ಪ್ರಮೋದ್ ಮುತಾಲಿಕ್ ರಿಗೆ ಕಾರ್ಕಳ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿಗೆ ಶ್ರೀರಾಮ ಸೇನೆ ಆಗ್ರಹ

Update: 2023-02-02 09:59 GMT

ಮಂಗಳೂರು, ಫೆ.2: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪ್ರಮೋದ್ ಮುತಾಲಿಕ್ ರಿಗೆ ಬೆಂಬಲ ನೀಡಬೇಕು ಶ್ರೀರಾಮ ಸೇನೆ ಒತ್ತಾಯಿಸಿದೆ.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಪ್ರಸಕ್ತ ಸನ್ನಿವೇಶದಲ್ಲಿ ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ, ಹಿಂದುತ್ವ ನಾಯಕರ, ಕಾರ್ಯಕರ್ತರ ಕಡೆಗಣನೆ, ಅವರ ಮೇಲೆ ಅನವಶ್ಯಕ ಕೇಸ್ ಇದರಿಂದಾಗಿ ಇಡೀ ಸಮಾಜಕ್ಕೆ ಬೇಸರವಾಗಿದೆ. ಪ್ರಾಮಾಣಿಕ, ಬದ್ಧತೆಯ ಜನಪ್ರತಿನಿಧಿಗಳನ್ನು ಸಮಾಜ ನಿರೀಕ್ಷಿಸುತ್ತಿದ್ದು, ಇದಕ್ಕೆ ಪ್ರಮೋದ್ ಮುತಾಲಿಕ್ ಸೂಕ್ತ ವ್ಯಕ್ತಿ ಎಂಬ ನಿರ್ಧಾರದಿಂದಾಗಿ ಅವರನ್ನು ಕಾರ್ಕಳದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಮುತಾಲಿಕ್ ರನ್ನು ಬೆಂಬಲಿಸದೆ ಬಿಜೆಪಿ ಕಾರ್ಕಳದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಹಿಂದುತ್ವ ಸಂಘಟನೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಸಂದರ್ಭ ಬರಬಹುದು ಎಂಬ ವಿಚಾರವನ್ನು ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರ ಗಮನಕ್ಕೆ ತರುತ್ತಿದ್ದೇವೆ ಎಂದು ಹೇಳಿದರು.
ಶ್ರೀರಾಮಸೇನೆಯು ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಹಿಂದುತ್ವ ನಾಯಕರಿಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಬಿಜೆಪಿಗೆ ಮನವಿ ಮಾಡಿತ್ತು. ಆದರೆ ಬಿಜೆಪಿ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ ಆನಂದ್ ಶೆಟ್ಟಿ ಕಾರ್ಕಳ ಸೇರಿದಂತೆ ಐದು ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಶ್ರೀರಾಮ ಸೇನೆ ಕಣಕ್ಕಿಳಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು.
ಮುತಾಲಿಕ್ ಕಾರ್ಕಳವನ್ನೇ ಆಯ್ದುಕೊಳ್ಳಲು ಕಾರಣವೇನು ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆನಂದ್ ಶೆಟ್ಟಿ ಅಡ್ಯಾರ್, ಕಾರ್ಕಳದಲ್ಲಿ ಮುತಾಲಿತಕರಿಗೆ ಹೆಚ್ಚು ಅಭಿಮಾನಿಗಳು ಇರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಸುನೀಲ್ ಕುಮಾರ್ ಅವರಿಗೂ ಮುತಾಲಿಕ್ ಬಗ್ಗೆ ಗೌರವಿದೆ. ಈ ಕಾರಣದಿಂದಾಗಿ ಕಾರ್ಕಳವನ್ನೇ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷ ಪ್ರದೀಪ್ ಮೂಡುಶೆಡ್ಡ, ಉಪಾಧ್ಯಕ್ಷ ಹರೀಶ್ ಬೊಕ್ಕಪಟ್ನ, ಸಂಘಟನಾ ಕಾರ್ಯದರ್ಶಿ ಕಿಶೋರ್ ನೀರ್ಮಾರ್ಗ, ನಗರ ಕಾರ್ಯದರ್ಶಿ ವೆಂಕಟೀಶ್ ಪಡಿಯಾರ್ ಉಪಸ್ಥಿತರಿದ್ದರು.

Similar News