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ "ಪ್ರಸಕ್ತ ರಾಜಕೀಯದಲ್ಲಿ ಕನ್ನಡದ ಸಮಸ್ಯೆಗಳು ಮತ್ತು ಸವಾಲುಗಳು" ಕುರಿತ ಚಿಂತನೆ ಕಾರ್ಯಕ್ರಮ ಮಾತನಾಡಿದ ಅವರು, ಖಾಸಗಿ ಆಡಳಿತ ಮಂಡಳಿಗಳ ಪ್ರಭಾವದಿಂದ ಪಿಯು, ಪದವಿ, ಸ್ನಾತಕೋತ್ತರ ಕಾಲೇಜುಗಳಲ್ಲಿ ಕನ್ನಡ ಕಲಿಸುವಂತಹ ಕ್ರಮೇಣ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ ಇಂದು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಹಳಷ್ಟು ಜನರು ನಿರುದ್ಯೋಗಿಗಳಾಗುವ ಪರಿಸ್ಥಿತಿ ಬಂದೊದಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕನ್ನಡದ ಅಧ್ಯಾಪಕರಿಗೆ, ಉಪನ್ಯಾಸಕರಿಗೆ ಸಮಸ್ಯೆ ಬಂದಾಗ ಅದು ನೇರವಾಗಿ ಸಾಹಿತ್ಯಕ್ಕೆ, ಕನ್ನಡಕ್ಕೆ ಸಂಬಂಧಿಸಿದ್ದಾಗಿದ್ದು, ಇಂತಹ ಸಂದರ್ಭಗಳಲ್ಲಿ ಪರಿಷತ್ ತನ್ನ ನಿಲುವನ್ನು ಸ್ಪಷ್ಟಗೊಳಿಸಬೇಕು. ಕನ್ನಡಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ದೃಢ ಸಂಕಲ್ಪ ಮಾಡುವ ಅಗತ್ಯವಿದ್ದು, ಶಿಕ್ಷಣ, ಉದ್ಯಮ, ನ್ಯಾಯಾಲಯ, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಆದ್ಯತೆಗೊಳಿಸಿ ಕಾನೂನು ರೂಪಿಸಬೇಕು ಬಂಜಗೆರೆ ಜಯಪ್ರಕಾಶ್ ಆಗ್ರಹಿಸಿದರು.

ಇಂಗ್ಲಿಷ್ ಒಂದು ಸಾಧನವೇ ಹೊರತು, ಸ್ವರ್ಗಕ್ಕೆ ಕರೆದೊಯ್ಯುವ ವಾಹನವಲ್ಲ. ಅದು ಯಾರನ್ನೂ ಮೋಕ್ಷಕ್ಕೆ ಒಯ್ಯುವುದಿಲ್ಲ. ಒಳ್ಳೆಯ ಶಿಕ್ಷಣದ ಹೆಸರಲ್ಲಿ ಕನ್ನಡದ ಶಾಲೆ ಮುಚ್ಚಬಾರದು. ಜ್ಞಾನವನ್ನು ಯಾವ ಭಾಷೆಯಿಂದ ಬೇಕಾದರೂ ಪಡೆಯಬಹುದು ಆದರೆ ಅದನ್ನು ಆಲೋಚಿಸುವುದಕ್ಕೆ, ಅಭಿವ್ಯಕ್ತಿಸುವುದಕ್ಕೆ ಮಾತೃ ಭಾಷೆ ಅಗತ್ಯ. ಒಳಗಿನ ಭಾವಗಳನ್ನು ಮಾತೃಭಾಷೆಯಲ್ಲಿ ಮಾತ್ರ ಹೇಳಲು ಸಾಧ್ಯ ಎಂದು ಅವರು ತಿಳಿಸಿದರು.

