ಉಳುವವನಲ್ಲ, ಉಳ್ಳವನೇ ಭೂಮಿಯ ಒಡೆಯ ಎಂಬ ಸ್ಥಿತಿ ನಿರ್ಮಾಣ ಆಗಿದೆ: ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬೆಳ್ಳಾರೆಯಲ್ಲಿ 'ಕರಾವಳಿ ಪ್ರಜಾಧ್ವನಿ ಯಾತ್ರೆ'

Update: 2023-02-05 16:04 GMT

ಬೆಳ್ಳಾರೆ: 'ಮುಂಬರುವ ವಿಧಾನ ಸಭೆ ಚುನಾವಣೆ ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಮುನ್ನುಡಿ ಬರೆಯಬೇಕಾದ ಚುನಾವಣೆ. ಆದುದರಿಂದ ಜನರು ಜಾಗೃತರಾಗಿ ಮತದಾನ ಮಾಡಬೇಕು' ಎಂದು ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಬೆಳ್ಳಾರೆಯಲ್ಲಿ ನಡೆದ ಕಾಂಗ್ರೆಸ್ 'ಕರಾವಳಿ ಪ್ರಜಾಧ್ವನಿ ಯಾತ್ರೆ'ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

'ಧರ್ಮದ ಹೆಸರಲ್ಲಿ ರಾಜಕೀಯ, ಧರ್ಮದ ಹೆಸರಿನಲ್ಲಿ ಕೊಲೆ ನಡೆಯುವ ಕಾರಣ ಕರಾವಳಿ ಜಿಲ್ಲೆಗಳ ಹೆಸರು ಹಾಳಾಗುತ್ತಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಈ ರೀತಿಯ ಧರ್ಮದ ಹೆಸರಿನ ರಾಜಕೀಯ ಜನರಿಗೆ ಬೇಕಾಗಿಲ್ಲ. ಒಳ್ಳೆಯ ಅಭಿವೃದ್ಧಿಯ, ಶಾಂತಿಯ ಸಮಾಜ ಬೇಕು. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಂತಾಗಬೇಕು. ಅದಕ್ಕಾಗಿ ಚುನಾವಣಾ ಸಂದರ್ಭದಲ್ಲಿ ಜಾಗೃತರಾಗಿ ಮತದಾನ ಮಾಡಬೇಕು' ಎಂದು ಅವರು ಕರೆ ನೀಡಿದರು.

'ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉಳುವವನೇ ಭೂಮಿಯ ಒಡೆಯ ಎಂದು ಕಾನೂನು ತಂದು ಜನರಿಗೆ ಭೂಮಿ ಹಂಚಿತ್ತು. ಆದರೆ ಈಗ ಉಳ್ಳವನೇ ಭೂಮಿಯ ಒಡೆಯ ಎಂಬ ಸ್ಥಿತಿ ನಿರ್ಮಾಣ ಆಗಿದೆ. ಕಾಂಗ್ರೆಸ್ ನರೇಗಾ ಯೋಜನೆ ಜಾರಿಗೆ ತಂದು ಜನ ಸಾಮಾನ್ಯನಿಗೆ ಉದ್ಯೋಗ ನೀಡಿತ್ತು. ಕೊರೋನಾದಂತಹಾ ಸಂಕಷ್ಟ ಕಾಲದಲ್ಲಿ ನರೇಗಾ ಜನರ ಕೈ ಹಿಡಿದಿತ್ತು. ಆದರೆ ಬಿಜೆಪಿ ಸರಕಾರ ನರೇಗಾ ಯೋಜನೆಯ ಕತ್ತು ಹಿಸುಕಿದೆ. ಈ ಬಾರಿಯ ಬಜೆಟ್‍ನಲ್ಲಿ ಶೇ.33ಹಣ ಕಡಿತ ಮಾಡಿದೆ' ಎಂದು ಅವರು ಹೇಳಿದರು. 

ಹಿರಿಯ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ, ಗೃಹ ಲಕ್ಷ್ಮಿ ಯೋಜನೆಯಡಿ ಮನೆ ಒಡತಿಯ ಖಾತೆಗೆ 2000 ರೂ ನೀಡುತ್ತೇವೆ. ಇದು ಕಾಂಗ್ರೆಸ್ ಜನತೆಗೆ ನೀಡುವ ಗ್ಯಾರಂಟಿ. ಈ ಕುರಿತು ಮನೆ ಮನೆಗೆ ಹೋಗಿ ಜನರಿಗೆ ಮಾಹಿತಿ ಕೊಡಬೇಕು.ಕಾಂಗ್ರೆಸ್ ಪ್ರಣಾಳಿಕೆ ಪ್ರತಿ ಮನೆ ಮಾತಾಗಬೇಕು ಎಂದರು. ಬೆಲೆ ಏರಿಕೆ, ನಿರುದ್ಯೋಗ ಸೃಷ್ಠಿ ಬಿಜೆಪಿ ಸರಕಾರದ ಕೊಡುಗೆ ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮಾತನಾಡಿ,  ಚುನಾವಣೆ ಯಾವಾಗ ನಡೆದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸುಳ್ಯದಲ್ಲಿಯೂ ಈ ಬಾರಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗುವುದು ಗ್ಯಾರಂಟಿ ಅಭಿವೃದ್ಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್‍ನಿಂದ ಮಾತ್ರ ರಾಜ್ಯದ, ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.

ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಾತನಾಡಿದರು. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮುಖಂಡರಾದ ಮಧು ಬಂಗಾರಪ್ಪ, ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಪಿ.ವಿ.ಮೋಹನ್, ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ತಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕೆಪಿಸಿಸಿ ಸಂಯೋಜಕರಾದ ಎಚ್.ಎಂ.ನಂದಕುಮಾರ್, ಜಿ.ಕೃಷ್ಣಪ್ಪ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‍ಕುಮಾರ್ ಶೆಟ್ಟಿ, ಮುಖಂಡರಾದ ಡಾ.ಬಿ.ರಘು, ಸತೀಶ್ ಕೆಡೆಂಜಿ, ಕವಿತಾ ಸನಿಲ್, ಶಾಹುಲ್ ಹಮೀದ್, ಕಾವು ಹೇಮನಾಥ ಶೆಟ್ಟಿ, ಎಸ್.ಸಂಶುದ್ದೀನ್, ಎಂ. ಎಸ್.ಮಹಮ್ಮದ್, ಗೀತಾ ಕೋಲ್ಚಾರ್, ಪ್ರವೀಣಾ ಮರುವಂಜ, ಇಸ್ಮಾಯಿಲ್ ಪಡ್ಪಿನಂಗಡಿ, ರಾಜೀವಿ ಆರ್ ರೈ, ಲೀಲಾ ಮನಮೋಹನ್, ಪ್ರದೀಪ್ ಕುಮಾರ್ ರೈ ಪಾಂಬಾರು, ಶೀನಪ್ಪ ಗೌಡ, ಹಾಜಿರಾ ಅಬ್ದುಲ್ ಗಫೂರ್, ಲುಕ್ಮಾನ್ ಬಂಟ್ವಾಳ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಸ್ವಾಗತಿಸಿ, ಅಬ್ದುಲ್ ಗಫೂರ್ ಕಲ್ಮಡ್ಕ ವಂದಿಸಿದರು. ಅಶೋಕ್ ಚೂಂತಾರು ಹಾಗು ಸಚಿನ್‍ರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Similar News