ಮಂಗಳೂರು: ಕ್ರಿಪ್ಟೋ ಕರೆನ್ಸಿ ವ್ಯವಹಾರ ಹೂಡಿಕೆ ನೆಪದಲ್ಲಿ 3 ಕೋ.ರೂ. ವಂಚನೆ; ಪ್ರಕರಣ ದಾಖಲು

Update: 2023-02-03 16:52 GMT

ಮಂಗಳೂರು: ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆ ಹೂಡಿಕೆ ಮಾಡಿಸಿಕೊಂಡು 3 ಕೋ.ರೂ. ವಂಚಿಸಿರುವ ಬಗ್ಗೆ ಕಣ್ಣೂರು ಬೋರುಗುಡ್ಡೆಯ ನಿವಾಸಿಯೊಬ್ಬರು ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಹಮ್ಮದ್ ಶಫದ್ ಸಿ.ಕೆ. ಮತ್ತು ಮುಹಮ್ಮದ್ ಅಫೀದ್ ಸಿ.ಕೆ. 3 ಕೋ.ರೂ. ವಂಚಿಸಿರುವ ಆರೋಪಿಗಳಾಗಿದ್ದು, ಪ್ರಕರಣ ದಾಖಲಿಸಿರುವ ಸೆನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಣ್ಣೂರು ಬೋರುಗುಡ್ಡೆಯ ದೂರುದಾರ ವ್ಯಕ್ತಿಯ ಬಳಿ ಪರಿಚಯದ ಮುಹಮ್ಮದ್ ಶಫದ್ ಎಂಬಾತ 2020ರ ಜನವರಿಯ ಮೊದಲ ವಾರದಲ್ಲಿ ತಾನು ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಕೋಟ್ಯಂತರ ರೂ. ಸಂಪಾದಿಸಿದ್ದು, ಯಾರಾದರೂ ಒಳ್ಳೆಯ ಹೂಡಿಕೆದಾರರು ಇದ್ದರೆ ತಿಳಿಸಿ ಎಂದಿದ್ದ ಎನ್ನಲಾಗಿದೆ. ಅದರಂತೆ ದೂರುದಾರರು ಮುಹಮ್ಮದ್ ಶಫದ್‌ನನ್ನು ಭೇಟಿಯಾಗಿದ್ದು, ಆವಾಗ ಆತ ಲ್ಯಾಪ್‌ಟಾಪ್‌ನಲ್ಲಿ ಕ್ರಿಪ್ಟೋ ವ್ಯವಹಾರದ ಮಾಹಿತಿ ನೀಡುತ್ತಾ ತಿಂಗಳಿಗೆ ಶೇ.25 ಲಾಭಾಂಶ ನೀಡುವುದಾಗಿ ತಿಳಿಸಿದ್ದ ಎಂದು ಹೇಳಲಾಗಿದೆ.

ಜನವರಿ ಮೂರನೇ ವಾರದಲ್ಲಿ ಮುಹಮ್ಮದ್ ಶಫದ್ ಮತ್ತು ಆತನ ತಮ್ಮ ಮುಹಮ್ಮದ್ ಅಫೀದ್ ದೂರುದಾರರ ಮನೆಗೆ ಭೇಟಿ ನೀಡಿದಾಗ ತಾನು 35 ಲಕ್ಷ ರೂ. ನಗದನ್ನು ಆರೋಪಿ ಸಹೋದರರಿಗೆ ನೀಡಿದ್ದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಂದು ತಿಂಗಳ ಬಳಿಕ ಮುಹಮ್ಮದ್ ಶಫದ್ ವಾಟ್ಸಪ್ ಮೂಲಕ ದೂರುದಾರರಿಗೆ ಒಂದು ತಿಂಗಳ 8.75 ಲಕ್ಷ ರೂ. ಲಾಭಾಂಶ ಬಂದಿರುವುದಾಗಿ ಕ್ರಿಪ್ಟೋ ಕರೆನ್ಸಿಯ ಅಕೌಂಟ್ ತೋರಿಸಿದ್ದ. ಕೋವಿಡ್ ಕಾರಣದಿಂದ ಲಾಭಾಂಶ ವಿಳಂಬವಾಗಿದ್ದು ಮುಂದಿನ ಎರಡು ತಿಂಗಳಲ್ಲಿ ಅಪ್‌ಡೇಟ್ ಆಗುತ್ತದೆ ಎಂದು ನಂಬಿಸಿದ್ದ. ಬಳಿಕ ಮತ್ತೆ ಕರೆ ಮಾಡಿ ಲಾಭಾಂಶದ ಬಗ್ಗೆ ನಂಬಿಸಿದ್ದ ಎನ್ನಲಾಗಿದೆ.

ಜಾಸ್ಮಿನ್ ಹಂಝ ಎಂಬವರ ಹೆಸರು ಸೂಚಿಸಿ ಅವರ ಮೂಲಕ ದೂರುದಾರರಿಂದ 7 ಲ.ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದ. ದೂರುದಾರರು ತನ್ನ ಸ್ನೇಹಿತರಿಂದ ಸಂಗ್ರಹಿಸಿ ಆರೋಪಿಗಳಿಗೆ 3 ಕೋ.ರೂ. ನೀಡಿದ್ದು, ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಆರೋಪಿಸಲಾಗಿದೆ.

2022ರಲ್ಲಿ ಬೆಂಗಳೂರಿನಲ್ಲಿ ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಮುಹಮ್ಮದ್ ಶಫದ್ ಮತ್ತು ಮುಹಮ್ಮದ್ ಅಫೀದ್ ಭಾಗಿಯಾಗಿರುವ ಮಾಹಿತಿ ತನಗೆ ಸಿಕ್ಕಿದ್ದು, ಆ ಹಿನ್ನೆಲೆಯಲ್ಲಿ ಆರೋಪಿಗಳಾದ ಮುಹಮ್ಮದ್ ಶಫದ್ ಸಿ.ಕೆ, ಮುಹಮ್ಮದ್ ಅಫೀದ್ ಸಿ.ಕೆ., ಸಾದಿಕ್, ಜಾಸ್ಮಿನ್, ಮುಹಮ್ಮದ್ ಬಶೀರ್ ವಿರುದ್ಧ ನೀಡಿದ್ದ ದೂರಿನಂತೆ ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮತ ಒಡೆಯುವುದಕ್ಕಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಸ್‌ಡಿಪಿಐ: ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆ

Similar News