ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡ ಸರಕಾರಿ ಆಸ್ಪತ್ರೆಗಳು: ಅನುದಾನಕ್ಕಾಗಿ ಆರೋಗ್ಯ ಇಲಾಖೆಗೆ ಪತ್ರ

Update: 2023-02-02 16:58 GMT

ಬೆಂಗಳೂರು, ಫೆ.2: ನಗರದ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವು ಸರಕಾರಿ ಆಸ್ಪತ್ರೆಗಳು ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡ ಹಿನ್ನೆಲೆ, ಶುಲ್ಕವನ್ನು ಪಾವತಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಮಾತನಾಡಿದ ಜಯನಗರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರಾಮಕೃಷ್ಣ, 40 ಲಕ್ಷ ರೂ. ಅನುದಾನ ಕೋರಿ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದ್ದು, ಹಣವನ್ನು ಬಿಡುಗಡೆ ಮಾಡಿದ ಕೂಡಲೇ ವಿದ್ಯುತ್ ಶುಲ್ಕ ಪಾವತಿಸಲಾಗುವುದು. ಅನುದಾನದ ಕೊರತೆಯಿಂದ ವಿದ್ಯುತ್ ಶುಲ್ಕ ಬಾಕಿ ಉಳಿದುಕೊಂಡಿದೆ. ಫೆಬ್ರುವರಿ ತಿಂಗಳ ಅಂತ್ಯದೊಳಗೆ ಸಂಪೂರ್ಣ ಶುಲ್ಕವನ್ನು ಪಾವತಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ನಗರದ ಪ್ರತಿಷ್ಠಿತ ಸರಕಾರಿ ಆಸ್ಪತ್ರೆಗಳಿಗೆ ಬಾಕಿ ವಿದ್ಯುತ್ ಶುಲ್ಕ ಪಾವತಿಸುವಂತೆ ಬೆಸ್ಕಾಂ ನೋಟಿಸ್ ನೀಡಿದೆ. ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರದ ಸಾರ್ವಜನಿಕ ಆಸ್ಪತ್ರೆ ಸೇರಿ ಹಲವು ಸರಕಾರಿ ಆಸ್ಪತ್ರೆಗಳು ಹಾಗೂ ಪೊಲೀಸ್ ಠಾಣೆಗಳಿಗೆ ಬೆಸ್ಕಾಂ ನೋಟಿಸ್ ಜಾರಿ ಮಾಡಿದ್ದು, ಕೆ.ಸಿ.ಜನರಲ್ ಸರಕಾರಿ ಆಸ್ಪತ್ರೆ ಬರೋಬ್ಬರಿ 48 ಲಕ್ಷ ರೂ. ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ ಬಾಕಿ ಉಳಿಸಿಕೊಂಡ ಬಿಲ್ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.

ಅಲ್ಲದೇ, ಕಾಲಮಿತಿಯಲ್ಲಿ ವಿದ್ಯುತ್ ಶುಲ್ಕವನ್ನು ಪಾವತಿ ಮಾಡದಿದ್ದರೆ, ವಿದ್ಯುತ್ ಕಡಿತ ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ. ಹಾಗೂ ಜಯನಗರದ ಆಸ್ಪತ್ರೆ 24,49,453 ರೂ. ಬಾಕಿ ಉಳಿಸಿಕೊಂಡಿದ್ದು, ವಿದ್ಯುತ್ ಬಿಲ್ ಪಾವತಿಸದಿದ್ದರೆ ಸ್ಥಗಿತಗೊಳಿಸುಂತೆ ಬೆಸ್ಕಾಂ ಎಚ್ಚರಿಸಿದೆ.

ಕೆ.ಸಿ.ಜನರಲ್ ಆಸ್ಪತ್ರೆಯೂ ಮಾಸಿಕ ಆಧಾರದ ಮೇಲೆ ಆಸ್ಪತ್ರೆ ಶುಲ್ಕಗಳನ್ನು ತೆರವುಗೊಳಿಸಿಲ್ಲ. ಲಕ್ಷಗಟ್ಟಲೆ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿದೆ. ಹೀಗಾಗಿ, ನೋಟಿಸ್ ಜಾರಿ ಮಾಡಿದ್ದೇವೆ. ಎರಡು ತಿಂಗಳ ಹಿಂದೆಯೇ ಆಸ್ಪತ್ರೆಗೆ ಮೊದಲ ನೋಟಿಸ್ ನೀಡಲಾಗಿತ್ತು. ಜ.17ರಂದು ಮತ್ತೊಮ್ಮೆ ನೋಟಿಸ್ ನೀಡಲಾಗಿದೆ. ಜ.30ರಂದು ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೆಸ್ಕಾಂನ ಅಧಿಕಾರಿ ತಿಳಿಸಿದ್ದಾರೆ.

Similar News