ಫೆ.7ಕ್ಕೆ ‘ನಮ್ಮ ಕ್ಲಿನಿಕ್’ಗೆ ಸಿಎಂ ಚಾಲನೆ: ಸಚಿವ ಡಾ.ಸುಧಾಕರ್

Update: 2023-02-05 13:11 GMT

ಬೆಂಗಳೂರು, ಫೆ, 5: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 108 ‘ನಮ್ಮ ಕ್ಲಿನಿಕ್’ಗಳಿಗೆ ಫೆ.7ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಮಹಾಲಕ್ಷ್ಮಿ ಬಡಾವಣೆಯ ಮಹಾಲಕ್ಷ್ಮಿ ಪುರ ವಾರ್ಡ್‍ನಲ್ಲಿ ನೂತನವಾಗಿ ನಿರ್ಮಿಸಿರುವ ನಮ್ಮ ಕ್ಲಿನಿಕ್ ಉದ್ಘಾಟಿಸುತ್ತಿದ್ದು, ಇದೇ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಉಳಿದ 107 ಕ್ಲಿನಿಕ್‍ಗಳನ್ನು ಪ್ರಾರಂಭ ಮಾಡಲಿದ್ದು, ಈ ಆರೋಗ್ಯ ಕೇಂದ್ರಗಳು ಜನಸೇವೆಗಾಗಿ ಸಮರ್ಪಿಸಿಕೊಳ್ಳಲಿವೆ ಎಂದು ಹೇಳಿದರು.  

ಡಿಸೆಂಬರ್ 12ರಂದು ಮುಖ್ಯಮಂತ್ರಿ ಧಾರವಾಡದ ಬೈರದೇವರ ಕೊಪ್ಪದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸುವ ಮೂಲಕ ರಾಜ್ಯದಲ್ಲಿ ಏಕಕಾಲಕ್ಕೆ ಇತರೆ ಜಿಲ್ಲೆಗಳ 100 ನಮ್ಮ ಕ್ಲಿನಿಕ್‍ಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದ್ದರು. ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.

ನಮ್ಮ ಕ್ಲಿನಿಕ್‍ಗಳು ಬೆಳಗ್ಗೆ 9ರಿಂದ ಸಂಜೆ 4.30ರ ವರೆಗೆ ಸೋಮವಾರದಿಂದ ಶನಿವಾರದ ವರೆಗೆ ಕಾರ್ಯನಿರ್ವಹಿಸಲಿವೆ. 1ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ತಪಾಸಣೆ ಕೊಠಡಿ, ಚುಚ್ಚುಮದ್ದು ನೀಡುವ ಕೊಠಡಿ, ಪ್ರಯೋಗಶಾಲೆ, ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ, ಆಡಳಿತ ಕಚೇರಿ ಹೀಗೆ ಪ್ರತ್ಯೇಕ ಕೊಠಡಿಗಳಿದ್ದು ಆಸ್ಪತ್ರೆ ಸಿಬ್ಬಂದಿ, ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

Similar News