ಭೂತದ ಬಾಯಲ್ಲಿ ಭಗವದ್ಗೀತೆ ಚೆನ್ನಾಗಿರಲ್ಲ: ಶಾಸಕ ಝಮೀರ್ ವಿರುದ್ಧ ಕಿಡಿಕಾರಿದ ಜೆಡಿಎಸ್

Update: 2023-02-05 10:33 GMT

ಬೆಂಗಳೂರು, ಫೆ.5: "ನಿಮಗೆ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ರಾಜಕಾರಣಕ್ಕಾಗಿ ನೀವು ಆ ಸಮುದಾಯವನ್ನು ಹೇಗೆ ನಡೆಸಿಕೊಂಡಿದ್ದಿರಿ? ಭೂತದ ಬಾಯಲ್ಲಿ ಭಗವದ್ಗೀತೆ ಚೆನ್ನಾಗಿರಲ್ಲ" ಎಂದು ಶಾಸಕ, ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ಧ ಜೆಡಿಎಸ್ ಕಿಡಿಕಾರಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಅರಮನೆಯಂಥ ವಿಲಾಸಿ ಭವನದಲ್ಲಿ ಐಷಾರಾಮಿ ಜೀವನ ನಡೆಸುವ ನಿಮಗೆ, ನಿಮ್ಮದೇ ಕ್ಷೇತ್ರದ ಗೌರಿಪಾಳ್ಯ, ಪಾದರಾಯನಪುರದ ಬಡ ಮುಸ್ಲಿಂ ಬಂಧುಗಳು ಎಂಥ ಕಷ್ಟದ ಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಗೊತ್ತಾ? ಕಾಮಾಲೆ ಕಣ್ಣಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಹಾಕುವ ನಿಮಗೆ ಮುಸ್ಲಿಮರ ನೈಜಸ್ಥಿತಿಯ ಬಗ್ಗೆ ಅರಿವಿದೆಯೇ ಎಂದು ಪ್ರಶ್ನಿಸಿದೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ ನಿಮಗೆ ರಾಜಕೀಯ ಜನ್ಮ ಕೊಟ್ಟಿದು ಇದೇ ಕುಮಾರಸ್ವಾಮಿ. ವಿಧಾನ ಸಭೆಯ ಮಾರ್ಷಲ್ ಗಳು ಕುತ್ತಿಗೆಪಟ್ಟಿ ಹಿಡಿದು ಹೊರದಬ್ಬಿದಾಗ ಕುಮಾರಸ್ವಾಮಿ ನಿಮ್ಮ ಸಹಾಯಕ್ಕೆ ಬಂದಿದ್ದು ಕುಮಾರಸ್ವಾಮಿ. ಅಂದು ಶಪಥಗೈದಂತೆ ಕುಮಾರಸ್ವಾಮಿ ನಿಮ್ಮನ್ನು ಶಾಸಕರನ್ನಾಗಿ ಮಾಡಿದ್ದರು. ಇದೆಲ್ಲ ನೆನಪಿಲ್ಲವೇ? ನಿಯತ್ತಿಲ್ಲದ ನಿಮಗೆ ಇದೆಲ್ಲಾ ಅರ್ಥವಾದೀತೆ ಎಂದು ಜೆಡಿಎಸ್ ಕುಟುಕಿದೆ.

ಉಂಡ ಮನೆಯಗಳ ಇರಿಯುವ ನಿಮಗೆ, ಸಿ.ಎಂ.ಇಬ್ರಾಹಿಂ ರಾಜಕೀಯ ಹಿತದ ಬಗ್ಗೆ ಈಗ ನೆನಪು ಬಂತಾ? ಹಿಂದೆ, ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಿ.ಎಂ.ಇಬ್ರಾಹಿಂರನ್ನು ಯಾಕೆ ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ? ಅದು ಬಿಡಿ, ಪ್ರತಿಪಕ್ಷ ನಾಯಕರನ್ನಾಗಿ ಮಾಡುವ ಅವಕಾಶ ಇದ್ದರೂ ಯಾಕೆ ಮಾಡಲಿಲ್ಲ ಎಂದು ಜೆಡಿಎಸ್ ಪ್ರಶ್ನಿಸಿದೆ.

ಇಬ್ರಾಹಿಂ ಅವರನ್ನು ಕಾಂಗ್ರೆಸ್ ನಲ್ಲಿ ಮುಗಿಸಲು ಷಡ್ಯಂತ್ರ ರೂಪಿಸಿದಂತೆ, ಈಗ ಅವರ ಮಗನ ವಿಷಯದಲ್ಲೂ ದುಷ್ಟತಂತ್ರ ಹೂಡಲು ಹೊರಟಿದ್ದೀರಿ ಎಂದು ಝಮೀರ್ ವಿರುದ್ಧ ಆರೋಪ ಹೊರಿಸಿದ ಜೆಡಿಎಸ್.   ಮುಸ್ಲಿಂ ಸಮುದಾಯಕ್ಕೆ ನಿಮಗಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ. ಸಮುದಾಯಕ್ಕೆ ಈ ಸತ್ಯ ಅರ್ಥವಾಗಿದೆ ಎಂದು ಹೇಳಿದೆ.

Similar News