ವಿದ್ಯುತ್ ಸರಬರಾಜು ಕಂಪೆನಿಗಳ ಖಾಸಗೀಕರಣ ಇಲ್ಲ: ಇಂಧನ ಸಚಿವ ಆರ್.ಕೆ.ಸಿಂಗ್

Update: 2023-02-05 16:02 GMT

ಬೆಂಗಳೂರು, ಫೆ. 5: ಸರಕಾರ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪೆನಿಗಳನ್ನು ಖಾಸಗೀಕರಣಗೊಳಿಸಬೇಕೆನ್ನುವುದು ನಮ್ಮ ಉದ್ದೇಶವಲ್ಲ. ಆದರೆ ಅವುಗಳ ನಡುವೆ ಸ್ಪರ್ಧಾತ್ಮಕತೆ ತರುವುದರಿಂದ ಬೇರೆ ಕಂಪೆನಿಗಳೂ ವಿದ್ಯುತ್ ವಿತರಣೆ ಮಾಡಲು ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ ಎಂದು ಕೇಂದ್ರ ಇಂಧನ, ನವೀನ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಜಿ20 ರಾಷ್ಟ್ರಗಳ ಮೊದಲ ಎನರ್ಜಿ ಟ್ರಾನ್ಸಿಶನ್ಸ್ ವರ್ಕಿಂಗ್ ಗ್ರೂಪ್ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ಸರಬರಾಜು ಕಂಪೆನಿಗಳ ನಡುವೆ ಸ್ಪರ್ಧೆ ಏರ್ಪಟ್ಟರೆ ಇಂಧನ ಉಳಿತಾಯದ ಜತೆಗೆ ಗ್ರಾಹಕರಿಗೆ ಕೈಗೆಟುಕುವ ದರಕ್ಕೆ ಇಂಧನ ದೊರೆಯುತ್ತದೆ. ಯಾವುದಾದರೂ ವಿದ್ಯುತ್ ಸರಬರಾಜು ಕಂಪೆನಿ ಸರಿಯಾಗಿ ಸೇವೆ ನೀಡದಿದ್ದರೆ, ಗ್ರಾಹಕರು ಮೊಬೈಲ್ ನೆಟ್‍ವರ್ಕ್ ಸೇವೆಯ ರೀತಿ ವಿದ್ಯುತ್ ಸರಬರಾಜು ಕಂಪೆನಿಯನ್ನು ಬದಲಾಯಸಿಕೊಳ್ಳಬಹುದು ಎಂದು ತಿಳಿಸಿದರು.

ವಿದ್ಯುತ್ ಕ್ಷೇತ್ರದಲ್ಲಿ ಸ್ಪರ್ಧೆ ಇರಬೇಕು. ಗ್ರಿಡ್‍ಗಳು ಸರಕಾರದ ಬಳಿಯೇ ಇರುತ್ತವೆ. ಕೇಂದ್ರ ಸರಕಾರವು ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕಾನೂನಿಗೆ ತಿದ್ದುಪಡಿ ತರಲು ಬಯಸಿದೆ. ಈ  ಉದ್ದೇಶಿತ ತಿದ್ದುಪಡಿಗಳು ಇಂಧನ ಸುರಕ್ಷತೆ, ವಿತರಣಾ ವ್ಯವಸ್ಥೆಯಲ್ಲಿ ಅಮೂಲಾಗ್ರಹ ಬದಲಾವಣೆ ತರಲಿವೆ. ಇಂಧನ ಸರಬರಾಜು ನಷ್ಟ ತಗ್ಗಿ ಇಂಧನ ಉಳಿತಾಯದ ಪ್ರಮಾಣ ಹೆಚ್ಚುತ್ತದೆ. ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಮುಂಬೈಯಲ್ಲಿ ಖಾಸಗಿ ಸಂಸ್ಥೆಗಳಿಂದ ವಿದ್ಯುತ್ ಸರಬರಾಜು ಪೂರೈಕೆ ಆಗುತ್ತಿದೆ. ಆದರೆ ಕೆಲವು ಕಾರಣಗಳಿಂದ ಅದು ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಇಂತಹ ಸಮಸ್ಯೆಗಳನ್ನು ಕಾನೂನಿಗೆ ತಿದ್ದುಪಡಿ ತರುವ ಮೂಲಕ ಬಗೆಹರಿಸಲು ಬಯಸಿದ್ದೇವೆ ಎಂದು ಆರ್.ಕೆ.ಸಿಂಗ್ ತಿಳಿಸಿದರು.

ನವೀಕರಿಸಬಹುದಾದ ಇಂಧನ ಮೂಲಗಳ ಒತ್ತಡದ ಹೊರತಾಗಿಯೂ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ತೆರವು ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್.ಕೆ.ಸಿಂಗ್, ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ವಿದ್ಯುತ್ ಸ್ಥಾವರಗಳು ಅತ್ಯಗತ್ಯ. ನವೀಕರಿಸಬಹುದಾದ ಇಂಧನ ಕ್ಷಮತೆ ಸಾಧ್ಯವಾದಾಗ ಕಲ್ಲಿದ್ದಲು ಸ್ಥಾವರಗಳ ಕಾರ್ಯನಿರ್ವಹಣೆ ಸ್ಥಗಿತಗೊಳ್ಳುತ್ತದೆ. ಇಲ್ಲದೇ ಇದ್ದರೆ ಇಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಅಲೋಕ್ ಕುಮಾರ್, ಹೆಚ್ಚುವರಿ ಕಾರ್ಯದರ್ಶಿ ಅಜಯ್ ತಿವಾರಿ, ಪಿಐಬಿ ಬೆಂಗಳೂರಿನ ಹೆಚ್ಚುವರಿ ಮಹಾ ನಿರ್ದೇಶಕ ಎಸ್.ಜಿ.ರವೀಂದ್ರ ಉಪಸ್ಥಿತರಿದ್ದರು.

Similar News