ಕೊಂಕಣ ರೈಲು ಮಾರ್ಗದಲ್ಲಿ ‘ವಂದೇ ಭಾರತ್’ ಅಗತ್ಯವಿದೆಯೇ?

ರೈಲ್ವೆ ಜಾಗೃತಿ

Update: 2023-02-03 05:14 GMT

ಕೊಂಕಣ ರೈಲು ವ್ಯಾಪ್ತಿಯಲ್ಲಿ 3 ಹೊಸ ‘ವಂದೇ ಭಾರತ್’ ರೈಲುಗಳನ್ನು ಆರಂಭಿಸಲಾಗುವುದೆಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಈ ಮೂರೂ ರೈಲುಗಳು ಮುಂಬೈ ಪಶ್ಚಿಮದ ಬಾಂದ್ರಾ ಟರ್ಮಿನಸ್‌ನಿಂದ ವಾಸಾಯ್-ಪನ್ವೇಲ್ ಮೂಲಕ ತಿರುವನಂತಪುರ, ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಮಧ್ಯದಲ್ಲಿ ಓಡಾಡಲಿವೆ.

ಈಗಾಗಲೇ ಓಡಾಡುವ ಎಂಟು ‘ವಂದೇ ಭಾರತ್’ ರೈಲುಗಳಿಗೆ ಕನಿಷ್ಠ ಜನಸ್ಪಂದನೆಯೂ ಇಲ್ಲದಿದ್ದರೂ ಕೇಂದ್ರ ಸರಕಾರವು ಇನ್ನೂರು ಹೊಸ ವಂದೇ ಭಾರತ್ ರೈಲುಗಳನ್ನು ಭಾರತದಾದ್ಯಂತ ಪರಿಚಯಿಸಲು ಹೊರಟಿದೆ.

1. ಸ್ಲೀಪರ್ ಬೋಗಿಯಿಲ್ಲ: ಈಗಾಗಲೇ ಭಾರತದಲ್ಲಿ ಪರಿಚಯಿಸಿದ 8 ವಂದೇ ಭಾರತ್ ರೈಲುಗಳಲ್ಲಿ ಕೇವಲ ಏರ್‌ಕಂಡಿಷನ್ ಚೇರ್ ಕಾರ್ ಮಾತ್ರ ಇದ್ದು, ಎಲ್ಲಿಗೆ ಪ್ರಯಾಣಿಸಬೇಕಾದರೂ ಬಸ್ಸಲ್ಲಿ ಕೂತಂತೆ ಕುಳಿತೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಮುಂಬೈ, ಮಂಗಳೂರು ಮಧ್ಯೆ 17 ಗಂಟೆಗಳ ರೈಲು ಪ್ರಯಾಣವನ್ನು ಕುಳಿತೇ ಪ್ರಯಾಣಿಸುವುದನ್ನು ಯಾರೂ ಇಚ್ಛೆಪಡುವುದಿಲ್ಲ. ವೃದ್ಧರು, ಗರ್ಭಿಣಿಯರು, ರೋಗಿಗಳಿಗೆ ಇದು ಅಸಾಧ್ಯ. 2025ರ ನಂತರ ಸ್ಲೀಪರ್ ವಂದೇ ಭಾರತ್ ರೈಲುಗಳನ್ನು ಆರಂಭಿಸಲು ಯೋಚಿಸಲಾಗಿದೆ.

2. ಹೆಚ್ಚಿನ ಟಿಕೇಟು ದರ: ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ಶೇ.140 ದರವಿದ್ದು, ಅದನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಿ, ಇತರ ರೈಲುಗಳಂತೆ ಶೇ. 100 ಮಾತ್ರ ಟಿಕೆಟ್ ದರ ವಿಧಿಸಲು, ಯಾತ್ರಿ ಸಂಘಗಳು ದಶಕದಿಂದ ಪ್ರಯತ್ನಿಸುತ್ತಲೇ ಇದೆ. ಇದೀಗ ಮಂಗಳೂರು ಮುಂಬೈ ಮಧ್ಯೆ ಕುಳಿತು ಪ್ರಯಾಣಿಸಲು ರೂ. 290, ಸ್ಲೀಪರ್ ರೂ. 520 ಹಾಗೂ ಏರ್‌ಕಂಡೀಶನ್ ಸ್ಲೀಪರ್‌ಗೆ ರೂ. 1,040 ದರವಿದೆ.

