ಸರಕಾರಿ ವೈದ್ಯರ ಖಾಸಗಿ ಕ್ಲಿನಿಕ್‍ಗಳಿಗೆ ಕಡಿವಾಣ ಹಾಕಿ; ಆಡಳಿತ ಸುಧಾರಣಾ ಆಯೋಗದಿಂದ ಸಿಎಂಗೆ ವರದಿ ಸಲ್ಲಿಕೆ

''ಮಕ್ಕಳಿಗೆ 2ರ ಬದಲು 5 ಮೊಟ್ಟೆ ನೀಡಿ''

Update: 2023-02-03 11:39 GMT

ಬೆಂಗಳೂರು, ಫೆ. 3: ಸರಕಾರಿ ಶಾಲೆಗಳಲ್ಲೇ ಅಂಗನವಾಡಿ ಕೇಂದ್ರಗಳ ಆರಂಭ, ಸರಕಾರಿ ವೈದ್ಯರ ಖಾಸಗಿ ಕ್ಲಿನಿಕ್‍ಗಳಿಗೆ ಕಡಿವಾಣ ಹಾಕಿ ಆಸ್ಪತ್ರೆಗಳಲ್ಲಿ ಸಂಜೆ ಹೊರರೋಗಿ ವಿಭಾಗ ಆರಂಭ, ತಾಲೂಕು ಆಸ್ಪತ್ರೆಗಳಲ್ಲಿಯೂ ನರ್ಸಿಂಗ್ ಕಾಲೇಜು ಆರಂಭ ಸೇರಿದಂತೆ ಹಲವು ಮಹತ್ವದ ಶಿಫಾರಸ್ಸುಗಳುಳ್ಳ ‘ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 4 ಮತ್ತು 5ನೆ ವರದಿಗಳನ್ನು ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಲ್ಲಿಸಿದ್ದಾರೆ.

ಶುಕ್ರವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ವರದಿ ಸಲ್ಲಿಕೆ ಮಾಡಿದರು. ವಿವಿಧ ಇಲಾಖೆಗಳ ಒಟ್ಟು 3,630 ಶಿಫಾರಸುಗಳ ವರದಿಯನ್ನು ಸಲ್ಲಿಕೆ ಮಾಡಿದರು.

ಪ್ರಮುಖ ಶಿಫಾರಸ್ಸುಗಳು: ಸರಕಾರಿ ಶಾಲೆಗಳಲ್ಲಿ ಅಂಗನವಾಡಿ ಪ್ರಾರಂಭಿಸಿ ಅದೇ ಶಾಲೆಯಲ್ಲೇ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡಬೇಕು. ವಿದ್ಯಾರ್ಥಿಗಳು ಶಾಲೆ ಬಿಡುವುದನ್ನು ತಪ್ಪಿಸಲು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸುವುದು. 1ರಿಂದ 12ನೆ ತರಗತಿ ವರೆಗೆ ಕ್ಲಸ್ಟರ್ ಶಾಲೆ ಮಾಡಿದಲ್ಲಿ ವರ್ಗಾವಣೆ ಪ್ರಮಾಣ ಪತ್ರವನ್ನು ಪದೇ ಪದೇ ಪಡೆದುಕೊಳ್ಳುವುದು ಕಡಿಮೆ ಮಾಡಿದಂತಾಗುತ್ತದೆ.

ಜೊತೆಗೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡಿ ಪೌಷ್ಠಿಕತೆ ಸುಧಾರಿಸಬೇಕು. ಅಪೌಷ್ಟಿಕತೆ ನೀಗಿಸಲು 2ರ ಬದಲು 5 ಮೊಟ್ಟೆ ನೀಡಬಹುದೇ ಎಂದು ಪರಿಶೀಲಿಸಿ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ಸೀಟು ಪಡೆಯುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೋಟಾ ಅಡಿಯಲ್ಲಿ ಶೇ.15ರಷ್ಟು ಸೀಟು ಮೀಸಲಿಡುವುದು. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.5ರಿಂದ 10ರಷ್ಟು ಅನಿವಾಸಿ ಭಾರತೀಯ ಕೋಟಾ ಸೃಷ್ಟಿ ಮಾಡಬಹುದು. 

ನೂರು ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯಲ್ಲಿ ಕೆಲಸದ ಹೊರೆ ಇಳಿಸಲು ಬಿಎಸ್ಸಿ ನರ್ಸಿಂಗ್ ಕೋರ್ಸ್ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸ್ ಆರಂಭಿಸಬಹುದು. ಕೇಂದ್ರ ಸರಕಾರದ ನಿಯಮದ ಪ್ರಕಾರ ಸರಕಾರಿ ವೈದ್ಯರು ಖಾಸಗಿ ವೃತ್ತಿ ನಡೆಸುವುದನ್ನು ನಿಷೇಧಿಸಬಹುದು, ಸರಕಾರಿ ಆಸ್ಪತ್ರೆಗಳಲ್ಲೇ ಸಂಜೆ ಹೊರರೋಗಿಗಳ ವಿಭಾಗ ಪ್ರಾರಂಭಿಸಲು ಸಲಹೆ ನೀಡಲಾಗಿದೆ.

ಕೆಪಿಎಸ್ಸಿ ಅಧ್ಯಕ್ಷರು ಸೇರಿದಂತೆ ಸದಸ್ಯರ ಸಂಖ್ಯೆಯನ್ನು 14 ರಿಂದ 8ಕ್ಕೆ ಇಳಿಸಲು ಶಿಫಾರಸು ಮಾಡಿದ್ದು, ಬಿಬಿಎಂಪಿಯಲ್ಲಿನ 30 ಕಂದಾಯ ವಿಭಾಗಗಳಿಗೆ ವಿಕೇಂದ್ರೀಕರಣ ಮತ್ತು ಸಮನ್ವಯ ಸಾಧಿಸಲು 30 ಕೆಎಎಸ್ ಅಧಿಕಾರಿಗಳನ್ನು ನೇಮಿಸಬೇಕು. 5ಲಕ್ಷ ರೂ.ಗಳಿಗಿಂತ ಕಡಿಮೆ ವಹಿವಾಟು ಹೊಂದಿರುವ ಸಂಘಗಳು 5 ವರ್ಷಗಳಿಗೊಮ್ಮೆ ಲೆಕ್ಕಪತ್ರ ಸಲ್ಲಿಸಲು ಲೆಕ್ಕ ಪರಿಶೋಧನೆ ಮಾಡಿಸುವ ಅಗತ್ಯವಿಲ್ಲ. ಸಹಕಾರ ಚುನಾವಣಾ ಪ್ರಾಧಿಕಾರ ರದ್ದುಗೊಳಿಸಬಹುದು. ಉದ್ಯೋಗ ಸೇವೆ ಇಲಾಖೆಯನ್ನು ಕೌಶಲ್ಯ ಮಿಷನ್ ಜೊತೆ ವಿಲೀನಗೊಳಿಸಬಹುದು ಎಂಬುದು ಸೇರಿದಂತೆ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಹಲವು ಶಿಫಾರಸ್ಸುಗಳನ್ನು ಮಾಡಲಾಗಿದೆ.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Similar News