4 ತಂಡಗಳಲ್ಲಿ 'ವಿಜಯ ಸಂಕಲ್ಪ' ಯಾತ್ರೆ: ನಳಿನ್‍ಕುಮಾರ್ ಕಟೀಲ್

Update: 2023-02-04 14:08 GMT

ಬೆಂಗಳೂರು, ಫೆ. 4: ಮುಂಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಿಂದ ಜಿಲ್ಲಾ ಸಮಾವೇಶಗಳು, ನಾಲ್ಕು ತಂಡಗಳಲ್ಲಿ ‘ವಿಜಯ ಸಂಕಲ್ಪ ಯಾತ್ರೆ’ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.

ಶನಿವಾರ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಷ ಮುಂದಿನ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಶಾಸಕರ ಸ್ಥಾನ ಗೆದ್ದು ಮತ್ತೊಮ್ಮೆ ಸರಕಾರ ರಚಿಸಲಿದೆ. ಬೂತ್ ಬೂತ್, ಗ್ರಾಮಗಳಲ್ಲಿರುವ ಫಲಾನುಭವಿಯ ಮನಸ್ಸಿನಲ್ಲಿ ಬಿಜೆಪಿ ಪರ ಅಲೆ ಇದೆ. ವಾತಾವರಣವೂ ನಮ್ಮ ಪರ ಇದೆ. ಬೂತ್ ವಿಜಯ, ಬೂತ್ ಸಂಕಲ್ಪ ಅಭಿಯಾನ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ರಾಜ್ಯದ ಡಬಲ್ ಎಂಜಿನ್ ಸರಕಾರ ಅದ್ಭುತವಾಗಿ ಕೆಲಸ ನಿರ್ವಹಿಸುತ್ತಿದೆ. ಒಬ್ಬೊಬ್ಬ ಶಾಸಕರ ಕ್ಷೇತ್ರಕ್ಕೆ ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಬಂದಿದೆ. ಕೇಂದ್ರ-ರಾಜ್ಯ ಸರಕಾರಗಳು ಅತ್ಯಂತ ಸಮರ್ಥವಾಗಿ ಕಾರ್ಯ ಮಾಡುತ್ತಿವೆ. ಕಾಂಗ್ರೆಸ್ ಪಕ್ಷವು ಬಸ್ ಯಾತ್ರೆ ಜೊತೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಟ ಮುಂದುವರಿಸಿದೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿ ಒಬ್ಬರಿಗೆ ಕ್ಷೇತ್ರ ಹುಡುಕಾಡಿ ಮುಗಿದಿಲ್ಲ ಎಂದು ಕಟೀಲ್ ಲೇವಡಿ ಮಾಡಿದರು.

ಡಾ.ಪರಮೇಶ್ವರ್, ಮುನಿಯಪ್ಪರ ಹೋರಾಟದಿಂದ ಕಾಂಗ್ರೆಸ್ ಬಸ್ ಪಂಕ್ಚರ್ ಆಗುತ್ತಿದೆ. ಕಾಂಗ್ರೆಸ್ ಕಾಳಗ ಬೀದಿಕಾಳಗವಾಗಿದೆ. ಜೆಡಿಎಸ್ ಪಂಚರತ್ನ ಯಾತ್ರೆ ಬಿಜಾಪುರ ತಲುಪುವಾಗ ಹಾಸನದಲ್ಲಿ ಮನೆಯೊಳಗೆ ಜಗಳ ಆರಂಭವಾಗಿದೆ. ಆದುದರಿಂದ ಬಿಜೆಪಿ ಜನರ ವಿಶ್ವಾಸದ ಪಕ್ಷವಾಗಿ ಕಾಣುತ್ತಿದೆ ಎಂದು ಅವರು ನುಡಿದರು.

ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಮೂರ್ನಾಲ್ಕು ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಇದು ಅತ್ಯಂತ ಮಹತ್ವದ ಸಭೆ. ಪಕ್ಷದ ಸಿದ್ಧತೆ, ಜನರ ಒಲವು, ಹಿರಿಯರ ವಿಶ್ಲೇಷಣೆ ಗಮನಿಸಿದರೆ ಬಿಜೆಪಿ ಮತ್ತೆ ಅಧಿಕಾರ ಪಡೆಯುವುದು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಬಜೆಟ್‍ನಲ್ಲಿ ನಿರೀಕ್ಷೆಗೂ ಮೀರಿ ಸವಲತ್ತು: ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಮುಖಂಡ ಯಾರು ರಾಹುಲ್ ಗಾಂಧಿಯೇ? ವಿಶ್ವವೇ ಮೆಚ್ಚಿದ ಮಹಾನ್ ನಾಯಕ ಪ್ರಧಾನಿ ಮೋದಿಜಿ, ಅಮಿತ್ ಶಾ ನಮ್ಮ ಜೊತೆ ಇರಬೇಕಾದರೆ ಬರುವಂಥ ಕರ್ನಾಟಕ ಸೇರಿ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕದ ಯಾವುದಾದರೂ ಮನೆಗೆ ಹೋಗಿ ಸರಕಾರದ ಸವಲತ್ತು ಸಿಗದ ಒಂದು ಮನೆ ಇದ್ದರೆ ತಿಳಿಸಿ ಎಂದು ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಚಿಸಿದ ಅವರು, ಸರ್ವರಿಗೂ ಸಮಬಾಳು, ಸಮಪಾಲು ಚಿಂತನೆಯಡಿ ಅನೇಕ ಸವಲತ್ತುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಟ್ಟಿವೆ. ಕರ್ನಾಟಕದ ಬಜೆಟ್ ಸಂದರ್ಭದಲ್ಲೂ ನಿರೀಕ್ಷೆಗೆ ಮೀರಿ ಸವಲತ್ತುಗಳನ್ನು ಕೊಡಲಿದ್ದೇವೆ ಎಂದು ಪ್ರಕಟಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋμï, ಸಹ ಉಸ್ತುವಾರಿ ಡಿ.ಕೆ. ಅರುಣಾ, ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್, ಡಿ.ವಿ.ಸದಾನಂದ ಗೌಡ ಸೇರಿದಂತೆ ಭಾಗವಹಿಸಿದ್ದರು.

‘ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ನಾವು ಒಗ್ಗಟ್ಟಿನಿಂದ ಇದ್ದೇವೆ. ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ, ನಾನು ಮತ್ತು ಅರುಣ್ ಸಿಂಗ್ 3 ತಂಡಗಳಲ್ಲಿ ಯಾತ್ರೆ ಮಾಡಲಿದ್ದೇವೆ. ರಾಜ್ಯದಲ್ಲಿ ಎಪ್ರಿಲ್ 10 ಅಥವಾ 12ರ ಮೊದಲು ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಬಿಜೆಪಿ 130ರಿಂದ 140 ಸ್ಥಾನಗಳನ್ನು ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಲಿದೆ’

-ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

Similar News