ವಂದೇ ಭಾರತ್ ರೈಲಲ್ಲಿ ಕುಳಿತು ಪ್ರಯಾಣಿಸಲು ಸುಮಾರು ರೂ. 2,000ಕ್ಕಿಂತ ಹೆಚ್ಚಿನ ದರವನ್ನು ಪ್ರಯಾಣಿಕರು ನೀಡಬೇಕಾಗುತ್ತದೆ ಎನ್ನಲಾಗಿದೆ. ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ರೈಲು ಪ್ರಯಾಣಿಕರಿಗೆ ಈ ದುಬಾರಿ ದರ ನೀಡಲು ಅಸಾಧ್ಯ. ಹಣವಂತರು ಹೆಚ್ಚಿನ ಹಣ ನೀಡಿ ಕಾರಲ್ಲಿ, ಬಸ್ಸಲ್ಲಿ ಹಾಗೂ ವಿಮಾನದಲ್ಲಿ ತೆರಳುತ್ತಾರೆ. ಸ್ಥಿತಿವಂತರಲ್ಲದವರು ಮಾತ್ರ ರೈಲಲ್ಲಿ ಹೋಗುತ್ತಾರೆ.

3. ಪ್ರಯಾಣದ ಅವಧಿಯಲ್ಲಿ ವ್ಯತ್ಯಾಸವಿಲ್ಲ: ಪ್ರಸಕ್ತ ಮಂಗಳೂರು ಎಕ್ಸ್‌ಪ್ರೆಸ್ ಮುಂಬೈಯಿಂದ ಮಂಗಳೂರು ತಲುಪಲು ಸುಮಾರು 14 ಗಂಟೆ ತಗಲುತ್ತದೆ. ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ಏಕಪಥದ ಹಳಿ ಇರುವುದರಿಂದ ವಂದೇ ಭಾರತ್ ರೈಲು ಕೂಡ 14 ಗಂಟೆಗಳನ್ನೇ ತೆಗೆದುಕೊಳ್ಳುತ್ತದೆ. ಸಾವಿರಾರು ರೂಪಾಯಿ ಹೆಚ್ಚುವರಿಯಾಗಿ ನೀಡಿ ಪ್ರಯಾಣದ ಅವಧಿಯಲ್ಲಿ ಗಮನಾರ್ಹ ಕಡಿತವಿದ್ದರೆ ಮಾತ್ರ ವಂದೇ ಭಾರತ್ ಯಶಸ್ವಿಯಾಗಬಲ್ಲದು.

4. ನಿಲುಗಡೆ ಕಡಿತ: ಕೇಂದ್ರ ಸರಕಾರದ ಯೋಜನೆಯಂತೆ, ಕೊಂಕಣ ರೈಲು ವ್ಯಾಪ್ತಿಯಲ್ಲಿ, ಏಕಪಥದ ಹಳಿ ಇರುವುದರಿಂದ, ಇತರ ರೈಲುಗಳಿಗಿಂತ ವಂದೇ ಭಾರತ್ ರೈಲು ಕೂಡ ಕಡಿಮೆ ವೇಗದಲ್ಲಿ ಬರಬೇಕಾಗಿರುವುದರಿಂದ, ಈ ರೈಲಿಗೆ ಪ್ರಯಾಣಿಕರು ದೊರಕದೆ ಅತೀವ ನಷ್ಟ ಉಂಟಾಗಬಹುದು, ಇದರಿಂದಾಗಿ ಇತರ ಎಕ್ಸ್‌ಪ್ರೆಸ್ ರೈಲುಗಳಿಗಿಂತ ಕನಿಷ್ಠ 2 ಗಂಟೆ ಮೊದಲು ತಲುಪಿಸಲು; ಮಂಗಳೂರು- ಮುಂಬೈ ಮಧ್ಯೆ ಕೇವಲ ನಾಲ್ಕು ನಿಲುಗಡೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

