ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ದೊಡ್ಡದು: ಸಚಿವ ಡಾ.ಅಶ್ವತ್ಥನಾರಾಯಣ

Update: 2023-02-03 16:11 GMT

ಬೆಂಗಳೂರು, ಫೆ. 3: ರಾಜಧಾನಿಯ ನಿವಾಸಿಗಳ ಬಹುಕಾಲದ ಬೇಡಿಕೆಯಾದ ಉಪನಗರ ರೈಲು ಸೌಲಭ್ಯ ಸೇರಿದಂತೆ ಮೆಟ್ರೋ ಮತ್ತು ಕಾವೇರಿ ನೀರು ಪೂರೈಕೆಯ ಐದನೇ ಹಂತದ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಕೀರ್ತಿ ಬಿಜೆಪಿ ಸರಕಾರದ್ದಾಗಿದೆ. ಇದನ್ನೆಲ್ಲ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಹೋಗಿ ತಿಳಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಸಲಹೆ ನೀಡಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಮಲ್ಲೇಶ್ವರ ಕ್ಷೇತ್ರದ ಮಂಡಲ ಸಭೆಯಲ್ಲಿ ಮಾತನಾಡಿದ ಅವರು, ಉಪನಗರ ರೈಲು ಯೋಜನೆಗೆ ಸಾಮಾನ್ಯವಾಗಿ ಒಂದು ಕಿಲೋಮೀಟರ್ ಕಾಮಗಾರಿಗೆ 250ಕೋಟಿ ರೂ.ವೆಚ್ಚ ತಗುಲುತ್ತದೆ. ಆದರೆ, ಬಿಜೆಪಿ ಸರಕಾರವು ಹಾಲಿ ಇರುವ ಹಳಿಗಳನ್ನು ಇದಕ್ಕೆ ಉಪಯೋಗಿಸಿಕೊಂಡು ಇದನ್ನು 70ಕೋಟಿ ರೂ.ಗೆ ಇಳಿಸಿದೆ. ಒಟ್ಟು ಯೋಜನೆಗೆ ಮೊದಲ ಹಂತದಲ್ಲಿ 18 ಸಾವಿರ ಕೋಟಿ ರೂ.ಕೊಡಲಾಗಿದೆ ಎಂದು ವಿವರಿಸಿದರು.

ಹಾಗೆಯೇ, ಕಾರಿಗಿಂತ ಹೆಚ್ಚು ಸುಖಕರ ಹಾಗೂ ಸಂಚಾರ ದಟ್ಟಣೆಗೆ ಪರಿಹಾರವಾಗಿ ಸದ್ಯ 75ಕಿ.ಮೀ ಇರುವ ಮೆಟ್ರೋ ರೈಲು ಯೋಜನೆಯನ್ನು 250ಕಿ.ಮೀ.ಗಳಿಗೆ ವಿಸ್ತರಿಸಲಾಗುತ್ತಿದೆ. ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರಕಾರದ ಸಾಧನೆಗಳ ಜತೆಗೆ ರಾಜ್ಯ ಬಿಜೆಪಿ ಸರಕಾರವು ಮಾಡಿರುವ ಸಾಧನೆಗಳ ಬಗ್ಗೆಯೂ ಬೆಳಕು ಚೆಲ್ಲಬೇಕು ಎಂದು ಅವರು ಸಲಹೆ ನೀಡಿದರು.

ಕಾವೇರಿ 4 ಮತ್ತು 5ನೆ ಹಂತದ ಕುಡಿಯುವ ನೀರಿನ ಯೋಜನೆಗಳ ಮೂಲಕ ಕ್ರಮವಾಗಿ 800 ಎಂಎಲ್‍ಡಿ ಮತ್ತು 750 ಎಂಎಲ್‍ಡಿ ನೀರನ್ನು ಬೆಂಗಳೂರು ನಾಗರಿಕರಿಗೆ ಕೊಟ್ಟಿದ್ದು ಬಿಜೆಪಿಯೇ ಆಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವರ್ಷಕ್ಕೆ ಕೇವಲ 10 ಸಾವಿರ ಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕೊಡಲಾಗುತ್ತಿತ್ತು. ಈಗ ಬಿಜೆಪಿ ಸರಕಾರದ ಅವಧಿಯಲ್ಲಿ ಲಕ್ಷಾಂತರ ಯುವಜನರಿಗೆ ಕೌಶಲ್ಯಾಭಿವೃದ್ಧಿ ಜತೆಗೆ ಉದ್ಯೋಗ ಕೊಡಲಾಗುತ್ತಿದೆ ಎಂದು ಅವರು ನುಡಿದರು.

ಈಗ ಮಿಸ್ಡ್ ಕಾಲ್ ಸದಸ್ಯತ್ವ ಅüಯಾನದಲ್ಲಿ ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯಲ್ಲಿ 67 ಸಾವಿರ ಕರೆಗಳು ಬಂದಿವೆ. ಇವರೆಲ್ಲರನ್ನೂ ಸಂಪರ್ಕಿಸಿ, ಪಕ್ಷದ ಸದಸ್ಯತ್ವ ಕೊಡಬೇಕು ಎಂದು ಹೇಳಿದರು. ಸಭೆಯಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ವಾಸು, ಮಂಡಲ ವಿಭಾಗದ ಅಧ್ಯಕ್ಷೆ  ಕಾವೇರಿ ಕೇದಾರನಾಥ್, ಶಕ್ತಿ ಕೇಂದ್ರಗಳ ಪ್ರಮುಖರು ಮತ್ತು ಬೂತ್ ಅಧ್ಯಕ್ಷರು ಭಾಗವಹಿಸಿದ್ದರು.

Similar News