ಸಾಹಿತಿ ಭೈರಪ್ಪ ಒಕ್ಕಲಿಗರು-ಮುಸ್ಲಿಮರ ನಡುವೆ ಬೆಂಕಿ ಹಚ್ಚುತ್ತಾನೆ: ಸಾಹಿತಿ ಎಲ್.ಎನ್.ಮುಕುಂದರಾಜ್

Update: 2023-02-05 15:52 GMT

ಬೆಂಗಳೂರು, ಫೆ.5: ಸಾಹಿತಿ ಎಸ್.ಎಲ್.ಭೈರಪ್ಪ ತನ್ನ ಕಾದಂಬರಿಗಳ ಮೂಲಕ ಸುಳ್ಳು ಕತೆಗಳನ್ನು ಕಟ್ಟಿ ಒಕ್ಕಲಿಗರು, ಮುಸ್ಲಿಮರ ನಡುವೆ ದ್ವೇಷ, ಬೆಂಕಿ ಹಚ್ಚುವ ಕೆಲಸ ಉದ್ದೇಶ ಪೂರಕವಾಗಿ ಮಾಡಿದ್ದಾನೆ ಎಂದು ಲೇಖಕ ಎಲ್.ಎನ್.ಮುಕುಂದರಾಜ್ ಟೀಕಿಸಿದ್ದಾರೆ. 

ರವಿವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ನಮ್ಮ ಧ್ವನಿ ಬಳಗವೂ ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ನೆನಪಿನಲ್ಲಿ ಆಯೋಜಿಸಿದ್ದ ಪ್ರಬುದ್ಧ ಭಾರತ ಕಾರ್ಯಕ್ರಮದಲ್ಲಿ ‘ದೇಶದ ಜ್ವಲಂತ ಸಮಸ್ಯೆಗಳು’ ವಿಷಯ ಕುರಿತು ಅವರು ಮಾತನಾಡಿದರು.

ಎಸ್.ಎಲ್.ಭೈರಪ್ಪ ಅವರ ‘ಆವರಣ’ ಎಂಬ ಕಾದಂಬರಿಯಲ್ಲಿ ಒಕ್ಕಲಿಗ ಅದರಲ್ಲೂ ಗಾಂಧಿವಾದಿ ಆಗಿದ್ದ ನರಸಿಂಹಗೌಡರ ಮಗಳು ಲಕ್ಷ್ಮೀ ಎಂಬಾಕೆಯನ್ನು ಯಾರೂ ಮುಹಮ್ಮದ್ ಎನ್ನುವ ಸಾಬರು ಪ್ರೀತಿಸಿ, ಮದುವೆಯಾದರು. ಆನಂತರ, ಆಕೆ ಸಾಬರ ಜೀವನಶೈಲಿ ನೋಡಿ ತಳಲಾರದೆ, ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸು ಬಂದುಬಿಟ್ಟಳು ಎಂದು ಉಲ್ಲೇಖಿಸಿದ್ದಾರೆ. ಆದರೆ, ಇದರ ಪೂರ್ಣ ಉದ್ದೇಶ ಒಕ್ಕಲಿಗರು ಮತ್ತು ಮುಸ್ಲಿಮರ ನಡುವೆ ಜಗಳ ನಡೆಸುವುದೇ ಆಗಿದೆ ಎಂದು ಆರೋಪಿಸಿದರು.

ನಾನು ಈ ಕಾದಂಬರಿ ಬಿಡುಗಡೆ ಆದ ದಿನದಿಂದಲೂ ಅಜ್ಜ(ಭೈರಪ್ಪ)ನನ್ನು ಗಾಂಧಿವಾದಿ ನರಸಿಂಹಗೌಡ ಎಲ್ಲಿದ್ದ. ಆತನ ಹಿನ್ನೆಲೆ, ಸ್ಥಳ, ಗುರುತು ನೀಡುವಂತೆ ಪ್ರಶ್ನೆ ಮಾಡುತ್ತಲೇ ಬಂದಿದ್ದೇನೆ.ಆದರೆ, ಆತ ಇದುವರೆಗೂ ತುಟಿ ಬಿಚ್ಚಲಿಲ್ಲ ಎಂದ ಅವರು, ಕೇಳಿ ಕೇಳಿ ಹೀಗೆ ಪದ್ಮಶ್ರೀ ಪ್ರಶಸ್ತಿ ಬಂದಿತೂ, ಅದೇ ರೀತಿ, ಕೋಮುವಾದ ಕಾಯಿಲೆಯೂ ಎಸ್.ಎಲ್.ಭೈರಪ್ಪನಿಗೆ ಲಭಿಸಿದೆ ಎಂದು ವಾಗ್ದಾಳಿ ನಡೆಸಿದರು.

ಭಾರತದಲ್ಲಿ ಕಳೆದ 800 ವರ್ಷಗಳಿಂದಲೂ ಮುಸ್ಲಿಮರ ಜನಸಂಖ್ಯೆ ಅಧಿಕಗೊಂಡಿಲ್ಲ. ಇದನ್ನು ದತ್ತಾಂಶ, ಇತಿಹಾಸದಲ್ಲಿ ಕಾಣಬಹುದಾಗಿದೆ. ಆದರೆ, ಬಿಜೆಪಿಯವರು ಮುಂದಿನ 20 ವರ್ಷಗಳಲ್ಲಿ ಮುಸ್ಲಿಮರು ಹೆಚ್ಚಾಗುತ್ತಾರೆ ಎಂದು ನಂಬಿಸುತ್ತಿದ್ದಾರೆ. ಇಂತಹ ಅನೇಕ ಸುಳ್ಳು, ದ್ವೇಷದ  ಮಾತುಗಳ ವಿರುದ್ಧ ಒಗ್ಗೂಡಿ ಧ್ವನಿಗೂಡಿಸಬೇಕು.ಆಗ ಮಾತ್ರ ನಾವು ಅವರಿಗೆ ಉತ್ತರಿಸಲು ಸಾಧ್ಯ ಎಂದು ಅವರು ನುಡಿದರು.

Similar News