ರಾಜಕೀಯ ಪಕ್ಷಗಳು ಜನರಿಗೆ ಸಿಗುವ ಹಾಗೆ ಆಡಿಟ್ ವರದಿ ಪ್ರಕಟಿಸಲಿ: ನ್ಯಾ. ನಾಗಮೋಹನ್ ದಾಸ್

Update: 2023-02-04 17:09 GMT

ಬೆಂಗಳೂರು, ಫೆ.4: ರಾಜಕೀಯ ಪಕ್ಷಗಳ ಆದಾಯ, ಖರ್ಚು ಸೇರಿದಂತೆ ಇತರೆ ಹಣಕಾಸಿನ ವ್ಯವಹಾರವನ್ನು ಆಡಿಟಿಂಗ್ ಮಾಡಿ, ವರದಿಯನ್ನು ಜನರಿಗೆ ಸಿಗುವಂತೆ ಪ್ರಕಟಿಸಬೇಕು ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹಾನ್ ದಾಸ್ ತಿಳಿಸಿದ್ದಾರೆ.

ಶನಿವಾರ ನಗರದ ಇನ್‍ಫ್ರೆಂಟ್ರಿ ರಸ್ತೆಯಲ್ಲಿರುವ ಕೆಎಎಸ್ ಅಧಿಕಾರಿಗಳ ಅಸೋಸಿಯೇಷನ್ ಸಭಾಂಗಣದಲ್ಲಿ ಫೋರಂ ಫಾರ್ ಡೆಮೊಕ್ರಾಸಿ ಅಂಡ್ ಕಮ್ಯುನಿಯಲ್ ಅಮಿಟಿ ವತಿಯಿಂದ ಆಯೋಜಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಗೆ ಬಂದ ಉಡುಗೊರೆಗಳು, ದೇಣಿಗೆಗಳು ಹಾಗೂ ರಾಜಕೀಯ ಪಕ್ಷಗಳ ಇತರೆ ಹಣಕಾಸಿನ ವ್ಯವಹಾರವನ್ನು ಪ್ರಕಟಿಸಬೇಕು ಎಂದು ಹೇಳಿದರು.

ಚುನಾವಣೆಯಲ್ಲಿ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ಚುನಾವಣೆಯಲ್ಲಿ ನಿಲ್ಲದಂತೆ ತಡೆಯಬೇಕು. ಮಾಧ್ಯಮಗಳು ಹಣಕ್ಕಾಗಿ ಕೆಲಸ ಮಾಡದೆ ಜನರ ಒಳಿತಿಗಾಗಿ ಕೆಲಸವನ್ನು ಮಾಡಬೇಕು. ನ್ಯಾಯಾಂಗವೂ ಸಮರ್ಪಕವಾಗಿ ಕೆಲಸವನ್ನು ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಸರಕಾರವು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದೆ. ಆದರೆ ಪಕ್ಷಗಳು ಆಪರೇಷನ್ ಮೊರೆ ಹೋಗುತ್ತಿವೆ. ಎಲ್ಲ ಪಕ್ಷಗಳು ಅಪರೇಷನ್ ಮಾಡುತ್ತವೆ. ಆದರೆ ಬಿಜೆಪಿ ಹೆಚ್ಚು ಅಪರೇಷನ್ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಏಳು ದಶಕಗಳ ಕಾಲ ನಾವು ರಾಜಕೀಯ ಪ್ರಜಾಪ್ರಭುತ್ವದ ಬಗ್ಗೆ ಚರ್ಚಿಸುತ್ತಿದ್ದೇವೆ. ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡಲಿಲ್ಲ. ಹಾಗಾಗಿ ಇಂದು ಸಮಸ್ಯೆಗಳು ಸೃಷ್ಟಿಯಾಗಿವೆ. ಸಂಸದೀಯ ಪ್ರಜಾಪ್ರಭುತ್ವಕ್ಕೆ ಪರ್ಯಾಯ ಇಲ್ಲ. ಆದರೆ ಸಂಸದೀಯ ಪ್ರಜಾಪ್ರಭುತ್ವವು ದುರ್ಬಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ತಜ್ಞ, ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ನಮ್ಮ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಆರೋಪಿಗಳು ಇದ್ದಾರೆ. ಕಾನೂನುಗಳನ್ನು ಉಲ್ಲಂಘಿಸಿದರೆ ಇಂದು ಕಾನೂನುಗಳನ್ನು ರೂಪಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಚುನಾವಣಾ ಆಯೋಗವು ಸರಿಯಾಗಿ ಕೆಲಸವನ್ನು ನಿರ್ವಹಿಸುತ್ತಿಲ್ಲ. ಅದು ಆಳುವ ವರ್ಗಕ್ಕೆ ಸಹಕಾರ ನೀಡುತ್ತಿದೆ. ಆಡಳಿತ ವರ್ಗಕ್ಕೆ ಅನುಕೂಲವಾಗುವಂತೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸುತ್ತಿದೆ. ಜಾರಿ ನಿರ್ದೇಶನಾಲಯ ಸೇರಿದಂತೆ ಪೋಲೀಸರೂ ಆಳುವ ವರ್ಗದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆಳುವ ವರ್ಗವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜಮಾತೆ-ಇಸ್ಲಾಮಿ ಹಿಂದ್‍ನ ರಾಜ್ಯಾಧ್ಯಕ್ಷ ಡಾ.ಮೊಹಮ್ಮದ್ ಸಾದ್ ಬೆಳಗಾಮಿ ಮಾತನಾಡಿ, ನಮ್ಮ ದೇಶವು ಬಹುತ್ವ ಸಮಾಜವಾಗಿದೆ. ವಿವಿಧ ಭಾಷೆ, ಜನಾಂಗ, ಧರ್ಮ, ಸಂಸ್ಕೃತಿ ದೇಶದಲ್ಲಿ ಇದೆ. ಇದಕ್ಕೆ ಹೊಂದುಕೊಂಡಂತೆ ಸಂವಿಧಾನವನ್ನು ರಚನೆ ಮಾಡಲಾಗಿದೆ. ಆದರೆ ಶೇ.20ರಷ್ಟಿರುವ ಮುಸ್ಲಿಮರ ಮೇಲೆ ದ್ವೇಷವನ್ನು ಹಬ್ಬಿಸಲಾಗುತ್ತಿದೆ. ಇಂದು ರಾಜ್ಯದಲ್ಲಿ ಹಿಜಾಬ್, ಹಲಾಲ್ ಮುಂತಾದ ವಿಷಯಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪಿಯುಸಿಎಲ್‍ನ ಅರವಿಂದ್ ನಾರಾಯಣ್, ಎ.ಆರ್.ವಾಸವಿ, ಎಂ.ಎಫ್.ಪಾಷಾ, ಎಂ.ಜಿ.ದೇಶಸಹಾಯಂ ಮತ್ತಿತರರು ಉಪಸ್ಥಿತರಿದ್ದರು.

Similar News