ಪ್ರಸ್ತುತ ಹಿಂದಿ ರಾಷ್ಟ್ರ ಭಾಷೆ ಎಂದು ತಂದು ಕನ್ನಡಿಗರ ಮೇಲೆ ಹೇರಿಕೆ ಮಾಡಲಾಗುತ್ತಿದೆ. ಭಾರತದಲ್ಲಿರುವ ಅಷ್ಟೂ ಹೊರ ಭಾಷೆಗಳು ರಾಷ್ಟ್ರ ಭಾಷೆಗಳೇ. ಅನಿವಾರ್ಯವಾಗಿ ಇಂಗ್ಲಿಷ್ ಸಂಪರ್ಕ ಭಾಷೆಯಾಗಿದೆ. ಇವೆಲ್ಲ ಗಮನದಲ್ಲಿಟ್ಟುಕೊಂಡು ರಾಜಕೀಯ ಪಕ್ಷಗಳು ಕನ್ನಡಕ್ಕೆ ಕುತ್ತು ಬರದಂತೆ ತಮ್ಮ ವಿಧೇಯಕಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಮಾತನಾಡಿ, ಕನ್ನಡ ಉಳಿಯಬೇಕಾದರೆ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಕಲಿಯಬೇಕು. ಜೊತೆಗೆ ಕನ್ನಡಿಗರಿಗೆ ಉದ್ಯೋಗ ಹೆಚ್ಚಾಗಬೇಕು. ಕನ್ನಡ ಮಾಧ್ಯಮ ಶಾಲೆಗಳಿಂದ ಪ್ರತಿ ವರ್ಷ 3ಲಕ್ಷ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರುತ್ತಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ, ಇದು ಹೀಗೆ ಮುಂದುವರೆದರೆ ಕನ್ನಡ ಹಾಗೂ ಪರಿಷತ್ತು ಎರಡನ್ನು ಉಳಿಸಲು ಸಾಧ್ಯವಾಗುವುದಿಲ್ಲ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು.

ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹಾಗೂ ಆಧ್ಯಾತ್ಮದಲ್ಲಿ ಈ ಮೂರು ವಿಷಯಗಳಲ್ಲಿ ರಾಜಕೀಯ ಇರಬಾರದು. ಬಾಲ್ಯದಲ್ಲಿ ನಮಗೆ ಅತ್ಯಾಧುನಿಕ ತಂತ್ರಜ್ಞಾನದ ಇಲ್ಲದಿದ್ದರೂ, ನಾವು ಸುಖವಾಗಿ ಇದ್ದವು. ಯಾಕೆಂದರೆ ಆಗ ಯಾವುದೇ ವಿಷಯದಲ್ಲಿ ರಾಜಕೀಯ ಇರಲಿಲ್ಲ. ಆದರೆ ಇವತ್ತಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಜನಪದ ವೇದಿಕೆ ರಾಜ್ಯ ಉಪಾಧ್ಯಕ್ಷ ಉದಯ್ ಶೆಟ್ಟಿ, ಬೆಂಗಳೂರು ಜಿಲ್ಲಾಧ್ಯಕ್ಷ ಜೆ. ಶ್ರೀನಿವಾಸ್ ಉಪಸ್ಥಿತರಿದ್ದರು. 

'ಕನ್ನಡದ ಶಾಲೆಗಳಿಗೆ ಸೂಕ್ತ ಕಟ್ಟಡ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳಿಲ್ಲ. ಇಂದಿನ ಮಕ್ಕಳು ಇಂಗ್ಲಿಷ್ ಮೊರೆ ಹೋಗುತ್ತಿದ್ದಾರೆ. ಈ ಕಾರಣದಿಂದ ಸರಕಾರವೂ ಇಂಗ್ಲಿಷ್ ಕಲಿಸಲು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಪ್ರಾರಂಭಿಸಿದೆ.  ಹೀಗಾದರೆ, ಕನ್ನಡ ಶಾಲೆ ಗತಿಯೇನು. ಕನ್ನಡ ಶಾಲೆಗಳ ನಿರ್ಲಕ್ಷ್ಯದ ವಿಚಾರದಲ್ಲಿ ಎಲ್ಲ ಪಕ್ಷಗಳ ಪಾತ್ರವಿದೆ. ಬಹುತೇಕ ರಾಜಕಾರಣಿಗಳು ಖಾಸಗಿ ಶಾಲೆಗಳ ಮಾಲಕರಾಗಿದ್ದಾರೆ. ಖಾಸಗಿ ಶಾಲೆ ನಡೆಸುವುದಕ್ಕೆ ನಮ್ಮ ಭಿನ್ನಾಭಿಪ್ರಾಯವಿಲ್ಲ. ಆದರೆ, ಕನ್ನಡ ಕೊಲ್ಲಲು ಹೊರಟಿರುವುದಕ್ಕೆ ಭಿನ್ನಾಭಿಪ್ರಾಯವಿದೆ'. 

- ಬಂಜಗೆರೆ ಜಯಪ್ರಕಾಶ್, ಚಿಂತಕ

Similar News