5. ಅವಘಡಗಳು ಹೆಚ್ಚು:  ವಂದೇ ಭಾರತ್ ಪರಿಚಯಿಸಿದ ಕೆಲವೇ ದಿನಗಳೊಳಗೆ ದನ/ಕೋಣ ಅಡ್ಡ ಬಂದು ವಂದೇ ಭಾರತ್ ಎದುರುಗಿನ ಫೈಬರ್ ಕವಚವೇ ಕಳಚಿ ಬಿದ್ದು 6-7 ಗಂಟೆಗಳ ಕಾಲ ರೈಲು ಸ್ಥಗಿತಗೊಂಡಿತ್ತು. ಮುಂಬರುವ ಅಡೆತಡೆಗಳ ಅಧ್ಯಯನ ಮಾಡದೆ, ಕೇವಲ ಚಂದ ಕಾಣಲು ಎದುರು ಡುಬ್ಬವನ್ನು ನಿರ್ಮಿಸಿದೆ. ಈ ಡುಬ್ಬದ ಕೆಳಗೆ ಸಣ್ಣದಾಗಿ ಕಬ್ಬಿಣದ ತಡೆಗೇಟ್ ಹಾಕಿದೆ. ಹಾಗಾಗಿ ಸಣ್ಣ ನಾಯಿ ಅಡ್ಡ ಬಂದರೂ, ಇಂಜಿನ್ ಹಾಳಾಗುತ್ತದೆ. ಈ ಹಿಂದಿನ ಡೀಸೆಲ್ ಹಾಗೂ ವಿದ್ಯುತ್ ಇಂಜಿನ್‌ಗಳಲ್ಲಿ ಬಹಳ ದೊಡ್ಡ ಕಬ್ಬಿಣದ ತಡೆಗೇಟ್ ಇದ್ದು ಆನೆ ಎದುರಾದರೂ ಇಂಜಿನ್‌ಗೆ ಸಮಸ್ಯೆ ಬರುತ್ತಿರಲಿಲ್ಲ. ಅಷ್ಟೇ ಅಲ್ಲದೆ ಎರಡು ಬಫರ್ಸ್ ಕೂಡ ಇಲ್ಲ. ಬಹಳಷ್ಟು ಕಡೆ ಭಾರತದಲ್ಲಿ ವ್ಯಕ್ತಿ (ಗಾರ್ಡ್) ಇಲ್ಲದ ರೈಲ್ವೆ ಗೇಟ್ ಇದೆ. ಇದರಿಂದಾಗಿ ವಂದೇ ಭಾರತ್‌ಗೆ ಏನು ಅಡ್ಡ ಬಂದರೂ, ರೈಲು ರಿಪೇರಿಗಾಗಿ ಎಲ್ಲಾ ಪ್ರಯಾಣಿಕರು ಐದಾರು ಗಂಟೆಗಳ ಕಾಲ ಕಾಯಬೇಕಾಗುತ್ತದೆ.

ಇಂತಹ ಕಾರಣಗಳಿಂದಾಗಿ ಉತ್ತರ ಭಾರತದ ಬಹಳಷ್ಟು ಕಡೆ, ಪ್ರಯಾಣಿಕರು ವಂದೇ ಭಾರತ್ ರೈಲಿಗೆ ಕಲ್ಲೆಸೆದು ಹಾನಿ ಮಾಡಿದ್ದಾರೆ. ಇದು ದಕ್ಷಿಣ ಭಾರತದಲ್ಲಿ ಮರುಕಳಿಸಬಾರದು.

 ಈ ಮೂರು ವಂದೇ ಭಾರತ್ ರೈಲುಗಳಿಂದ, ಪ್ರಯಾಣಿಕರಿಗೆ ಸಿಗಬಹುದಾದ ಒಂದೇ ಒಂದು ಭರವಸೆ ಎಂದರೆ, ಅದು ಮುಂಬೈ ಪಶ್ಚಿಮದ ಬಾಂದ್ರಾದಿಂದ ಆರಂಭವಾಗಿ - ಅಂಧೇರಿ, ಬೊರಿವಿಲಿ, ಮೀರಾ ರೋಡ್, ವಸಾಯ್ ರೋಡ್ ಮಧ್ಯೆ ವಾಸಿಸುವವರಿಗೆ ಮಂಗಳೂರು ಕಡೆ ಬರಲು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಮೊದಲ ರೈಲು ಸಿಕ್ಕಿದಂತಾಯಿತು. ಈತನಕ ಮುಂಬೈಯಿಂದ ಆರಂಭವಾಗಿ ಮಂಗಳೂರಿಗೆ ಬರುವ ಎಲ್ಲಾ ರೈಲುಗಳು ಮಧ್ಯ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್, ದಾದರ್ ಹಾಗೂ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಆರಂಭವಾಗುತ್ತವೆ. ಪಶ್ಚಿಮ ಮುಂಬೈಯಿಂದ ಆರಂಭವಾಗುವ ಒಂದೇ ಒಂದು ರೈಲಿಲ್ಲ.

ಬಹಳ ಕಡೆ, ಈಗಿರುವ ಐಸಿಎಫ್ ಹಾಗೂ ಎಲ್‌ಎಚ್‌ಬಿ ರೈಲುಗಳನ್ನು ಸಂಚಾರದಿಂದ ಮುಕ್ತವಾಗಿರಿಸಿ; ವಂದೇ ಭಾರತ್ ರೈಲುಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ. ಹೀಗೆ ಸಂಚಾರದಿಂದ ಮುಕ್ತವಾಗಿರಿಸಿದ ರೈಲುಗಳಲ್ಲಿ 24 ಬೋಗಿಗಳ ಎರಡು ಎಲ್‌ಎಚ್‌ಬಿ ರೈಲುಗಳನ್ನು ಬಾಂದ್ರಾ- ಮಂಗಳೂರು ಹಾಗೂ ಬಾಂದ್ರಾ- ತಿರುವನಂತಪುರಕ್ಕೆ ವಸಾಯ್-ಪನ್ವೇಲ್ ಮಾರ್ಗವಾಗಿ ಪ್ರತಿದಿನದ ಎಕ್ಸ್‌ಪ್ರೆಸ್ ರೈಲನ್ನೇ ಓಡಿಸಬೇಕಾಗಿದೆ.

Similar News