ಸಂಚಾರ ವ್ಯವಸ್ಥೆಗೆ ಅಡಚಣೆ ಆರೋಪ: ಧರಣಿ ನಡೆಸಿದ್ದ ಅಂಗನವಾಡಿ ನೌಕರರ ವಿರುದ್ಧ FIR

Update: 2023-02-03 16:41 GMT

ಬೆಂಗಳೂರು, ಫೆ.3: ಗ್ರ್ಯಾಚುಟಿ, ಮುಂಬಡ್ತಿ ಸೇರಿ ಹಲವು ಬೇಡಿಕೆಗಳಿಗೆ ಸರಕಾರವನ್ನು ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಿದ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಸೇರಿದಂತೆ ಹಲವು ಮುಖಂಡ ವಿರುದ್ಧ ಉಪ್ಪಾರಪೇಟೆ ಪೊಲೀಸರು ಸ್ವಯಂಪ್ರೇರಿತ ದೂರನ್ನು ದಾಖಲಿಸಿದ್ದಾರೆ.

ಸಿಐಟಿಯು ಸಹಭಾಗಿತ್ವದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.23ರಿಂದ 10 ದಿನಗಳ ವರೆಗೆ ಅಹೋರಾತ್ರಿ ಹೋರಾಟ ನಡೆಸಿದ್ದರು. ಈ ವೇಳೆ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಸವಾರರಿಗೆ ತೊಂದರೆ ಮಾಡಲಾಗಿದೆ ಎಂದು ಆರೋಪಿಸಿ ಸಂಘಟನೆಯ ಅಧ್ಯಕ್ಷೆ ವರಲಕ್ಷ್ಮೀ, ಮುಖಂಡರಾದ ಎಚ್.ಎಸ್ ಸುನಂದಾ, ಶಾಂತಾ ಘಂಟಿ, ಜಿ.ಕಮಲಾ ಸೇರಿದಂತೆ ಜಿಲ್ಲಾ ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಮಾತನಾಡಿದ ಸಂಘಟನೆ ಅಧ್ಯಕ್ಷೆ ವರಲಕ್ಷ್ಮಿ, ಹೋರಾಟದಲ್ಲಿ 30 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರಣ ಸ್ಥಳದ ಕೊರತೆಯಿಂದ ಅಕ್ಕಪಕ್ಕದ ಮುಖ್ಯರಸ್ತೆಯಲ್ಲೇ ಕುಳಿತು ಧರಣಿ ಮಾಡಬೇಕಾಯಿತು. ಅಲ್ಲದೆ, ಅಹೋರಾತ್ರಿ ಧರಣಿಯ ಹಿನ್ನೆಲೆಯಲ್ಲಿ ರಾತ್ರಿ ನಡುರಸ್ತೆಯಲ್ಲೇ ಮಲಗಬೇಕಾದ ಪರಿಸ್ಥಿತಿಯೂ ಇತ್ತು. ಸರಕಾರ ನಮ್ಮನ್ನು ನಿರ್ಲಕ್ಷ್ಯಿಸಿದ ಕಾರಣ ಧರಣಿ ಮುಂದುವರೆದಿತ್ತು. ನಮ್ಮ ನೋವುಗಳನ್ನು ಸರಕಾರಕ್ಕೆ ಹೇಳಿಕೊಳ್ಳಲು ಬಂದ ನಮ್ಮ ವಿರುದ್ಧ ಪೊಲೀಸರು ಕೇಸ್ ದಾಖಲಿಸಿರುವುದು ಖಂಡನೀಯ ಎಂದರು.

Similar News